PTI
ನವದೆಹಲಿ: ಆರ್ಥಿಕವಾಗಿ ದುರ್ಬಲ ವರ್ಗದ (EWS)ವರಿಗೆ ನೀಟ್-ಪಿಜಿ (NEET-PG) ಪ್ರವೇಶದಲ್ಲಿ ಮೀಸಲಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ತು ವಿಚಾರಣೆಗೆ ಸಮಯ ನಿಗದಿಪಡಿಸುವಂತೆ ಕೇಂದ್ರ ಸರ್ಕಾರ ಇಂದು ಸೋಮವಾರ ಸುಪ್ರೀಂ ಕೋರ್ಟ್ ಮುಂದೆ ಮನವಿ ಮಾಡಿದೆ.
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಎಸ್ ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ, ಸರ್ಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತ ಅವರಿಗೆ ಇಡಬ್ಲ್ಯುಎಸ್ ಮೀಸಲಾತಿ ಪ್ರಕರಣದಲ್ಲಿ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಲಿದೆ ಎಂದು ಹೇಳಿದೆ.
ಇಂದಿನ ಕೋರ್ಟ್ ಕಲಾಪ ವ್ಯವಹಾರ ಮುಗಿಯುತ್ತಿದ್ದಂತೆ ಇಡಬ್ಲ್ಯುಎಸ್ ವಿಚಾರದ ಕೇಸನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿಗಳಾದ ಎನ್ ವಿ ರಮಣ ಅವರ ಮುಂದೆ ಮನವಿ ಮಾಡುತ್ತೇನೆ ಎಂದು ನ್ಯಾಯಮೂರ್ತಿಗಳಾದ ಚಂದ್ರಚೂಡ್ ಹೇಳಿದರು.
ನಾಳೆ ವಿಚಾರಣೆ ಕೈಗೆತ್ತಿಕೊಳ್ಳಲು ಸಾಧ್ಯವಾಗದಿದ್ದರೆ ನಾಡಿದ್ದಾದರೂ ವಿಚಾರಣೆ ನಡೆಸಿ ಎಂದು ಸರ್ಕಾರ ಪರ ವಕೀಲ ಸಾಲಿಸಿಟರ್ ಜನರಲ್ ಮೆಹ್ತ ಇಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡರು.
ಇಡಬ್ಲ್ಯುಎಸ್ ಕೋಟಾ ಜಾರಿ ಕುರಿತ ಸರ್ಕಾರಿ ಅಧಿಸೂಚನೆಯನ್ನು ಪ್ರಶ್ನಿಸಿರುವ ವೈದ್ಯರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಅರವಿಂದ ದಾತಾರ್, ನಾಳೆ ಮಂಗಳವಾರ ಅಥವಾ ಬುಧವಾರದಂದು ವಿಚಾರಣೆ ಕೈಗೆತ್ತಿಕೊಂಡರೆ ತಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು. ಪ್ರಸ್ತುತ ಪ್ರಕರಣವನ್ನು ಜನವರಿ 6 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ತೀರ್ಮಾನಿಸಿದೆ.
ಇದನ್ನೂ ಓದಿ: ನೀಟ್-ಪಿಜಿ ಕೌನ್ಸಿಲಿಂಗ್: ಇಡಬ್ಲ್ಯೂಎಸ್ ಎಂದು ನಿರ್ಧರಿಸಲು 8 ಲಕ್ಷ ಆದಾಯದ ಮಾನದಂಡ – ಕೇಂದ್ರ
EWS ಕೋಟಾದ ನಿರ್ಣಯದ ಮಾನದಂಡವನ್ನು ಮರುಪರಿಶೀಲಿಸಲು ಕೇಂದ್ರ ನಿರ್ಧರಿಸಿರುವುದರಿಂದ, NEET-PG ಕೌನ್ಸೆಲಿಂಗ್‌ನಲ್ಲಿನ ವಿಳಂಬದ ಬಗ್ಗೆ ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ (ಫೋರ್ಡಾ) ಬ್ಯಾನರ್‌ನಡಿಯಲ್ಲಿ ವಿವಿಧ ಆಸ್ಪತ್ರೆಗಳ ವಸತಿ ವೈದ್ಯರು ದೊಡ್ಡ ಪ್ರಮಾಣದ ಪ್ರತಿಭಟನೆಗಳನ್ನು ನಡೆಸಲು ತೀರ್ಮಾನಿಸಿದ್ದನ್ನು ಮುಂದೂಡಲಾಗಿದೆ.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಆರ್ಥಿಕವಾಗಿ ದುರ್ಬಲ ವರ್ಗಗಳ (EWS) ಪ್ರಸ್ತುತ ಒಟ್ಟು ವಾರ್ಷಿಕ ಕುಟುಂಬ ಆದಾಯದ ಮಿತಿಯನ್ನು 8 ಲಕ್ಷ ಅಥವಾ ಅದಕ್ಕಿಂತ ಕಡಿಮೆಯಲ್ಲಿ ಉಳಿಸಿಕೊಳ್ಳಲು ಮೂವರು ಸದಸ್ಯರ ಸಮಿತಿಯ ಶಿಫಾರಸುಗಳನ್ನು ಸ್ವೀಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಆರ್ಥಿಕವಾಗಿ ದುರ್ಬಲ ವರ್ಗಗಳ (EWS) ಕುಟುಂಬಗಳ ಪ್ರಸ್ತುತ ಒಟ್ಟು ವಾರ್ಷಿಕ ಆದಾಯದ ಮಿತಿಯನ್ನು 8 ಲಕ್ಷ ಅಥವಾ ಅದಕ್ಕಿಂತ ಕಡಿಮೆಯಲ್ಲಿ ಉಳಿಸಿಕೊಳ್ಳಲು ಮೂವರು ಸದಸ್ಯರ ಸಮಿತಿಯ ಶಿಫಾರಸುಗಳನ್ನು ಸ್ವೀಕರಿಸಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.