ಹೈಲೈಟ್ಸ್:
- ಮೇಕೆದಾಟು ಯೋಜನೆಗೆ ನಾನು ಯಾವಾಗ ವಿರೋಧ ಮಾಡಿದ್ದೇನೆ?
- ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಸಿ.ಟಿ ರವಿ ಪ್ರಶ್ನೆ
- ಸಾರ್ವಜನಿಕ ಸಭೆಯಲ್ಲಿ ಸುಳ್ಳುಗಳ ಸರಮಾಲೆ ಸಿಡಿಸಿದ್ದಾರೆ
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಚಾಮರಾಜನಗರದಲ್ಲಿ ಭಾನುವಾರ ಮಾತನಾಡುವ ವೇಳೆ ಸುಳ್ಳುಗಳ ಸರಮಾಲೆಯನ್ನೇ ಬಿಚ್ಚಿಟ್ಟಿದ್ದಾರೆ. ಮೇಕೆದಾಟು ಯೋಜನೆಗೆ ಸಿ.ಟಿ. ರವಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಾರ್ವಜನಿಕ ಸಭೆಯಲ್ಲಿ ಸುಳ್ಳುಗಳ ಸರಮಾಲೆ ಸಿಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಹಿತ, ರೈತರಿಗಾಗಿ ಮೇಕೆದಾಟು ಹೋರಾಟ; ಡಿ.ಕೆ ಶಿವಕುಮಾರ್
ನಾನು ಯಾವಾಗ ವಿರೋಧ ಮಾಡಿದ್ದೇನೆ ಎಂದು ಸಿದ್ದರಾಮಯ್ಯನವರು ಹೇಳಲಿ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸಕ್ರಿಯ ರಾಜಕೀಯಕ್ಕೆ ಬಂದು ಇನ್ನೂ ಒಂದು ವರ್ಷವಾಗಿಲ್ಲ. ನಾನೂ ಸಹ ಮೇಕೆದಾಟು ಯೋಜನೆ ಸೇರಿದಂತೆ ಯಾವುದೇ ಕುಡಿಯುವ ನೀರಿನ ಯೋಜನೆ ಅನುಷ್ಠಾನದ ವಿಚಾರವಾಗಿ ರಾಜಕೀಯ ಮಾಡಬಾರದು ಎಂದು ಕರ್ನಾಟಕದಲ್ಲಿ ಮತ್ತು ತಮಿಳುನಾಡಿನಲ್ಲೂ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾವು ನೀರಿನ ವಿಷಯದಲ್ಲಿ ನಿಮ್ಮ ರೀತಿ ರಾಜಕೀಯ ಮಾಡುತ್ತಿಲ್ಲ. ನಿಮ್ಮ ಸರ್ಕಾರವಿದ್ದಾಗ ಚಿದಂಬರಂ ಮತ್ತು ಸೋನಿಯಾಗಾಂಧಿ ಹೆದರಿಕೆಯಿಂದಸಿದ್ದರಾಮಯ್ಯನವರು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿಲ್ಲ ಎಂದೆನಿಸುತ್ತದೆ.
ಈಗ ನೀವು ಪಾದಯಾತ್ರೆ ಮಾಡುವ ಮೂಲಕ ಜನರನ್ನು ದಿಕ್ಕುತಪ್ಪಿಸಿ ಕನ್ನಡಿಗರಿಗೂ, ತಮಿಳುನಾಡಿನ ಜನರ ಮನಸ್ಸಿನಲ್ಲಿ ವೈಷಮ್ಯಕ್ಕೆ ಕಾರಣವಾಗುವ ಕಾರ್ಯಕ್ಕೆ ಮುಂದಾಗಿರುವು ನಾಚಿಕೆಗೇಡಿನ ವಿಷಯ ಎಂದು ಸಿ.ಟಿ ರವಿ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯನವರೇ, ನೀವು ಮಾತನಾಡುವಾಗ 1968 ರಲ್ಲೇ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆ ಜಾರಿಗೆ ಪ್ರಯತ್ನ ಮಾಡಿತ್ತು ಎಂದು ಹೇಳಿದ್ದೀರಿ. ಹಾಗಾದರೆ ಆಗ ಕೇಂದ್ರ ಮತ್ತು ರಾಜ್ಯದಲ್ಲಿ ಯಾವ ಸರ್ಕಾರ ಆಡಳಿತ ನಡೆಸುತ್ತಿತ್ತು? ಆ ನಂತರವು 40 ವರ್ಷಗಳ ಕಾಲ ರಾಜ್ಯವಾಳಿದ ನಿಮ್ಮ ಕಾಂಗ್ರೆಸ್ ಪಕ್ಷ ಯಾಕೆ ಮೇಕೆದಾಟು ಯೋಜನೆ ಜಾರಿಗೊಳಿಸಲಿಲ್ಲ?
ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಬದ್ಧ ಎಂದು ನಾನು ಹೇಳಿದ್ದೇನೆ. ನಿಮ್ಮದೇ ಪಕ್ಷದ ಸರ್ಕಾರ ಕೇಂದ್ರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಯಾಕೆ ಅನುಷ್ಠಾನ ಮಾಡಲಿಲ್ಲ? ಇದಕ್ಕೆ ನೀವು ಉತ್ತರ ಕೊಡಬೇಕಲ್ಲವೇ?ಜನರಿಗೆ ತಪ್ಪು ಮಾಹಿತಿ ನೀಡಿ ಅವರ ದಿಕ್ಕು ತಪ್ಪಿಸುವುದೇ ನಿಮ್ಮ ಕಾಯಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮೇಕೆದಾಟು ಯೋಜನೆ ಜಾರಿ ಮಾಡಬಾರದು ಎಂದು ಧರಣಿ ಕೂತಿದ್ದಾರೆ. ತಮಿಳುನಾಡಿನ ಬಿಜೆಪಿ ಉಸ್ತುವಾರಿ ಸಿ.ಟಿ ರವಿ ಅವರು ಕೂಡ ಮೇಕೆದಾಟು ವಿರುದ್ಧವಾಗಿದ್ದಾರೆ. ಹೀಗಾಗಿಯೇ ಯೋಜನೆ ಜಾರಿಯಾಗದೆ ಅನಗತ್ಯ ವಿಳಂಬವಾಗುತ್ತಿದೆ. ಈ ವಿಳಂಬವನ್ನು ವಿರೋಧಿಸಿಯೇ ಕಾಂಗ್ರೆಸ್ ಪಕ್ಷ ಈ ತಿಂಗಳ 9 ನೇ ತಾರೀಖಿನಿಂದ ಮೇಕೆದಾಟು ಇಂದ ಬೆಂಗಳೂರು ವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.