ಹೈಲೈಟ್ಸ್:
- ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬಿಗೆ ಗರಿ ಮೂಡಿದ್ದು ಇಳುವರಿ ಕುಂಠಿತಗೊಳ್ಳುವ ಆತಂಕ
- ಸಕ್ಕರೆ ಕಾರ್ಖಾನೆಗಳ ಅವೈಜ್ಞಾನಿಕ ನಿರ್ಧಾರದಿಂದ ರೈತರು ಬೆಳೆದ ಕಬ್ಬು ಸಕಾಲಕ್ಕೆ ಸಾಗಣೆಯಾಗುತ್ತಿಲ್ಲ
- ಗರಿ ಮೂಡಿದರೆ ಕಬ್ಬು ಬೆಂಡು ಒಡೆದು ಇಳುವರಿ ಕುಂಠಿತಗೊಳ್ಳುತ್ತದೆ
ವಿಜಯಪುರ: ಸಕಾಲಕ್ಕೆ ಕಟಾವು ಆಗದ ಕಾರಣ ಈ ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬಿಗೆ ಗರಿ ಮೂಡಿದ್ದು ಇಳುವರಿ ಕುಂಠಿತಗೊಳ್ಳುವ ಆತಂಕ ಎದುರಾಗಿದೆ.
ಕೃಷ್ಣಾ ನದಿ ತೀರದಲ್ಲಿ ಅನೇಕ ವರ್ಷಗಳಿಂದ ಕಬ್ಬು ಬೆಳೆಯುತ್ತಾ ಬರಲಾಗಿದೆ. ಜತೆಗೆ ಆಲಮಟ್ಟಿ ಜಲಾಶಯ ವ್ಯಾಪ್ತಿಯ ನಾನಾ ಕಾಲುವೆಗಳ ಇರುವ ಕಾರಣ ಅಂತರ್ಜಲ ಹೆಚ್ಚಳವಾಗಿದ್ದು ಈ ಮೊದಲಿದ್ದ ಬಾವಿ, ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ ಹಾಗೂ ಕಾಲುವೆ ವ್ಯಾಪ್ತಿಯ ಜಮೀನುಗಳಲ್ಲೂ ಸದ್ಯ ಕಬ್ಬು ಬೆಳೆಯಲಾಗುತ್ತಿದೆ. ಕಾಲುವೆ ನೀರು ವರವಾಗಿ ಪರಿಣಮಿಸಿದ್ದರಿಂದ ಕಬ್ಬು ಬೆಳೆಯ ಪ್ರದೇಶ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಾ ಸಾಗಿದೆ.
ಸಕಾಲಕ್ಕೆ ಸಾಗಣೆಯಾಗುತ್ತಿಲ್ಲ
ಕಬ್ಬು ಬೆಳೆಯುವ ಪ್ರದೇಶ ಈ ಭಾಗದಲ್ಲಿ ಹೆಚ್ಚಳವಾಗುತ್ತಿದ್ದರಿಂದ ಹಾಗೂ ಸಕ್ಕರೆ ಕಾರ್ಖಾನೆಗಳ ಅವೈಜ್ಞಾನಿಕ ನಿರ್ಧಾರದಿಂದ ರೈತರು ಬೆಳೆದ ಕಬ್ಬು ಸಕಾಲಕ್ಕೆ ಸಾಗಣೆಯಾಗುತ್ತಿಲ್ಲ. ಹೀಗಾಗಿ ಆಳೆತ್ತರಕ್ಕೆ ಬೆಳೆದ ಕಬ್ಬಿಗೆ ಗರಿ ಮೂಡಿದೆ. ಈ ಮೊದಲು 11-12 ತಿಂಗಳಿಗೆ ಕಬ್ಬಿಗೆ ಗರಿ ಮೂಡುತ್ತಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ 8-9 ತಿಂಗಳಿಗೆ ಗರಿ ಮೂಡಲಾರಂಭಿಸಿದೆ. ಗರಿ ಮೂಡಿದರೆ ಕಬ್ಬು ಬೆಂಡು ಒಡೆದು ಇಳುವರಿ ಕುಂಠಿತಗೊಳ್ಳುತ್ತದೆ. ಸಾಮಾನ್ಯವಾಗಿ ಒಂದು ಎಕರೆಗೆ 50ರಿಂದ 60 ಟನ್ ಇಳುವರಿ ಸಿಗುತ್ತದೆ. ಗರಿ ಮೂಡಿದರೆ ಕೇವಲ 30-35 ಟನ್ ಇಳುವರಿ ಮಾತ್ರ ಸಿಗುತ್ತದೆ. ಇದರಿಂದ ಸಾಲ ಮಾಡಿದ ಕಬ್ಬು ಬೆಳೆದ ಬೆಳೆಗಾರರಿಗೆ ಮಾಡಿದ ಖರ್ಚು ಕೂಡ ಬಾರದ ಸ್ಥಿತಿ ನಿರ್ಮಾಣವಾಗಿದೆ.
