The New Indian Express
ಮುಂಬೈ: ಹಿಂದಿ ಚಿತ್ರವೊಂದರ ಸ್ಟಾರ್ ಆಗಲು ಆಫರ್ ಸಿಕ್ಕಿರುವುದಾಗಿ ತೆಲುಗು ನಟ ಅಲ್ಲು ಅರ್ಜುನ್ ಹೇಳಿದ್ದಾರೆ. ಆದರೆ, ಇದಕ್ಕಾಗಿ ಅವರ ಉತ್ತರ ಭಾರತದಲ್ಲಿರುವ ಅಭಿಮಾನಿಗಳು ಇನ್ನೊಂದಿಷ್ಟು ದಿನ ಕಾಯಬೇಕಾಗಿದೆ. ಇತ್ತೀಚಿಗೆ ಬಿಡುಗಡೆಯಾಗಿರುವ 39 ವರ್ಷದ ಅಲ್ಲು ಅರ್ಜುನ್ ಅವರ ‘ಪುಷ್ಪ’ ಚಿತ್ರ ವಿಶ್ವದಾದ್ಯಂತ ಈವರೆಗೂ 300 ಕೋಟಿ ಕಲೆಕ್ಷನ್ ಮಾಡಿದೆ.
ಬಾಲಿವುಡ್ ನಲ್ಲಿನ ತಮ್ಮ ಚೊಚ್ಚಲ ಚಿತ್ರದ ಕುರಿತಂತೆ ಮಾತನಾಡಿರುವ ಅಲ್ಲು ಅರ್ಜುನ್, ನನಗೆ ಆಫರ್ ಒಂದು ಬಂದಿದೆ. ಆದರೆ, ಆತುರವೇನಿಲ್ಲ, ಶೀಘ್ರದಲ್ಲಿಯೇ ಅದು ನಡೆಯುವ ವಿಶ್ವಾಸವಿದೆ. ಬೇರೆ ಚಿತ್ರರಂಗದಲ್ಲಿ ಕೆಲಸ ಮಾಡಲು ಧೈರ್ಯ ಬೇಕಾಗುತ್ತದೆ ಎಂದು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರನಾಗಿರುವ ಅಲ್ಲು ಅರ್ಜುನ್, ಬನ್ನಿ, ಆರ್ಯ, ದೇಶಮುದುರು, ಪರುಗು, ಮತ್ತು ಅಲಾ ವೈಕುಂಠಪುರಮುಲೋ ಚಿತ್ರಗಳ ಮೂಲಕ ಪ್ರಸಿದ್ದರಾಗಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಎರಡು ದಶಕಗಳ ಕಾಲ ಮಿಂಚಿರುವ ಅಲ್ಲು ಅರ್ಜುನ್, ಇದೀಗ ಚಿತ್ರ ರಂಗದಲ್ಲಿ ಅಭಿನಯಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಪುಷ್ಪ ಚಿತ್ರದ ಹಿಂದಿ ಆವೃತ್ತಿಯಿಂದ 56.69 ಕೋಟಿ ಕಲೆಕ್ಷನ್ ಆಗಿದ್ದು, ಅಲ್ಲು ಅರ್ಜುನ್ ಸಂತೋಷ ವ್ಯಕ್ತಪಡಿಸಿದ್ದಾರೆ. ಸುಕುಮಾರ್ ನಿರ್ದೇಶನದ ಪುಷ್ಪ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿತ್ತು.