Karnataka news paper

ಕೇರಳದಲ್ಲಿ ಜ.3ರಿಂದ ಮಕ್ಕಳಿಗೆ ವ್ಯಾಕ್ಸಿನೇಶನ್‌; ಇಂದಿನಿಂದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯ


ಕಾಸರಗೋಡು: ಕೇರಳ ರಾಜ್ಯಾದ್ಯಂತ ಎಲ್ಲ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಜ. 3ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ 15ರಿಂದ 18 ವರ್ಷದವರೆಗಿನ (2007-ಅದಕ್ಕಿಂತ ಮೊದಲು ಜನಿಸಿದವರು) ಮಕ್ಕಳಿಗೆ ಕೋವಿಡ್‌ ವ್ಯಾಕ್ಸಿನೇಶನ್‌ ನಡೆಯಲಿದೆ.

ಕಾಸರಗೋಡು ಜಿಲ್ಲಾ ಮಟ್ಟದ ಮಕ್ಕಳ ವ್ಯಾಕ್ಸಿನೇಶನ್‌ ಉದ್ಘಾಟನೆ ಜ.3ರಂದು ಕಾಞಂಗಾಡ್‌ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಶಾಸಕ ಇ. ಚಂದ್ರಶೇಖರನ್‌ ಉದ್ಘಾಟಿಸುವರು. ಜ.3ರ ಬಳಿಕ ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ, ಸೋಮವಾರದಿಂದ ಶನಿವಾರದವರೆಗೆ ಆಯ್ದ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ದಿನ 15-18 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಲಾಗುವುದು. ಜಿಲ್ಲೆಯಲ್ಲಿ ಮಕ್ಕಳ ಕೋವಿಡ್‌ ವ್ಯಾಕ್ಸಿನೇಶನ್‌ ಪೂರ್ವ ಸಿದ್ಧತೆ ಪೂರ್ಣಗೊಂಡಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ ಡಾ.ಕೆ.ಆರ್‌. ರಾಜನ್‌ ತಿಳಿಸಿದ್ದಾರೆ.
ಕಾರವಾರದಲ್ಲಿ 77 ಸಾವಿರ ಜನರಿಗೆ ಬೂಸ್ಟರ್‌ ಡೋಸ್‌; ಜ.3ರಿಂದ ಶಾಲೆಗಳಲ್ಲಿ ವ್ಯಾಕ್ಸಿನ್‌!
ಜಿಲ್ಲೆಯಲ್ಲಿ 60,496 ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡಬೇಕಾಗಿದೆ. ಮಕ್ಕಳಿಗೆ ಕೊವಾಕ್ಸಿನ್‌ ಲಸಿಕೆ ನೀಡಲಾಗುವುದು. ಲಸಿಕೆ ನೀಡುವ ಮೊದಲು ಹಾಗೂ ಬಳಿಕ ಮಕ್ಕಳ ಮೇಲೆ ನಿಗಾ ಇರಿಸಿ ಆರೋಗ್ಯ ಸ್ಥಿತಿ ಖಚಿತ ಪಡಿಸಿಕೊಳ್ಳಲಾಗುವುದು. ಓಮಿಕ್ರಾನ್‌ ಹೆಚ್ಚಳ ಹಿನ್ನೆಲೆಯಲ್ಲಿ ಮಕ್ಕಳಿಗೆ ಲಸಿಕೆ ನೀಡಿರಯವುದನ್ನು ಪೋಷಕರು ಖಚಿತಪಡಿಸಬೇಕು. ಮಕ್ಕಳ ಪೋಷಕರು ಕಡ್ಡಾಯವಾಗಿ ವ್ಯಾಕ್ಸಿನೇಶನ್‌ ಕೇಂದ್ರಕ್ಕೆ ತಲುಪಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಮಕ್ಕಳ ಕೋವಿಡ್‌ ವ್ಯಾಕ್ಸಿನ್‌ ನೋಂದಣಿ ಜನವರಿ 1ರಂದು ಆರಂಭವಾಗಿದೆ. ಸರ್ಕಾರದ ವೆಬ್‌ ಸೈಟ್‌ಗೆ ಭೇಟಿ ನೀಡಿ ವ್ಯಕ್ತಿಗತ ಮಾಹಿತಿಯನ್ನು ನೋಂದಾಯಿಸಬಹುದು. ಲಸಿಕೆ ಪಡೆಯಲು ‘ಆ್ಯಡ್‌ ಮೋರ್‌’ ಆಯ್ಕೆ ನೀಡಲಾಗಿದೆ. ಒಂದು ಮೊಬೈಲ್‌ ಸಂಖ್ಯೆಯಲ್ಲಿ ಗರಿಷ್ಠ ಆರು ಮಂದಿ ನೋಂದಾಯಿಸಬಹುದು. ಈ ಮೊದಲು ವ್ಯಾಕ್ಸಿನೇಶನ್‌ ನೋಂದಾಯಿಸಿದ ಮೊಬೈಲ್‌ ಫೋನ್‌ ಮೂಲಕವೂ ನೋಂದಾಯಿಸಬಹುದು. ಆನ್‌ಲೈನ್‌ನಲ್ಲಿ ನೋಂದಾಯಿಸಲು ಸಾಧ್ಯವಾಗದವರು ವ್ಯಾಕ್ಸಿನೇಶನ್‌ ಕೇಂದ್ರಗಳಲ್ಲಿ ನೋಂದಾಯಿಸುವ ಮೂಲಕ ಲಸಿಕೆ ಪಡೆಯಬಹುದು.

