Karnataka news paper

ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್‌ಬರ್ಗ್‌ ಟೆಸ್ಟ್‌ನಲ್ಲಿ ಕನ್ನಡಿಗರದೇ ಹವಾ!


ಹೈಲೈಟ್ಸ್‌:

  • ರಾಹುಲ್‌ ದ್ರಾವಿಡ್‌ ಮಾರ್ಗದರ್ಶನದ ಭಾರತ ಟೆಸ್ಟ್‌ ತಂಡಕ್ಕೆ ಕೆ.ಎಲ್‌ ರಾಹುಲ್‌ ನಾಯಕ.
  • ಭಾರತ ಟೆಸ್ಟ್‌ ತಂಡವನ್ನು ಮುನ್ನಡೆಸುತ್ತಿರುವ 34ನೇ ಆಟಗಾರ ಎಂಬ ಕೀರ್ತಿಗೆ ರಾಹುಲ್‌ ಭಾಜನರಾಗಿದ್ದಾರೆ.
  • ದೀರ್ಘಾವಧಿ ಸ್ವರೂಪದಲ್ಲಿ ಭಾರತ ತಂಡವನ್ನು ಮುನ್ನಡೆಸಿದ ನಾಲ್ಕನೇ ಕನ್ನಡಿಗ ಕೆ.ಎಲ್‌ ರಾಹುಲ್.

ಜೊಹಾನ್ಸ್‌ಬರ್ಗ್‌: ಜೊಹಾನ್ಸ್‌ಬರ್ಗ್‌ನ ವಾಂಡರರ್ಸ್ ಮೈದಾನದಲ್ಲಿ ಇಂದಿನಿಂದ(ಸೋಮವಾರ) ಆರಂಭವಾಗಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿ ಕಾದಾಟ ನಡೆಸುತ್ತಿವೆ. ಅಂದಹಾಗೆ, ಗಾಯಾಳು ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಆರಂಭಿಕ ಕೆ.ಎಲ್‌ ರಾಹುಲ್‌ಗೆ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌, ನಾಯಕ ಕೆ.ಎಲ್‌ ರಾಹುಲ್‌ ಹಾಗೂ ಆರಂಭಿಕ ಮಯಾಂಕ್‌ ಅಗರ್ವಾಲ್‌ ಈ ಮೂವರು ಕನ್ನಡಿಗರೇ ಆಗಿರುವುದರಿಂದ ಎರಡನೇ ಟೆಸ್ಟ್‌ ಪಂದ್ಯ ವಿಶೇಷತೆಯಿಂದ ಕೂಡಿದೆ. ಬೆನ್ನು ನೋವಿನ ಸಮಸ್ಯೆಯಿಂದಾಗಿ ವಿರಾಟ್‌ ಕೊಹ್ಲಿ ಎರಡನೇ ಟೆಸ್ಟ್‌ನಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡಿಗ ಕೆ.ಎಲ್‌ ರಾಹುಲ್‌ ಜೊಹಾನ್ಸ್‌ಬರ್ಗ್‌ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಹೆಡ್‌ ಕೋಚ್‌ ಆಗಿರುವ ರಾಹುಲ್‌ ದ್ರಾವಿಡ್‌ ಕೂಡ 20 ಟೆಸ್ಟ್‌ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಇವರ ಬಳಿಕ ಸ್ಪಿನ್‌ ದಂತಕತೆ ಅನಿಲ್‌ ಕುಂಬ್ಳೆ ಕೂಡ ಭಾರತ ಟೆಸ್ಟ್‌ ತಂಡವನ್ನು ಈ ಹಿಂದೆ ಮುನ್ನಡೆಸಿದ್ದರು. ಭಾರತ ಟೆಸ್ಟ್‌ ತಂಡವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮುನ್ನಡೆಸಿದ 34ನೇ ಆಟಗಾರ ಎಂಬ ಕೀರ್ತಿಗೆ ರಾಹುಲ್‌ ಪಾತ್ರರಾಗಿದ್ದಾರೆ.

IND vs SA: ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ, ರಾಹುಲ್‌ ಕ್ಯಾಪ್ಟನ್‌!

ಗುಂಡಪ್ಪ ವಿಶ್ವನಾಥ್‌, ರಾಹುಲ್‌ ದ್ರಾವಿಡ್‌ ಹಾಗೂ ಅನಿಲ್‌ ಕುಂಬ್ಳೆ ಬಳಿಕ ಭಾರತ ಟೆಸ್ಟ್‌ ತಂಡವನ್ನು ಮುನ್ನಡೆಸಿದ ನಾಲ್ಕನೇ ಕನ್ನಡಿಗ ಎಂಬ ಸಾಧನೆಗೆ ಕೆ.ಎಲ್‌ ರಾಹುಲ್‌ ಭಾಜನರಾಗಿದ್ದಾರೆ.

