ಕರ್ನಾಟಕ ಮಾತ್ರವಲ್ಲದೆ, ದೇಶದ ಆರ್ಥಿಕತೆಯ ಬೆಳವಣಿಗೆಗೂ ನಿರ್ಣಾಯಕವಾಗಿರುವ ಬೆಂಗಳೂರಿನ ದಾಹ ತಣಿಸಲು ಉದ್ದೇಶಿತ ಮೇಕೆದಾಟು ಯೋಜನೆ ಸಹಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ 2017ರಲ್ಲಿ 5,912 ಕೋಟಿ ರೂ. ಅಂದಾಜು ವೆಚ್ಚವಾಗುತ್ತಿದ್ದ ಈ ಯೋಜನೆಗೆ ಈಗಿನ ಮೊತ್ತ 9,000 ಕೋಟಿ ರೂ. ದಾಟಿದೆ. ಇದೇ ರೀತಿ ವಿಳಂಬವಾಗುತ್ತಿದ್ದರೆ, ವೆಚ್ಚವೂ ಅನೂಹ್ಯವಾಗಿ ಹೆಚ್ಚಲಿದೆ. ಜತೆಗೆ ಮೇಕೆದಾಟು ಕೇವಲ ರಾಜ್ಯದ ಸರಹದ್ದಿಗೆ ಸೀಮಿತವಾದ ಯೋಜನೆಯಲ್ಲ. ಇದಕ್ಕೂ ಅಂತರಾಜ್ಯ ಜಲ ವಿವಾದಕ್ಕೂ ನಂಟಿದೆ. ಪಕ್ಕದ ತಮಿಳುನಾಡು ಅಡಿಗಡಿಗೆ ತೊಡರುಗಾಲು ಹಾಕುತ್ತಿದೆ. ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪನವರು ಮಾತುಕತೆಗೆ ಆಹ್ವಾನಿಸಿದ್ದರೂ, ಅದು ಒಪ್ಪಿರಲಿಲ್ಲ.
ವಾಸ್ತವವಾಗಿ ಮೇಕೆದಾಟು ಯೋಜನೆಯಿಂದ ಉಭಯ ರಾಜ್ಯಗಳಿಗೆ ಪ್ರಯೋಜನವೇ ಆಗಲಿದೆಯೇ ಹೊರತು ನಷ್ಟವಾಗುವ ಪ್ರಮೇಯವಿಲ್ಲ. ಅಲ್ಲಿಗೆ ಕೊಡಬೇಕಾದ ನೀರನ್ನು ಕೊಡಲೇಬೇಕಾಗುತ್ತದೆ. ಕೆಲ ನೀರಾವರಿ ತಜ್ಞರ ಪ್ರಕಾರ, ಕಾವೇರಿ ನದಿಯಲ್ಲಿ ಸಿಗುವ ಹೆಚ್ಚುವರಿ ನೀರನ್ನು ಈಗಾಗಲೇ ಅನಧಿಕೃತವಾಗಿ ಬಳಸುತ್ತಿರುವ ತಮಿಳುನಾಡಿಗೆ, ಮೇಕೆದಾಟು ಯೋಜನೆಯಿಂದ ಅದು ತಪ್ಪುವ ಆತಂಕ ಕಾಡುತ್ತಿದೆ. ಇರಲಿ, ಆದರೆ ಇಷ್ಟಕ್ಕೇ ವಿಷಯ ಮುಗಿದಿಲ್ಲ. ಈ ಯೋಜನೆಯ ಜಾರಿಗೆ ಮುನ್ನ ಹಲವಾರು ಅನುಮೋದನೆಗಳು ಇನ್ನೂ ಸಿಗಬೇಕಾಗಿದೆ. ಅದಕ್ಕಾಗಿ ರಾಜ್ಯ ಸರಕಾರ ಕಾಯುತ್ತಿದೆ.
