The New Indian Express
ಇಂದಿನ ಉದ್ಯೋಗ ಕ್ರಮ, ಜೀವನಶೈಲಿಯಲ್ಲಿ ರಾತ್ರಿ ಹೊತ್ತು ತಡವಾಗಿ ಆಹಾರ ಸೇವಿಸುವುದು, ತಡವಾಗಿ ಮಲಗುವುದು ಹಲವರಿಗೆ ಅಭ್ಯಾಸವಾಗಿ ಹೋಗಿದೆ. ಇದರಿಂದ ಆರೋಗ್ಯಕ್ಕೆ ಎಷ್ಟು ಮಾರಕ ಎಂಬುದನ್ನು ಅಮೆರಿಕದ ಹಾರ್ವರ್ಡ್ ಮೆಡಿಕಲ್ ಸ್ಕೂಲ್, ಜರ್ಮನಿಯ ಕಲೋನ್ ವಿಶ್ವವಿದ್ಯಾಲಯ, ಜರ್ಮನಿಯ ಬೋಸ್ಟನ್ ನ ಮಹಿಳಾ ಆಸ್ಪತ್ರೆಯ ಅಧ್ಯಯನದ ವರದಿ ಹೇಳುತ್ತದೆ.
ಅಧ್ಯಯನದಿಂದ ತಿಳಿದುಬಂದಿದ್ದೇನು?
-ರಾತ್ರಿ ತಡವಾಗಿ ಆಹಾರ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ. ಮೂಲಕ್ಕಿಂತ ಶೇಕಡಾ 6.4ರಷ್ಟು ಏರಿಕೆಯಾಗಬಹುದು ಎಂದು ತಿಳಿದುಬಂದಿದೆ.
-ದೇಹದ ಚಯಾಪಚಯ ಕ್ರಿಯೆ, ಜೀರ್ಣಕ್ರಿಯೆ, ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ. ಹಗಲು ಹೊತ್ತಿನಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದರಿಂದ ಈ ಸಮಸ್ಯೆಯಿಂದ ಹೊರಬರಬಹುದು.
ನಗರ ಪ್ರದೇಶಗಳಲ್ಲಿ ಕಚೇರಿಗಳಲ್ಲಿ ರಾತ್ರಿ ಶಿಫ್ಟ್ ನಲ್ಲಿ ಕೆಲಸ ಮಾಡುವವರು, ಕಿರಾಣಿ ಅಂಗಡಿಗಳಲ್ಲಿ, ಮಾಲ್ ಗಳಲ್ಲಿ, ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು, ಟ್ರಕ್ ಡ್ರೈವರ್ ಗಳು, ಕಾಲ್ ಸೆಂಟರ್ ಉದ್ಯೋಗಿಗಳು ರಾತ್ರಿ ಹೊತ್ತಿನಲ್ಲಿ ಆಹಾರ ಸೇವಿಸುವುದು ಮಾಮೂಲಿ. ಇಂತವರಿಗೆ ಊಟ-ತಿಂಡಿ, ನಿದ್ದೆ ಸರಿಯಾದ ಸಮಯಕ್ಕೆ ಸಾಕಷ್ಟು ಸಿಗುವುದಿಲ್ಲ. ಇದು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮನುಷ್ಯ ಆಹಾರ ಸೇವಿಸುವ ಕ್ರಮ ಸರಿಯಾಗಿದ್ದರೆ ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳಿಂದ ಹೊರಬರಬಹುದು.
