Karnataka news paper

ಪಶು ಸಂಗೋಪನೆಗೆ ಸಾಲ ಸೌಲಭ್ಯ, ಫೆಬ್ರವರಿ 15ರವರೆಗೆ ವಿಶೇಷ ಅಭಿಯಾನ


ಹೈಲೈಟ್ಸ್‌:

  • ಪಶು ಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಭರಿಸಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ
  • ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರ ಸಂಸ್ಥೆಗಳ ಮೂಲಕ ಸಾಲ ಸೌಲಭ್ಯ
  • ಕೇಂದ್ರ ಸರಕಾರದ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆಯ ಅಡಿಯಲ್ಲಿ ಸಾಲ
  • ಫೆ. 15 ರವರೆಗೆ ಹೊಸ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ವಿತರಿಸಲು ವಿಶೇಷ ಅಭಿಯಾನ

ಹಾವೇರಿ: ಕೇಂದ್ರ ಸರಕಾರದ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆಯ ಪಶು ಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಭರಿಸಲು ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲು ಫೆ. 15 ರವರೆಗೆ ಹೊಸ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ವಿತರಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಆಸಕ್ತ ರೈತರು ಹತ್ತಿರದ ಪಶು ವೈದ್ಯಕೀಯ ಸಂಸ್ಥೆಯಲ್ಲಿ ಅರ್ಜಿ ನಮೂನೆ ಪಡೆದು ಆಧಾರ್‌, ಪಹಣಿ ಪತ್ರ, ಬ್ಯಾಂಕ್‌ ಖಾತೆ ಸಂಖ್ಯೆ, ಬ್ಯಾಂಕಿನ ಹೆಸರು, ಶಾಖೆ ಮತ್ತು ಐ.ಎಫ್‌.ಎಸ್‌.ಸಿ. ಕೋಡ್‌ನೊಂದಿಗೆ ಬ್ಯಾಂಕ್‌ ಖಾತೆ ವಿವರಗಳನ್ನು ಮತ್ತು ಭಾವಚಿತ್ರದೊಂದಿಗೆ ಅಗತ್ಯ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು.

ಹೈನುಗಾರಿಕೆ

ಮಿಶ್ರತಳಿ ದನಗಳ ನಿರ್ವಹಣೆ (1+1)ಗೆ ಪ್ರತಿ ಹಸುವಿಗೆ ಗರಿಷ್ಠ 14 ಸಾವಿರ ರೂ., ಎರಡು ಹಸುಗಳಿಗೆ 28 ಸಾವಿರ ರೂ. ಸಾಲ ಸೌಲಭ್ಯ ಹಾಗೂ ಸುಧಾರಿತ ಎಮ್ಮೆಗಳ ನಿರ್ವಹಣೆ (1+1)ಗೆ ಪ್ರತಿ ಎಮ್ಮೆಗೆ ಗರಿಷ್ಠ 16 ಸಾವಿರ ರೂ., ಎರಡು ಎಮ್ಮೆಗಳಿಗೆ 32 ಸಾವಿರ ರೂ. ಸಾಲ ಸೌಲಭ್ಯವಿದೆ.

ಕುರಿ ಸಾಕಣೆ

ಕುರಿಗಳ ನಿರ್ವಹಣೆ (10+01) ಕಟ್ಟಿ ಮೇಯಿಸುವ ಕುರಿಗಳಿಗೆ 24 ಸಾವಿರ ರೂ. ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ 12 ಸಾವಿರ ರೂ. ಸಾಲ ಸೌಲಭ್ಯ, ಕುರಿಗಳ ನಿರ್ವಹಣೆ (20+01) ಕಟ್ಟಿ ಮೇಯಿಸುವ ಕುರಿಗಳಿಗೆ 48 ಸಾವಿರ ರೂ. ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ 24 ಸಾವಿರ ರೂ. ಸಾಲ ಸೌಲಭ್ಯ, ಟಗರುಗಳ ನಿರ್ವಹಣೆ (10) 13 ಸಾವಿರ ರೂ. ಹಾಗೂ ಟಗರುಗಳ ನಿರ್ವಹಣೆ (20) 26 ಸಾವಿರ ರೂ.ಸಾಲ ಸೌಲಭ್ಯವಿದೆ.

ಮೇಕೆಗಳ ಸಾಕಣೆ

ಮೇಕೆಗಳ ನಿರ್ವಹಣೆ (10+01) ಕಟ್ಟಿ ಮೇಯಿಸುವ ಮೇಕೆಗಳಿಗೆ 24 ಸಾವಿರ ರೂ. ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ 13 ಸಾವಿರ ರೂ. ಸಾಲ ಸೌಲಭ್ಯ, ಮೇಕೆಗಳಿಗೆ ನಿರ್ವಹಣೆ (20+01) ಕಟ್ಟಿ ಮೇಯಿಸುವ ಮೇಕೆಗಳಿಗೆ 48 ಸಾವಿರ ರೂ. ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ 26 ಸಾವಿರ ರೂ. ಸಾಲ ಸೌಲಭ್ಯವಿದೆ. ಹಂದಿ ಸಾಕಾಣಿಕೆ (10) 60 ಸಾವಿರ ರೂ. ಸಾಲ ಸೌಲಭ್ಯವಿದೆ.

ಕೋಳಿ ಸಾಕಣೆ

ಮಾಂಸದ ಕೋಳಿ ಸಾಕಣೆಗೆ 2 ಸಾವಿರ ಕೋಳಿಗಳಿಗೆ ಗರಿಷ್ಠ 1.60 ಲಕ್ಷ ರೂ. ಹಾಗೂ ಮೊಟ್ಟೆ ಕೋಳಿ ಸಾಕಣೆಗೆ 1 ಸಾವಿರ ಕೋಳಿಗಳಿಗೆ ಗರಿಷ್ಠ 1.80 ಲಕ್ಷ ರೂ.ವರೆಗೆ ಸಾಲ ಸೌಲಭ್ಯವಿದೆ.

ಹೆಚ್ಚಿನ ಮಾಹಿತಿಗೆ ತಾಲೂಕಿನ ಸಹಾಯಕ ನಿರ್ದೇಶಕರು, ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ಹಾವೇರಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರ (ಮೊ. 9480422963)ನ್ನು ಸಂಪರ್ಕಿಸಬಹುದೆಂದು ಸಹಾಯಕ ನಿರ್ದೇಶಕ (ಆಡಳಿತ) ಡಾ. ಬಸವರಾಜ ಡಿ.ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Read more