ವಾಸ್ತವವಾಗಿ ಮೇಕೆದಾಟು ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ಎಂದು 2018ರ ನವೆಂಬರ್ 22ರಂದು ಸೂಚಿಸಿದ್ದು ಕೇಂದ್ರ ಜಲ ಆಯೋಗ. ಇದನ್ನು ತಮಿಳುನಾಡು ಬಲವಾಗಿ ವಿರೋಧಿಸಿತ್ತು. ಹಾಗೂ ಅಷ್ಟೇ ರಭಸದಲ್ಲಿ, ಕೇವಲ ಒಂದೇ ವಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಜಲ ಆಯೋಗದ ಅನುಮತಿಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿತ್ತು. ಇದಕ್ಕೆ ಪ್ರತಿಯಾಗಿ ಕೇಂದ್ರ ಸರಕಾರ ಕೂಡ ಪ್ರಮಾಣಪತ್ರ ಸಲ್ಲಿಸಿತ್ತು. ಇದೆಲ್ಲವೂ ಕರ್ನಾಟಕಕ್ಕೆ ಪೂರಕವಾದ ವಿದ್ಯಮಾನಗಳಾಗಿತ್ತು. ಆದರೆ ತಮಿಳುನಾಡು ಸರಕಾರ ಎಷ್ಟೊಂದು ಅಸಹಕಾರ ತೋರಿಸುತ್ತಿದೆ ಎಂಬುದಕ್ಕೆ ಮೇಕೆದಾಟು ಮತ್ತೊಂದು ಸಾಕ್ಷಿ.
ನೋಡಿ, ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಆದೇಶದ ಪ್ರಕಾರ ಉದ್ದೇಶಿತ ಮೇಕೆದಾಟುವಿನಿಂದ ತಮಿಳುನಾಡಿಗೆ ಹೋಗಬೇಕಾದ ಮಾಸಿಕ ನೀರಿನ ಪ್ರಮಾಣ ಹರಿಯಲಿದೆ. ಅದಕ್ಕೇನೂ ತೊಂದರೆಯಾಗುವುದಿಲ್ಲ. ಹಾಗೆ ಹೋಗುವ ನೀರಿನಿಂದ ವಿದ್ಯುತ್ ಉತ್ಪಾದಿಸುವುದು ತಪ್ಪೇ? ತಮಿಳುನಾಡಿನ ಮೆಟ್ಟೂರು ಅಣೆಕಟ್ಟೆಗೆ ವರ್ಷಕ್ಕೆ 177.25 ಟಿಎಂಸಿ ಕಾವೇರಿ ನೀರನ್ನು ಸಾಮಾನ್ಯ ಪರಿಸ್ಥಿತಿಯಲ್ಲಿ ಕರ್ನಾಟಕ ಬಿಡಬೇಕಾಗುತ್ತದೆ. ಅದಕ್ಕೂ ಮೇಕೆದಾಟುವಿನಿಂದಾಗಿ ಅಡ್ಡಿಯಾಗುವುದಿಲ್ಲ. ಆದರೂ ತಮಿಳುನಾಡು ಸರಕಾರದ ತಗಾದೆ ಮುಗಿಯದಿರುವುದು ಒಕ್ಕೂಟ ಸಹಕಾರ ವ್ಯವಸ್ಥೆಯ ಮೌಲ್ಯಗಳಿಗೆ ಅಪಚಾರವೇ ಸರಿ.