ಲಗಾನಿ ಅಧಿಕ
ಬೇಗನೆ ಕಬ್ಬು ಕಾರ್ಖಾನೆಗೆ ಸಾಗಿಸಿದರೆ ಸಾಕೆಂದು ಕಬ್ಬು ಕಟಾವು ಮಾಡುವ ಗ್ಯಾಂಗ್‌ಗಳಿಗೆ ಕೆಲ ರೈತರು ಹೆಚ್ಚಿನ ಲಗಾನಿ ನೀಡಿದ ಪರಿಣಾಮ ಸದ್ಯ ಕಬ್ಬು ಕಟಾವು ಮಾಡಲು ಗ್ಯಾಂಗ್‌ಮನ್‌ಗಳು ಹೆಚ್ಚಿನ ಲಗಾನಿ ಕೇಳುತ್ತಿದ್ದಾರೆ. ಅದರಲ್ಲೂ ಗರಿ ಮೂಡಿದ ಕಬ್ಬಿಗೆ ಮೂರ್ನಾಲ್ಕು ಸಾವಿರ ರೂ.ಗಳ ಲಗಾನಿ ಬೇಡುತ್ತಿದ್ದಾರೆ. ಇದು ಬೆಳೆಗಾರರಿಗೆ ಆರ್ಥಿಕ ಹೊರೆ ಹೆಚ್ಚಿಸಿದೆ. ಗರಿ ಮೂಡಿದ ಕಬ್ಬಿಗೆ ಬೆಂಕಿ ತಗುಲುವುದರಿಂದ ಕಬ್ಬು ಬೆಂಕಿಗಾಹುತಿ ಆಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ರೈತರು.
ನಾನಾ ಸಮಸ್ಯೆ
ಗೊಣ್ಣೆ ಹುಳು ಬಾಧೆ, ಮಲ್ಲಿಗೆ ಕಳೆ ಸೇರಿದಂತೆ ನಾನಾ ಸಮಸ್ಯೆಯಿಂದ ಈ ಭಾಗದ ಕಬ್ಬು ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಬೆಳೆಸಿದ ಕಬ್ಬು ಸಕಾಲಕ್ಕೆ ಕಟಾವು ಆಗದ ಕಾರಣ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ನವೆಂಬರ್‌ನಲ್ಲಿ ಕಟಾವು ಸ್ಥಗಿತ
ಕಳೆದ ನವೆಂಬರ್ ತಿಂಗಳಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಕೆಲವೆಡೆ ಕಬ್ಬು ಕಟಾವು ಮಾಡುವುದು ಸ್ಥಗಿತಗೊಳಿಸಲಾಗಿತ್ತು. ಕಬ್ಬು ಸಾಗಣೆ ವೇಳೆ ಲೋಡ್ ಆಗಿರುವ ಟ್ರ್ಯಾಕ್ಟರ್ ಜಮೀನಿನಲ್ಲಿ ಸಿಕ್ಕಿ ಹಾಕಿಕೊಂಡರೆ ಹತ್ತಾರು ಸಾವಿರ ರೂ.ಗಳ ಹೊರೆ ರೈತರ ಮೇಲೆ ಬೀಳುತ್ತದೆ. ಈ ತಾಪತ್ರಯ ಬೇಡವೆಂದು ಸಾಕಷ್ಟು ರೈತರು ನವೆಂಬರ್ ತಿಂಗಳಲ್ಲಿ ಕಬ್ಬು ಕಟಾವು ಮಾಡಲು ಹಿಂದೇಟು ಹಾಕಿದ್ದರು. ಇದರಿಂದಲೂ ಕೂಡ ಕಬ್ಬು ಸಕಾಲಕ್ಕೆ ಕಟಾವು ಆಗದೆ ಗರಿ ಮೂಡಿದೆ ಎನ್ನುತ್ತಾರೆ ಕೆಲ ಬೆಳೆಗಾರರು.
ಸಮಯಕ್ಕೆ ಸರಿಯಾಗಿ ಕಬ್ಬು ಕಟಾವು ಆಗದಿದ್ದರೆ ಕಬ್ಬಿಗೆ ಗರಿ ಮೂಡಿದರೆ ಕಬ್ಬಿನಲ್ಲಿರುವ ನೀರಿನ ಅಂಶ ಕಡಿಮೆ ಆಗಿ ಕಡಿಮೆ ತೂಕ ಬರುತ್ತದೆ. ಬೀಜ, ಗೊಬ್ಬರ, ಕೂಲಿಗೆ ಮಾಡಿದ ಖರ್ಚು ಕೂಡ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆಯವರು ಸರದಿಯಂತೆ ಕಬ್ಬು ಕಟಾವು ಮಾಡಿದರೆ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ.
ಸಂಗನಗೌಡ ಬಿರಾದಾರ. ಕಬ್ಬು ಬೆಳೆಗಾರ