Karnataka news paper

ಕೋವಿಡ್‌ ವಿರುದ್ಧ ಮಕ್ಕಳಿಗೆ ರಕ್ಷಣೆ ನೀಡುವ ಅಭಿಯಾನ ಆರಂಭ; ಇಂದು ನಿಗದಿತ ಸ್ಥಳದಲ್ಲಿ ಮಾತ್ರ, ನಾಳೆಯಿಂದ ಶಾಲೆ-ಕಾಲೇಜಲ್ಲಿ ಲಭ್ಯ!


ಹೈಲೈಟ್ಸ್‌:

  • ರಾಜ್ಯಾದ್ಯಂತ ಸೋಮವಾರದಿಂದ 15ರಿಂದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ನೀಡುವ ಮಹಾಭಿಯಾನ
  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಭೈರವೇಶ್ವರ ನಗರದ ಚಾಲನೆ ನೀಡಲಿದ್ದಾರೆ
  • ”ಜ.3ರಂದು ಸೋಮವಾರ ನಿಗದಿತ ಸ್ಥಳಗಳಲ್ಲಿ ಮಾತ್ರ ಮಕ್ಕಳಿಗೆ ಲಸಿಕೆ; ಜ.4ರ ಮಂಗಳವಾರದಿಂದ ಶಾಲಾ-ಕಾಲೇಜುಗಳಲ್ಲಿ ಲಸಿಕೆ ನೀಡಲು ಸಿದ್ಧತೆ

ಬೆಂಗಳೂರು: ಕೋವಿಡ್‌ನಿಂದ ಮಕ್ಕಳಿಗೆ ರಕ್ಷಣೆ ನೀಡುವ ಮಹತ್ವದ ಕ್ರಮದ ಭಾಗವಾಗಿ ರಾಜ್ಯಾದ್ಯಂತ ಸೋಮವಾರದಿಂದ 15ರಿಂದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ನೀಡುವ ಮಹಾಭಿಯಾನ ನಡೆಯಲಿದೆ. ರಾಜ್ಯ ಮತ್ತು ದೇಶದಲ್ಲಿ ಕೋವಿಡ್‌ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಅಭಿಯಾನಕ್ಕೆ ಹೆಚ್ಚಿನ ಮಹತ್ವ ದೊರೆತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಭೈರವೇಶ್ವರ ನಗರದ ಚಾಲನೆ ನೀಡಲಿದ್ದಾರೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಉಸ್ತುವಾರಿ ಸಚಿವರು ಮತ್ತು ತಾಲ್ಲೂಕು ಮಟ್ಟದಲ್ಲಿ ಶಾಸಕರು ಅಭಿಯಾನ ಉದ್ಘಾಟಿಸಲಿದ್ದಾರೆ. ಲಸಿಕೆ ಅಭಿಯಾನಕ್ಕೆ ಎಲ್ಲ ಕಡೆ ಸಿದ್ಧತೆಗಳನ್ನು ನಡೆಸಲಾಗಿದೆ.

ಶಾಲೆ, ಕಾಲೇಜಲ್ಲಿ ನಾಳೆಯಿಂದ
”ಜ.3ರಂದು ಸೋಮವಾರ ನಿಗದಿತ ಸ್ಥಳಗಳಲ್ಲಿ ಮಾತ್ರ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಜ.4ರ ಮಂಗಳವಾರದಿಂದ ಶಾಲಾ-ಕಾಲೇಜುಗಳಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಥಳೀಯವಾಗಿ ತಾಲ್ಲೂಕು ಆರೋಗ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಲಸಿಕೆ ನೀಡಲಾಗುತ್ತದೆ. ಪ್ರತಿ ದಿನ 5 ರಿಂದ 6 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ” ಎಂದು ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್‌ ತಿಳಿಸಿದ್ದಾರೆ.
ಹೊಸ ವರ್ಷ ಮಕ್ಕಳಿಗೆ ಲಸಿಕೆ ಹರ್ಷ: ಕಲ್ಪತರು ನಾಡಿನಲ್ಲಿ 61,229 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿಕೆ ತಯಾರಿ
”ಸದ್ಯ ಹತ್ತು ದಿನಗಳಿಗಾಗುವಷ್ಟು ಲಸಿಕೆ ಲಭ್ಯವಿದೆ. ಮಧ್ಯಂತರದಲ್ಲಿ ಲಸಿಕೆ ಸರಬರಾಜಾಗುತ್ತದೆ. ಇದರಿಂದ ಲಸಿಕೆ ಕೊರತೆ ಉಂಟಾಗುವುದಿಲ್ಲ. 15ರಿಂದ 18 ವರ್ಷದ ಮಕ್ಕಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಯಾರಿಗೆ, ಯಾವ ಲಸಿಕೆ?
2007ರಲ್ಲಿ ಅಥವಾ ಅದಕ್ಕಿಂತ ಮೊದಲು ಹುಟ್ಟಿದ ಮಕ್ಕಳಿಗೆ ಕೊವ್ಯಾಕ್ಸಿನ್‌ ಲಸಿಕೆ
ಮೊದಲನೇ ಡೋಸ್‌ ಪಡೆದ 28 ದಿನಗಳ ನಂತರ ಎರಡನೇ ಡೋಸ್‌ ಲಸಿಕೆ

