Karnataka news paper

ಹೊಸ ವರ್ಷದ ಮೋಜಿಗೆ ಬೆಲೆ ತೆತ್ತ ಗೋವಾ: ಪಾಸಿಟಿವಿಟಿ ದರ ಶೇ.10, ಶಾಲೆಗಳು ಬಂದ್‌, ನೈಟ್‌ ಕರ್ಫ್ಯೂ ಜಾರಿ


ಹೈಲೈಟ್ಸ್‌:

  • ಮೋಜಿಗೆ ಬೆಲೆ ತೆತ್ತ ಗೋವಾ; ಭಾರೀ ಪ್ರಮಾಣದಲ್ಲಿ ಕೋವಿಡ್‌ ಕೇಸ್‌ ದಾಖಲು
  • ಶಾಲೆಗಳು ಬಂದ್‌, ಶೀಘ್ರದಲ್ಲೇ ನೈಟ್ ಕರ್ಫ್ಯೂ ಜಾರಿ: ಗೋವಾ ಸರ್ಕಾರ
  • ಹೊಸ ವರ್ಷ, ಕ್ರಿಸ್ಮಸ್‌ ಪಾರ್ಟಿ ವೇಳೆ ಕೋವಿಡ್‌ ಮರೆತು ಜನ ಜಂಗುಳಿ

ಪಣಜಿ: ಹೊಸ ವರ್ಷಾಚರಣೆಗೆ ಪ್ರವಾಸಿಗರಿಗೆ ಯಾವುದೇ ನಿರ್ಬಂಧ ಹೇರದಿದ್ದ ಗೋವಾ ಈಗ ಅದಕ್ಕೆ ತಕ್ಕ ಬೆಲೆ ತೆರುವಂತಾಗಿದೆ. ಕಳೆದೆರಡು ದಿನಗಳಿಂದ ಗೋವಾದಲ್ಲಿ ಭಾರೀ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ದಾಖಲಾಗಿವೆ.

ಸೋಮವಾರ ಗೋವಾದಲ್ಲಿ 388 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಸಣ್ಣ ರಾಜ್ಯದಲ್ಲಿ ಇದೀಗ ಒಟ್ಟು ಸೋಂಕಿತರ ಸಂಖ್ಯೆ 1,671ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ದರ ಶೇ. 10 ಕ್ಕಿಂತ ಹೆಚ್ಚಿದ್ದು, ಅಲ್ಲಿನ ಸರ್ಕಾರಕ್ಕೆ ಹೊಸ ತಲೆ ಬೇನೆ ಶುರುವಾಗಿದೆ. ಸೋಮವಾರ ಶೇ. 10.7 ರಷ್ಟು ಪಾಸಿಟಿವಿಟಿ ದರ ದಾಖಲಾಗಿದೆ.

ಡಿಸೆಂಬರ್ ಬಳಿಕ ಕ್ರಿಸ್ಮಸ್‌, ಹೊಸ ವರ್ಷಾಚರಣೆಗೆ ಭಾರೀ ಪ್ರಮಾಣದಲ್ಲಿ ಗೋವಾಗೆ ಪ್ರವಾಸಿಗರು ಹರಿದು ಬಂದಿದ್ದರು. ಯಾವುದೇ ಕೊರೊನಾ ನಿಯಮ ಪಾಲನೆಯಾಗದೇ ಪ್ರವಾಸಿಗರು ಬೇಕಾಬಿಟ್ಟಿ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದರು. ಇದೀಗ ಅದರ ಫಲ ಕಾಣುತ್ತಿದ್ದು, ಭಾರೀ ಪ್ರಮಾಣದಲ್ಲಿ ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿವೆ. ಭಾನುವಾರವೂ ಶೇ. 10.7 ರಷ್ಟು ಪಾಸಿಟಿವಿಟಿ ಪ್ರಮಾಣ ದಾಖಲಾಗಿದೆ.

ಶಾಲಾ ಕಾಲೇಜುಗಳು ಬಂದ್, ಕಚೇರಿಗಳಲ್ಲಿ ಶೇ 50ರಷ್ಟು ಅವಕಾಶ: ಬಂಗಾಳದಲ್ಲಿ ಮತ್ತೆ ನಿರ್ಬಂಧ
ಇನ್ನೂ ಗೋವಾದಲ್ಲಿ ಪ್ರವಾಸಿಗರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇದ್ದು ಜನವರಿ 5 ರವರೆಗೆ ಅಲ್ಲಿ ಪ್ರವಾಸಸಿಗರ ದಂಡೇ ಇರಲಿದೆ. ಭಾನುವಾರ ಉತ್ತರ ಗೋವಾದ ಪ್ರದೇಶವೊಂದರಲ್ಲಿ ಭಾರೀ ಪ್ರಮಾಣದಲ್ಲಿ ಜನ ಜಮಾಯಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಅಗಿತ್ತು.