ತಮಿಳುನಾಡು ಸರಕಾರದ ಕೃತಘ್ನತೆಗೆ ಅದು ಹೊಗೇನಕಲ್‌ನಲ್ಲಿ ಅನುಷ್ಠಾನಗೊಳಿಸಿರುವ ನೀರಾವರಿ ಯೋಜನೆಯೇ ನಿದರ್ಶನ. ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳ ಅನುಕೂಲಕ್ಕಾಗಿ ಹೊಗೇನಕಲ್‌ನಲ್ಲಿ ಜಲಾಶಯ ಯೋಜನೆ ಹಮ್ಮಿಕೊಂಡಿರುವ ತಮಿಳುನಾಡು ಸರಕಾರ, ಕರ್ನಾಟಕದ ಮೇಕೆದಾಟುವಿಗೆ ಮಾತ್ರ ಹೊಗೆ ಹಾಕಲು ಯತ್ನಿಸುತ್ತಿರುವುದು ವಿಶ್ವಾಸ ದ್ರೋಹವಲ್ಲವೇ?
ಹಾಗಾದರೆ ಮೇಕೆದಾಟು ಯೋಜನೆಯ ಜಾರಿಗೆ ಸವಾಲಾಗಿರುವುದೇನು? ವಿಳಂಬವಾಗುತ್ತಿರುವುದೇಕೆ ಎಂಬುದನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿದರೆ, ಕಳೆದ 4 ವರ್ಷಗಳಿಂದ ತಮಿಳುನಾಡಿನ ಪ್ರಬಲ ವಿರೋಧದ ಪರಿಣಾಮ ಕೇಂದ್ರ ಸರಕಾರದ ನಾನಾ ಸಚಿವಾಲಯಗಳು ಮತ್ತು ಏಜೆನ್ಸಿಗಳಿಂದ ಎಲ್ಲ ಅನುಮೋದನೆಗಳು ಇನ್ನೂ ಸಿಕ್ಕಿಲ್ಲ. ಕರ್ನಾಟಕದಿಂದ ವಿಸ್ತೃತ ಯೋಜನಾ ವರದಿ ಅಥವಾ ಡಿಪಿಆರ್ ಸಲ್ಲಿಕೆಯಾಗಿದ್ದರೂ, ಅದಕ್ಕೆ ಕೇಂದ್ರ ಜಲ ಆಯೋಗದ ಅನುಮೋದನೆ ಲಭಿಸಿಲ್ಲ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿ ದೊರೆತಿಲ್ಲ. 5,050 ಹೆಕ್ಟೇರ್ ಅರಣ್ಯ ಭೂಮಿಯ ಬಳಕೆಗೆ ಅನುಮೋದನೆ ಸಿಗಬೇಕಾಗಿದೆ. ಇದೊಂದು ಸುದೀರ್ಘ ಪ್ರಕ್ರಿಯೆ. ಹಲವಾರು ಇಲಾಖೆಗಳನ್ನು ಹಾದು ಹೋಗಬೇಕಾದ ಕಸರತ್ತು. ನಂತರವಷ್ಟೇ ಸರಕಾರ ಭೂಸ್ವಾಧೀನ ಸೇರಿದಂತೆ ಯೋಜನೆಯ ಮುಂದಿನ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯ.
ಕಾವೇರಿಯ ಹೆಚ್ಚುವರಿ 4.5 ಟಿಎಂಸಿ ನೀರನ್ನು ಬೆಂಗಳೂರಿನ ಕುಡಿಯುವ ನೀರಿನ ಪೂರೈಕೆಗೆ ಒದಗಿಸಲು ಸಾಧ್ಯ. ಆದರೆ ಅಗತ್ಯ ಅನುಮೋದನೆಗಳನ್ನು ಪಡೆಯುವಲ್ಲಿ ತಪ್ಪಿದರೆ ಹದ್ದಿನ ಕಣ್ಣಿನಲ್ಲಿ ನೋಡುತ್ತಿರುವ ತಮಿಳುನಾಡು ಸುಮ್ಮನಿದ್ದೀತೇ? ಈಗಾಗಲೇ ಅದು ಮೇಕೆದಾಟು ವಿಚಾರದಲ್ಲಿ ಕಾನೂನು ಸಮರ ಹೂಡಿದೆ. ಆದ್ದರಿಂದ ಪಾದಯಾತ್ರೆಯಿಂದ ರಾಜಕೀಯ ಲಾಭದ ಲೆಕ್ಕಾಚಾರ ಮಾತ್ರ ಸಾಧ್ಯ. ಯಥಾರ್ಥವಾಗಿ ಯೋಜನೆಯ ಅನುಷ್ಠಾನಕ್ಕೆ ಆಗಬೇಕಾಗಿರುವ ಕೆಲಸಗಳೇ ಬೇರೆ ಎಂಬುದನ್ನು ಮರೆಯುವಂತಿಲ್ಲ.