ತಡವಾಗಿ ಆಹಾರ ಸೇವಿಸಬೇಡಿ: ಹಗಲು ಹೊತ್ತಿಗಿಂತ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ಅಧಿಕ ತೂಕ ಅಥವಾ ಬೊಜ್ಜು ಹೆಚ್ಚಾಗಿ ಕಂಡುಬರುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿವೆ. ರಾತ್ರಿಯ ಸಮಯದಲ್ಲಿ ತಿನ್ನುವ ಜನರು ಮೆಟಾಬಾಲಿಕ್ ಸಿಂಡ್ರೋಮ್ ಎಂಬ ರೋಗ ಸ್ಥಿತಿಯ ಜೊತೆಗೆ ಇನ್ಸುಲಿನ್ ಪ್ರತಿರೋಧ, ಅಧಿಕ ಸಕ್ಕರೆ ಕಾಯಿಲೆ, ಅಸಹಜ ಕೊಲೆಸ್ಟ್ರಾಲ್ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ರಾತ್ರಿಪಾಳಿಯಲ್ಲಿ ದೀರ್ಘಕಾಲದವರೆಗೆ ಕೆಲಸ ಮಾಡುವುದರಿಂದ ಬೊಜ್ಜು, ಖಿನ್ನತೆ, ನಿದ್ರಾ ಭಂಗ ಅಥವಾ ಕೆಲವು ರೀತಿಯ ಕ್ಯಾನ್ಸರ್ ಸಹ ಬರುವ ಸಾಧ್ಯತೆಯಿದೆ ಎಂದು ದೆಹಲಿಯ ಇಂದ್ರಪ್ರಸ್ತ ಅಪೊಲೊ ಆಸ್ಪತ್ರೆಯ ಹಿರಿಯ ಮಧುಮೇಹ ತಜ್ಞ ಡಾ ಸುಭಾಷ್ ಕುಮಾರ್ ವಂಗ್ನೂ ಹೇಳುತ್ತಾರೆ.
ಹಗಲು ಹೊತ್ತಿನಲ್ಲಿ ಹೊತ್ತಿಗೆ ತಕ್ಕಷ್ಟು ಆಹಾರ ಸೇವಿಸಿ ಕೆಲಸ ಮಾಡಿ ರಾತ್ರಿ ಬೇಗನೆ ಊಟ ಮಾಡಿ ಸಾಕಷ್ಟು ನಿದ್ದೆ ಮಾಡುವುದು ಪ್ರಕೃತಿಗೆ ಪೂರಕವಾದ ಕ್ರಿಯೆ. ಇದಕ್ಕೆ ವಿರುದ್ಧವಾಗಿ ಮನುಷ್ಯನ ಜೀವನಕ್ರಮ, ಕೆಲಸವಾದಾಗ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಊಟ-ತಿಂಡಿ, ನಿದ್ದೆ ಸರಿಯಾಗಿ ಆಗಲು ಸಾಧ್ಯವೇ ಇಲ್ಲ. ಹಸಿವೆಯಾದಾಗ ತಿನ್ನದಿದ್ದರೆ ಸಹ ಮನುಷ್ಯನ ಜೈವಿಕ ಕ್ರಿಯೆಗಳಿಗೆ ಪರಿಣಾಮ ಬೀರುತ್ತದೆ.
ಹಾಗೆಂದು ತಡರಾತ್ರಿಯಲ್ಲಿ ತಿನ್ನುವವರಿಗೆ ಆರೋಗ್ಯದ ತೊಂದರೆಗಳು ಹೆಚ್ಚು ಎಂದು ಹೇಳುವುದು ಸಂಪೂರ್ಣವಾಗಿ ಸರಿಯೂ ಅಲ್ಲ. ವ್ಯಾಯಾಮದ ಕೊರತೆ, ಅತಿಯಾದ ನಿದ್ದೆ, ಊಟವನ್ನು ಬಿಟ್ಟುಬಿಡುವುದು ಅಥವಾ ಆರೋಗ್ಯಕರವಾಗಿ ತಿನ್ನದಿರುವುದು ಸಹ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಬರಲು ಕಾರಣವಾಗುತ್ತದೆ ಎನ್ನುತ್ತಾರೆ ಬೆಂಗಳೂರಿನ ಆಸ್ಟರ್ ಆರ್ ವಿ ಆಸ್ಪತ್ರೆಯ ಮುಖ್ಯ ಮಧುಮೇಹತಜ್ಞ ಡಾ ಮಂಜುನಾಥ್ ಮಳಿಗೆ.