Karnataka news paper

ಕಾಶಿ ವಿಶ್ವನಾಥ ಧಾಮ ಉದ್ಘಾಟನೆಗೆ ಕ್ಷಣಗಣನೆ..! ಸೋಮವಾರ ಸಾಧು ಸಂತರ ಜೊತೆ ಪ್ರಧಾನಿ ಮೋದಿ ಲೋಕಾರ್ಪಣೆ


ಹೈಲೈಟ್ಸ್‌:

  • ಭವ್ಯ ಕಾರಿಡಾರ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ
  • ಸೋಮವಾರ ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ನಡೆಯಲಿದೆ
  • ಅಂದಾಜು 800 ಕೋಟಿ ರೂ. ವೆಚ್ಚದ ಯೋಜನೆ

ವಾರಾಣಸಿ (ಉತ್ತರ ಪ್ರದೇಶ):ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರ ವಾರಾಣಸಿಯಲ್ಲಿ ಅಭಿವೃದ್ಧಿಪಡಿಸಿರುವ ‘ಕಾಶಿ ವಿಶ್ವನಾಥ ಧಾಮ‘ (ಕಾಶಿ ವಿಶ್ವನಾಥ ಕಾರಿಡಾರ್‌) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಲೋಕಾರ್ಪಣೆ ಮಾಡಲಿದ್ದಾರೆ.

ಮೂರು ಸಾವಿರ ಸಾಧು-ಸಂತರು, ಗಣ್ಯರು, ಕಲಾವಿದರು, ಬಿಜೆಪಿ ಆಡಳಿತದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಭವ್ಯ ಕಾರಿಡಾರ್‌ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಲಿದ್ದಾರೆ.

ಸೋಮವಾರ ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಇತಿಹಾಸ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯ ಹಾಗೂ ಗಂಗಾನದಿಯ ಮಣಿಕರ್ಣಿಕಾ ಮತ್ತು ಲಲಿತಾ ಘಾಟ್‌ಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ವಾರಾಣಸಿಯ ಗತ ವೈಭವ ಮರು ಕಳಿಸುವ ದಿಸೆಯಲ್ಲಿ ಅಂದಾಜು 800 ಕೋಟಿ ರೂ. ಯೋಜನೆ ರೂಪಿಸಲಾಗಿದೆ.

ಕಾಶಿಯ ಮೆರಗು ಹೆಚ್ಚಿಸಿದ ರುದ್ರಾಕ್ಷ..! ಸಮ್ಮೇಳನ ಕೇಂದ್ರ ಉದ್ಘಾಟಿಸಿದ ಪ್ರಧಾನಿ ಮೋದಿ
ಬೆಳಗಲಿವೆ 5 ಲಕ್ಷ ದೀಪ: ಕಾಶಿ ವಿಶ್ವನಾಥ ಕಾರಿಡಾರ್‌ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದೆ. ಉದ್ಘಾಟನೆ ದಿನವಾದ ಸೋಮವಾರ ಸಂಜೆ ಗಂಗಾ ನದಿಯಲ್ಲಿ ಗಂಗಾರತಿ ನಡೆಯಲಿದ್ದು, ಐದು ಲಕ್ಷಕ್ಕೂ ಅಧಿಕ ದೀಪಗಳು ಬೆಳಗಲಿವೆ. ಅಲ್ಲದೆ, ರಾಜ್ಯ ಸರಕಾರವು ಲೇಸರ್‌ ಶೋ ಸಹ ಆಯೋಜಿಸಿದ್ದು, ಬಾನಂಗಳದಲ್ಲಿ ಚಿತ್ತಾರ ಮೂಡಲಿದೆ.

ವಾರಾಣಸಿಯ ಪ್ರತಿ ಮೂಲೆ ಮೂಲೆಯಲ್ಲೂ ಬೆಳಕಿನ ರಂಗು ಕಂಗೊಳಿಸಲಿದೆ. ಭಜನೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಇಡೀ ನಗರವನ್ನು ಭಕ್ತಿಯ ಭಾವದಲ್ಲಿ ಮಿಂದೇಳಿಸಲಿವೆ. ಒಂದು ತಿಂಗಳ ಕಾಲ ಕಾಶಿಯಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ವಾರಣಾಸಿಯ ‘ಗಂಗಾರತಿ’ ಮಾದರಿಯಲ್ಲಿ ‘ತುಂಗಭದ್ರಾ ಆರತಿ’ಯತ್ತ ಮತ್ತೆ ಒಲವು..?
ಭಾರಿ ಭದ್ರತೆ: ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಸಾಧು – ಸಂತರು, ಗಣ್ಯರು ಸೇರಿ ಸಾವಿರಾರು ಜನ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿರುವ ಕಾರಣ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ರಾಜ್ಯ ಪೊಲೀಸ್‌ ಇಲಾಖೆಯ 102 ತುಕಡಿಗಳು, ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.

ಹೆಚ್ಚುವರಿಯಾಗಿ ಸೈನಿಕರನ್ನು ಸಹ ಭದ್ರತೆಗೆ ನಿಯೋಜಿಸಲಾಗಿದೆ. ಅದರಲ್ಲೂ, ಕಾರಿಡಾರ್‌ ವ್ಯಾಪ್ತಿಯಲ್ಲಿ ಸಿಸಿಟಿವಿ ಅಳವಡಿಕೆ, ಭಯೋತ್ಪಾದನೆ ನಿಗ್ರಹ ವ್ಯವಸ್ಥೆ ಸೇರಿ ಹಲವು ರೀತಿಯಲ್ಲಿ ನಿಗಾ ವಹಿಸಲಾಗಿದೆ. ದೇವಾಲಯದ ಸುತ್ತ 55 ಕ್ಯಾಮೆರಾ, ಏಳು ಸ್ಯಾಟಲೈಟ್‌ ಅಪ್‌ಲಿಂಕ್‌ ವ್ಯಾನ್‌ಗಳು, ಜಿಮ್ಮಿ ಜಿಮ್ಸ್‌, ರೇಡಿಯೋ ಫ್ರೀಕ್ವೆನ್ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಡಿ. 13ರಂದು ಪ್ರಧಾನಿಯಿಂದ ಕಾಶಿ ವಿಶ್ವನಾಥ ಕಾರಿಡಾರ್‌ ಉದ್ಘಾಟನೆ, ದೇಶದ 51,000 ಸ್ಥಳಗಳಲ್ಲಿ ಲೈವ್‌



Read more