“ಯಾವುದೇ ನೀರಾವರಿ ಯೋಜನೆ 2-3 ವರ್ಷಗಳ ಕಾಲಮಿತಿಯೊಳಗೆ ಅನುಷ್ಠಾನವಾದರೆ ನಿಗದಿತ ವೆಚ್ಚದಲ್ಲಿ ಪೂರ್ಣವಾಗುತ್ತದೆ. ನಂತರವೂ ಆಗದಿದ್ದರೆ ದುಬಾರಿಯಾಗಿ ಪರಿಣಮಿಸುತ್ತದೆ” ಎನ್ನುತ್ತಾರೆ ನೀರಾವರಿ ತಜ್ಞ ಬಂಗಾರುಸ್ವಾಮಿ. ಆದರೆ ರಾಜಕೀಯ ಮೇಲಾಟ, ಭ್ರಷ್ಟಾಚಾರ, ದಕ್ಷತೆಯ ಕೊರತೆ, ಹಣಕಾಸು ಸಂಪನ್ಮೂಲದ ಅಭಾವ, ಇತ್ಯಾದಿ ಹಲವಾರು ಕಾರಣಗಳಿಂದ ಬೃಹತ್ ನೀರಾವರಿ ಯೋಜನೆಗಳ ವೆಚ್ಚ ಗಗನಕ್ಕೇರುತ್ತದೆ. ಇದಕ್ಕೆ ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ ಯೋಜನೆಯೇ ಇತ್ತೀಚಿನ ನಿದರ್ಶನ. ಎತ್ತಿನ ಹೊಳೆ ಯೋಜನೆಗೆ 2008ರಲ್ಲಿ ಅಂದಾಜಿಸಿದ್ದ ವೆಚ್ಚ 8,000 ಕೋಟಿ ರೂ.ಗಳಾಗಿತ್ತು. ಕಳೆದ ಒಂದೂವರೆ ದಶಕದಲ್ಲಿ ಇದರ ವೆಚ್ಚ 20,000 ಕೋಟಿ ರೂ.ಗೆ ಜಿಗಿದಿದೆ! ಭೂಸ್ವಾಧೀನ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುವುದೂ ಇದಕ್ಕೆ ಮತ್ತೊಂದು ಕಾರಣ.