ಜಿಲ್ಲೆಯಲ್ಲಿ ಶೇ. 88.55 ವ್ಯಾಕ್ಸಿನೇಶನ್‌ ಪೂರ್ಣ
ಕಾಸರಗೋಡು ಜಿಲ್ಲೆಯಲ್ಲಿ ಇದುವರೆಗೆ ಶೇ. 98.49 ಮಂದಿ ಪ್ರಥಮ ಡೋಸ್‌ ಲಸಿಕೆ ಮತ್ತು ಶೇ. 88.55 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 9,64,319 ಮಂದಿ ಪ್ರಥಮ ಹಾಗೂ ದ್ವಿತೀಯ ಹಂತದ ಲಸಿಕೆ ಪಡೆದಿದ್ದಾರೆ. ಮಕ್ಕಳ ವ್ಯಾಕ್ಸಿನೇಶನ್‌ ಪ್ರಾರಂಭಿಸುವ ಮೊದಲು ಮೊದಲ ಡೋಸ್‌ ಲಸಿಕೆ ಪಡೆಯದವರು, ಎರಡನೇ ಡೋಸ್‌ ತೆಗೆದುಕೊಳ್ಳುವ ಕಾಲ ಮಿತಿ ದಾಟಿದವರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಸೋಮವಾರ ಮಕ್ಕಳ ವ್ಯಾಕ್ಸಿನೇಶನ್‌ಗೆ ಆದ್ಯತೆ ನೀಡಲಾಗುವುದು.

ಲಸಿಕೆ ಕೇಂದ್ರ ಬಣ್ಣ ಮೂಲಕ ಗುರುತು
ತಿರುವನಂತಪುರ: 18 ವರ್ಷಕ್ಕಿಂತ ಮೇಲ್ಪಟ್ಟವರ ಹಾಗೂ ಮಕ್ಕಳ ವ್ಯಾಕ್ಸಿನೇಶನ್‌ ಪರಿಣಾಮಕಾರಿಯಾಗಿ ಕಾರ‍್ಯಗತಗೊಳಿಸುವ ಉದ್ದೇಶದಿಂದ ಕ್ರಿಯಾ ಯೋಜನೆ ರೂಪುಗೊಳಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ. ಮಕ್ಕಳ ಲಸಿಕೆ ಕೇಂದ್ರಗಳನ್ನು ಬಣ್ಣದಿಂದ ಗುರುತಿಸಬಹುದಾಗಿದೆ. ಮಕ್ಕಳಿಗೆ ವ್ಯಾಕ್ಸಿನೇಶನ್‌ ಇದೇ ಮೊದಲ ಬಾರಿ ನೀಡಲಾಗುತ್ತಿದ್ದು, ಎಲ್ಲ ಸುರಕ್ಷತಾ ಮಾನಂದಂಡಗಳನ್ನು ಪಾಲಿಸಿ ಲಸಿಕೆ ನೀಡಲಾಗುವುದು. ಮಕ್ಕಳು ಮತ್ತು ದೊಡ್ಡವರ ವ್ಯಾಕ್ಸಿನೇಶನ್‌ಗೆ ಪ್ರತ್ಯೇಕ ವ್ಯಾಕ್ಸಿನೇಶನ್‌ ತಂಡ ರಚಿಸಲಾಗಿದೆ.



Read more