ಲಸಿಕೆ ನೀಡಲು ಏನೇನು ಸಿದ್ಧತೆ?

ಎಲ್ಲ ಶಾಲೆ-ಕಾಲೇಜುಗಳಲ್ಲಿ ಸ್ಥಳಾವಕಾಶ, ಅಗತ್ಯ ಸಿಬ್ಬಂದಿ ವ್ಯವಸ್ಥೆ
ನಿಗದಿತ ದಿನ ಲಸಿಕೆ ಪಡೆಯಲು ಸಾಧ್ಯವಾಗದಿದ್ದರೆ ಆರೋಗ್ಯ ಕೇಂದ್ರಗಳಲ್ಲೂಅವಕಾಶ
ಅನ್ಯ ಕಾಯಿಲೆಗಳಿರುವ ಮಕ್ಕಳಿಗೆ ಆರೋಗ್ಯ ಕೇಂದ್ರದಲ್ಲೇ ಲಸಿಕೆ
ಕೋವಿನ್‌ ಪೋರ್ಟಲ್‌ನಲ್ಲಿ ಪ್ರಮಾಣಪತ್ರ ಡೌನ್‌ಲೋಡ್‌ ಅವಕಾಶ
ಶಾಲೆ ಬಿಟ್ಟ ಮಕ್ಕಳಿಗೂ ಹತ್ತಿರದ ಕೇಂದ್ರದಲ್ಲಿ ಲಸಿಕೆ ನೀಡಲು ಕ್ರಮ
ಕೊರೊನಾ ಲಸಿಕೆ ನೋಂದಣಿ ವೇಳೆ ಮಕ್ಕಳಿಗೆ ಆಧಾರ್‌ ಕಾರ್ಡ್ ಕಡ್ಡಾಯವಲ್ಲ..!
ರಾಜ್ಯದಲ್ಲಿ 31.75 ಲಕ್ಷ ವಿದ್ಯಾರ್ಥಿಗಳು ಲಸಿಕೆ ಪಡೆಯಲು ಅರ್ಹತೆ ಹೊಂದಿದ್ದಾರೆ. ಶಿಕ್ಷಣ ಸಂಸ್ಥೆಗಳು ಮಕ್ಕಳ ಪಟ್ಟಿ ಸಿದ್ಧಪಡಿಸಿ, ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುತ್ತದೆ.
ಡಾ. ಆರ್‌. ವಿಶಾಲ್‌, ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ

ಅಭಿಯಾನದ ವ್ಯಾಪ್ತಿ
31.75 ಲಕ್ಷ ಮಕ್ಕಳಿಗೆ ಲಸಿಕೆ
16 ಲಕ್ಷ ಕೋವ್ಯಾಕ್ಸಿನ್‌ ಡೋಸ್‌ ಈಗ ಲಭ್ಯ
ಬಿಬಿಎಂಪಿ ವ್ಯಾಪ್ತಿಯಲ್ಲಿ 5 ಲಕ್ಷ ಮಕ್ಕಳಿಗೆ ಕೋವಿಡ್‌ ಲಸಿಕೆ, ಶಾಲಾ-ಕಾಲೇಜುಗಳಿಗೆ ಲಸಿಕೆ ಸಿಬ್ಬಂದಿ ನಿಯೋಜಿಸಲು ಪಾಲಿಕೆ ಸೂಚನೆ
ಇದುವರೆಗಿನ ಲಸಿಕಾ ಸಾಧನೆ

  • ಮೊದಲ ಡೋಸ್‌: 4.76 ಕೋಟಿ
  • ಎರಡನೇ ಡೋಸ್‌: 3.87 ಕೋಟಿ
  • ಒಟ್ಟು: 8.64 ಕೋಟಿ ಮಂದಿಗೆ



Read more