ಮಧ್ಯ ಕರ್ನಾಟಕದ ರೈತರಿಗೆ ಅನುಕೂಲ ಮಾಡಿಕೊಡಲಿರುವ ಭದ್ರಾ ಮೇಲ್ದಂಡೆ ಯೋಜನೆಯ ದಾರುಣ ಕಥೆ ಕೇಳಲೇಬೇಕು. ಎರಡು ದಶಕಗಳ ಹಳೆಯ ಯೋಜನೆಯಿದು. ಚಿತ್ರದುರ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರಿನ ಕೆಲ ಭಾಗ ಸೇರಿದಂತೆ 2.25 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುವ ಯೋಜನೆ. 2003ರಲ್ಲಿ ಇದರ ಅಂದಾಜು ವೆಚ್ಚ 2,813 ಕೋಟಿ ರೂ. ಆಗಿತ್ತು. ಆದರೆ ಭೂ ಸ್ವಾಧೀನ ವಿವಾದಗಳು, ಅರಣ್ಯ ಇಲಾಖೆಯ ಅನುಮೋದನೆಯಲ್ಲಿ ವಿಳಂಬದ ಹಿನ್ನೆಲೆಯಲ್ಲಿ ಈಗ ಅದರ ಅಂದಾಜು ವೆಚ್ಚ ಬರೋಬ್ಬರಿ 21,450 ಕೋಟಿ ರೂ.ಗೆ ಜಿಗಿದಿದೆ. ಅದೃಷ್ಟವಶಾತ್ ಕೇಂದ್ರ ಸರಕಾರ ಭದ್ರಾ ಮೇಲ್ದಂಡೆಯನ್ನು “ರಾಷ್ಟ್ರೀಯ ಯೋಜನೆ” ಎಂದು ಘೋಷಿಸುತ್ತಿದೆ. ಇದರ ಪರಿಣಾಮ ನಿಧಿಯ ಕೊರತೆಯನ್ನು ಕೇಂದ್ರ ಸರಕಾರವೇ ಭರಿಸಲಿದೆ. ಒಟ್ಟು 16,125 ಕೋಟಿ ರೂ.ಗಳನ್ನು ಕೇಂದ್ರವೇ ನೀಡಲಿದೆ.
ಬೃಹತ್ ನೀರಾವರಿ ಯೋಜನೆಗಳನ್ನು ಘೋಷಿಸುವುದು ಮತ್ತು ಆರಂಭಿಸುವುದು ಸುಲಭ. ಆದರೆ ಅದನ್ನು ಪೂರ್ಣಗೊಳಿಸುವುದು ಖಂಡಿತ ಸುಲಭವಲ್ಲ. ಅದಕ್ಕೆ ಪ್ರಬಲ ಇಚ್ಚಾ ಶಕ್ತಿ, ಸಂಪನ್ಮೂಲದ ಕ್ರೋಢೀಕರಣ, ವೃತ್ತಿಪರತೆ, ಹಲವು ಇಲಾಖೆಗಳ ಸಮನ್ವಯ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಸರ್ವ ಪಕ್ಷಗಳ ಸಹಕಾರ, ಮುಂದಾಲೋಚನೆ, ಜನಹಿತ ದೃಷ್ಟಿ ಅತ್ಯವಶ್ಯ. ನಮ್ಮ ಕಣ್ಣಾರೆ ಇದು ಢಾಳಾಗಿ ಕಾಣುತ್ತಿದೆ.
ತೆಲಂಗಾಣದಲ್ಲಿ ಇತ್ತೀಚಿಗೆ ಭಾರಿ ಸದ್ದು ಮಾಡಿರುವ ಕಾಳೇಶ್ವರಂ ಏತ ನೀರಾವರಿ ಯೋಜನೆ ಏಷ್ಯಾದಲ್ಲಿಯೇ ಅತಿ ದೊಡ್ಡದು ಎಂಬ ಕೀರ್ತಿಗೆ ಪಾತ್ರವಾಗಿದೆ. 80 ಸಾವಿರ ಕೋಟಿ ರೂ.