ರೋಹಿತ್‌ ಶರ್ಮಾ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿಯೂ ಕೆ.ಎಲ್‌ ರಾಹುಲ್‌ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಜನವರಿ 19 ರಿಂದ ಉಭಯ ತಂಡಗಳ ನಡುವಣ ಏಕದಿನ ಸರಣಿ ಶರುವಾಗಲಿದೆ.

ಇನ್ನು ಮುಂದೆ ಕೆ.ಎಲ್‌ ರಾಹುಲ್‌ ಹವಾ ಜಾಸ್ತಿಯಾಗಲಿದೆ ಎಂದ ಕರೀಮ್‌!

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಬಳಿಕ ಮಾತನಾಡಿದ ಕೆ.ಎಲ್‌ ರಾಹುಲ್‌, “ನಮ್ಮ ದೇಶವನ್ನು ಮುನ್ನಡೆಸುವುದು ಕನಸು. ನಾಯಕನಾಗಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಎದುರು ನೋಡುತ್ತಿದ್ದೇನೆ. ಇಲ್ಲಿನ ವಾಂಡರರ್ಸ್ ಮೈದಾನದಲ್ಲಿ ಕೆಲ ಗೆಲುವುಗಳನ್ನು ನಾವು ಈ ಹಿಂದೆ ಪಡೆದಿದ್ದೇವೆ. ನಾವು ಇದನ್ನು ಮುಂದುವರಿಸುತ್ತೇವೆ,” ಎಂದು ಹೇಳಿದ್ದರು.

ಇಲ್ಲಿನ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಆಡಿರುವ ಐದು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡ ಎರಡರಲ್ಲಿ ಗೆದ್ದಿದ್ದು, ಇನ್ನುಳಿದ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು. ವಿರಾಟ್‌ ಕೊಹ್ಲಿ ಅಲಭ್ಯತೆಯಿಂದಾಗಿ ಮಧ್ಯಮ ಕ್ರಮಾಂಕಕ್ಕೆ ಹನುಮ ವಿಹಾರಿ ಅವರನ್ನು ಕರೆತರಲಾಗಿದೆ. ಕಳೆದ ವರ್ಷ ಆರಂಭದಲ್ಲಿ ನಡೆದಿದ್ದ ಸಿಡ್ನಿ ಟೆಸ್ಟ್‌ ಬಳಿಕ ಇದೇ ಮೊದಲ ಬಾರಿ ವಿಹಾರಿ ಟೆಸ್ಟ್‌ ಆಡುತ್ತಿದ್ದಾರೆ.

2ನೇ ಟೆಸ್ಟ್‌ಗೆ ಶ್ರೇಯಸ್‌ ಅಯ್ಯರ್‌ ಅಲಭ್ಯರಾಗಲು ಕಾರಣ ತಿಳಿಸಿದ ಬಿಸಿಸಿಐ!

ಇನ್ನು ಪಂದ್ಯದಲ್ಲಿ 48 ಓವರ್‌ಗಳ ಮುಕ್ತಾಯಕ್ಕೆ ಭಾರತ ತಂಡ 5 ವಿಕೆಟ್‌ ನಷ್ಟಕ್ಕೆ 132 ರನ್‌ ದಾಖಲಿಸಿದೆ. ನಾಯಕ ಕೆ.ಎಲ್‌ ರಾಹುಲ್ 50 ರನ್‌ ಗಳಿಸಿದ ಬಳಿಕ ವಿಕೆಟ್‌ ಒಪ್ಪಿಸಿದರೆ, ಇದಕ್ಕೂ ಮುನ್ನ ಮಯಾಂಕ್ ಅಗರ್ವಾಲ್‌ 26 ರನ್‌ಗಳಿಗೆ ಔಟ್‌ ಆಗಿದ್ದರು. ಇದೀಗ ಕ್ರೀಸ್‌ನಲ್ಲಿ ರಿಷಭ್‌ ಪಂತ್‌(13*) ಹಾಗೂ ಆರ್‌ ಅಶ್ವಿನ್‌ (15*) ಇದ್ದಾರೆ.

ಭಾರತ Vs ದಕ್ಷಿಣ ಆಫ್ರಿಕಾ ಸ್ಕೋರ್‌ಕಾರ್ಡ್



Read more