ಇದನ್ನು ಹಂಚಿಕೊಂಡಿದ್ದ ಟ್ವಿಟ್ಟರ್‌ ಬಳಕೆದಾರರೊಬ್ಬರು, ‘ಕೋವಿಡ್‌ನ ಮತ್ತೊಂದು ಅಲೆಗೆ ಭವ್ಯ ಸ್ವಾಗತ ಕೋರಲಾಗುತ್ತಿದೆ’ ಎಂದು ವ್ಯಂಗ್ಯವಾಡಿದ್ದರು. ಈ ವಿಡಿಯೋದಲ್ಲಿ ಸಾವಿರಾರು ಮಂದಿ ಮಾಸ್ಕ್‌, ದೈಹಿಕ ಅಂತರ ಇಲ್ಲದೇ ಇರುವುದು ಕಂಡು ಬಂದಿತ್ತು.

ಏತನ್ಮಧ್ಯೆ ಶಾಲಾ ಕಾಲೇಜುಗಳನ್ನು ಜನವರಿ 26 ರ ವರೆಗೆ ಬಂದ್‌ ಮಾಡಿ ಅಲ್ಲಿನ ಸರ್ಕಾರ ಅದೇಶಿಸಿದೆ. ‘8 ಮತ್ತು 9 ನೇ ಕ್ಲಾಸುಗಳ ಭೌತಿಕ ತರಗತಿಯನ್ನು ಜನವರಿ 26 ರ ವರೆಗೆ ಬಂದ್‌ ಮಾಡಲಾಗಿದೆ’ ಎಂದು ಗೋವಾದ ಕೋವಿಡ್‌ ಟಾಸ್ಕ್‌ ಫೋರ್ಸ್‌ ಸದಸ್ಯ ಶೇಖರ್‌ ಸಲ್ಕಾರ್‌ ಹೇಳಿದ್ದಾರೆ.

ಅಲ್ಲದೇ ಕೋವಿಡ್‌ ವ್ಯಾಕ್ಸಿನ್‌ ಪಡೆಯಲೋಸುಗ 11 ಹಾಗೂ 12ನೇ ತರಗತಿಯಯ ಮಕ್ಕಳನ್ನು ಶಾಲೆಗೆ ಬರಲು ನಿರ್ದೇಶಿಸಲಾಗಿದೆ. ವ್ಯಾಕ್ಸಿನ್‌ ಪಡೆದ ಬಳಿಕ ಜನವರಿ 26 ರ ವರೆಗೆ ಅವರಿಗೂ ಶಾಲೆ ಬರಲು ಕಡ್ಡಾಯ ಇಲ್ಲ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ 1700ಕ್ಕೆ ತಲುಪಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ : ಒಂದೇ ದಿನದಲ್ಲಿ 33,750 ಕೊರೊನಾ ಕೇಸ್
ಜತೆಗೆ ಏಕಾಏಕಿ ಕೋವಿಡ್‌ ಏರಿಕೆಗೆ ಬೆದರಿರುವ ಅಲ್ಲಿನ ಸರ್ಕಾರ, ನೈಟ್‌ ಕರ್ಫ್ಯೂ ವಿಧಿಸುವ ಬಗ್ಗೆ ಅಲೋಚನೆ ನಡೆಸಿದೆ. ಪ್ರತೀ ದಿನ ರಾತ್ರಿ 11 ರಿಂದ ಮುಂಜಾನೆ 6 ರ ವರೆಗೆ ನೈಟ್‌ ಕರ್ಫ್ಯೂ ವಿಧಿಸುವುದಾಗಿ ಸರ್ಕಾರ ಹೇಳಿದ್ದು, ಶೀಘ್ರವೇ ಅಧಿಕೃತ ಆದೇಶ ಹೊರ ಬೀಳಲಿದೆ.

ಇತರ ಜತೆಗೆ ಇನ್ನೂ ಹಲವು ನಿರ್ಬಂಧಗಳೂ ಕೂಡ ಅಲ್ಲಿ ಜಾರಿಯಾಗುವುದು ನಿಚ್ಚಳವಾಗಿದ್ದು, ಒಳಾಂಗಣ ಚಟುವಟಿಕೆಗಳಿಗೆ ನಿಷೇಧ ಬೀಳಲಿದೆ.

ಶೇ.5 ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವಲ್ಲಿ ಕಠಿಣ ನಿರ್ಬಂಧ ವಿಧಿಸುವ ಅವಕಾಶ ಇದ್ದು, ನ್ಯೂ ಇಯರ್‌ ಪಾರ್ಟಿ ಹೆಸರಲ್ಲಿ ಕುಣಿದು ಕುಪ್ಪಳಿಸಿದ್ದ ಗೋವಾ ಸದ್ಯದಲ್ಲೇ ಲಾಕ್‌ ಆಗಲಿದೆ.



Read more