ಗಳ ಇಂಥ ಯೋಜನೆಯನ್ನು ಯಾವುದೇ ರಾಜ್ಯ ಸರಕಾರ ಇದುವರೆಗೆ ಕೈಗೊತ್ತಿಕೊಂಡಿಲ್ಲ. 2016ರಲ್ಲಿ ಇದರ ನಿರ್ಮಾಣ ಶುರುವಾಯಿತು. ತೆಲಂಗಾಣದ ತಗ್ಗು ಪ್ರದೇಶದಲ್ಲಿ ಹರಿಯುವ ಗೋದಾವರಿ ನದಿಯ ನೀರನ್ನು ಬಲಾಢ್ಯ ಪಂಪ್‌ಗಳ ಮೂಲಕ ಮೇಲಕ್ಕೆತ್ತಿ 13 ಜಿಲ್ಲೆಗಳ 18 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸುವ ವಿರಾಟ್ ಯೋಜನೆಯಿದು. ಕಾಳೇಶ್ವರಂ ಬಳಿಯಿಂದ ಗೋದಾವರಿ ನದಿಯಿಂದ 180 ಟಿಎಂಸಿ ನೀರನ್ನು ಬೃಹತ್ ಪಂಪ್‌ಗಳ ಮೂಲಕ ಎತ್ತರದ ಬರಪೀಡಿತ ಪ್ರದೇಶಗಳಿಗೆ ಹರಿಸುವುದು, ಪ್ರತಿ ದಿನ 3 ಟಿಎಂಸಿ ನೀರನ್ನು ಪಂಪ್‌ಗಳ ಮೂಲಕ ಸೆಳೆಯುವುದು ಅತ್ಯಂತ ರೋಚಕ ಸಾಹಸ. ತಮಾಷೆ ಏನೆಂದರೆ ಆರಂಭದಲ್ಲಿ ಜಂಭದಿಂದ ಕಾಳೇಶ್ವರಂ ಯೋಜನೆ ಬಗ್ಗೆ ಬೀಗುತ್ತಿದ್ದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ನೇತೃತ್ವದ ರಾಜ್ಯ ಸರಕಾರ, ಈಗ ಕಾಳೇಶ್ವರಂ ಯೋಜನೆಗೆ “ರಾಷ್ಟ್ರೀಯ ಯೋಜನೆ’ಯ ಮಾನ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಒತ್ತಾಯಿಸಿದೆ.
“ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡಿರುವ ಕೇಂದ್ರ ಸರಕಾರ, ಕಾಳೇಶ್ವರಂಗೂ ಅದೇ ಮಾನ್ಯತೆ ಕೊಡಬಾರದೇ?” ಎಂದು ಅಲ್ಲಿನ ಕೈಗಾರಿಕೆ ಮತ್ತು ಐಟಿ ಸಚಿವ ಕೆ.ಟಿ. ರಾಮ ರಾವ್ ಅಹವಾಲು ಹೇಳಿದ್ದಾರೆ. ಆದರೆ ಕಾಳೇಶ್ವರಂ ಯೋಜನೆಯ ಬೃಹತ್ ವೆಚ್ಚ ಈಗಾಗಲೇ ತೆಲಂಗಾಣ ಸರಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ರಾಷ್ಟ್ರೀಯ ಯೋಜನೆಯ ಮಾನ್ಯತೆ ಗಳಿಸಿದರೆ, ಸಾವಿರಾರು ಕೋಟಿ ರೂ. ಪಡೆಯಬಹುದು ಎಂಬುದು ಅಸಲು ಲೆಕ್ಕಾಚಾರ. ಮುಖ್ಯಮಂತ್ರಿ ಕೆ.ಸಿ.ರಾವ್, ಕಾಳೇಶ್ವರಂ ಯೋಜನೆ ತಮ್ಮ ಕನಸಿನ ಕೂಸು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆದರೆ ಅದರ ಖರ್ಚನ್ನು ನಿರ್ವಹಿಸುವುದು ಹೇಗೆ ಎಂದು ಗೊತ್ತಾಗದೆ ಕೇಂದ್ರದತ್ತ ಬೊಟ್ಟು ಮಾಡುತ್ತಿರುವುದು ವರ್ತಮಾನ.
ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು 14 ಲಕ್ಷ ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಕಲ್ಪಿಸುವ ಸರಯೂ ನಹರ್ ರಾಷ್ಟ್ರೀಯ ಕಾಲುವೆ ಯೋಜನೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಬರೋಬ್ಬರಿ 40 ವರ್ಷಗಳ ಹಿಂದೆಯೇ ಇದಕ್ಕೆ ಶಂಕುಸ್ಥಾಪನೆಯಾಗಿದ್ದರೂ, ಕೊನೆ ಮುಟ್ಟಿರಲಿಲ್ಲ. ಆದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಕೇವಲ ನಾಲ್ಕೇ ವರ್ಷಗಳಲ್ಲಿ ಸರಯೂ ಯೋಜನೆಯನ್ನು 9,800 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿತ್ತು. ಗುಜರಾತ್‌ನಲ್ಲಿ ನರ್ಮದಾ ಸರೋವರ್ ಅಣೆಕಟ್ಟೆ ಯೋಜನೆಗೆ 1961ರಲ್ಲಿ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಅದನ್ನು ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡಲು 56 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿಯವರೇ ಬರಬೇಕಾಯಿತು.
ಜವಹರಲಾಲ್ ನೆಹರೂ, ಅಣೆಕಟ್ಟೆಗಳನ್ನು ಆಧುನಿಕ ಭಾರತದ ದೇವಾಲಯಗಳು ಎಂದೇ ಕರೆಯುತ್ತಿದ್ದರು. ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಕೃಷ್ಣಾ ನದಿಗೆ ಬೃಹತ್ ನಾಗಾರ್ಜುನ ಸಾಗರ ಅಣೆಕಟ್ಟೆ ಯೋಜನೆಯನ್ನು ಅವರೇ ಆಸ್ಥೆಯಿಂದ ಉದ್ಘಾಟಿಸಿದ್ದರು. 1955 ಮತ್ತು 1967ರ ತನಕ 12 ವರ್ಷಗಳೊಳಗೆ ಪೂರ್ಣವಾದ, 490 ಅಡಿ ಎತ್ತರದ ಭವ್ಯ ಅಣೆಕಟ್ಟೆಯ ಯಶೋಗಾಥೆ ಸ್ಪೂರ್ತಿದಾಯಕ. ಈ ಅಣೆಕಟ್ಟೆ ಕಟ್ಟುವ ಸಂದರ್ಭ ರಾಜ್ಯ ಸರಕಾರದ ಹಣಕಾಸಿನಲ್ಲಿ ಹೆಚ್ಚಿನ ಪಾಲನ್ನು ಇದಕ್ಕೆಂದೇ ಮೀಸಲಿಡಲಾಗಿತ್ತು. ಹಲವಾರು ಜನಪ್ರಿಯ ಯೋಜನೆಗಳಿಗೆ ತಾತ್ಕಾಲಿಕವಾಗಿ ನೆರವು ಸ್ಥಗಿತಗೊಳಿಸಲಾಗಿತ್ತು ಎನ್ನುತ್ತಾರೆ ನೀರಾವರಿ ತಜ್ಞರು.
ಇಂಥ ಪೂರ್ವ ಸಿದ್ಧತೆ, ಆದ್ಯತೆಗಳು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಅವಶ್ಯಕ. ಮೇಕೆದಾಟು ಕೂಡ ವಿಳಂಬಿತ ಯೋಜನೆಯಾಗಿ ಹೊರೆಯಾಗದಿರಲಿ, ಸರ್ವಪಕ್ಷಗಳೂ, ಉಭಯ ರಾಜ್ಯಗಳೂ ಸಂಘಟಿತವಾಗಿ ಯೋಜನೆಯ ಸದ್ಬಳಕೆ ಮಾಡಿಕೊಳ್ಳಿ, ಬೆಂಗಳೂರು ಮತ್ತು ಸುತ್ತಲಿನ ಜಿಲ್ಲೆಗಳಿಗೆ ಅನುಕೂಲವಾಗಲಿ, ಬಾಕಿ ಉಳಿದಿರುವ ರಾಜ್ಯದ ಇತರ ನೀರಾವರಿ ಯೋಜನೆಗಳೂ ಈಡೇರಲಿ ಎಂಬುದು ಸಾರ್ವಜನಿಕರ ಆಶಯ.