ಹೈಲೈಟ್ಸ್:
- ನಿತ್ಯ ಸಂಜೆ 5 ರಿಂದ 6ರವರೆಗೆ ಕಾರ್ಯಕ್ರಮ
- ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ
- ಒಂದು ದಿನದ ಕರ್ನಾಟಕ ವಾದ್ಯ ಸಂಗೀತ, ಮತ್ತೊಂದು ದಿನ ಇಂಗ್ಲಿಷ್ ವಾದ್ಯ
ಒಂದು ದಿನ ಕರ್ನಾಟಕ ವಾದ್ಯ ಸಂಗೀತ ಕೇಳುವ ಅವಕಾಶ ಸಿಕ್ಕರೆ, ಮತ್ತೊಂದು ದಿನ ಇಂಗ್ಲಿಷ್ ವಾದ್ಯ ಸಂಗೀತ ಕೇಳುವ ಅವಕಾಶ ಸಿಗಲಿದೆ. ಅಂತಹ ಅವಕಾಶವನ್ನು ಅರಮನೆ ಆಡಳಿತ ಮಂಡಳಿ ಪೊಲೀಸ್ ಇಲಾಖೆ ಸಹಯೋಗದಲ್ಲಿ ಆರಂಭಿಸಿದ್ದು, ನಿತ್ಯ ಸಂಜೆ 5 ರಿಂದ 6 ರವರೆಗೆ ಆಲಿಸಬಹುದಾಗಿದೆ.
ಭಾನುವಾರ ಮುಸ್ಸಂಜೆ ಅರಮನೆ ಆವರಣದಲ್ಲಿನ ಭವ್ಯ ವೇದಿಕೆಯಲ್ಲಿ ಆರಂಭಗೊಂಡ ಈ ಪೊಲೀಸ್ ಬ್ಯಾಂಡ್ ವಾದನಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಅರಮನೆ ಝಗಮಗಿಸುವ ದೀಪದ ಬೆಳಕಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಬ್ಯಾಂಡ್ ಬಾರಿಸುವ ಮೂಲಕ ಚಾಲನೆ ನೀಡಿದರು.
ಪೊಲೀಸ್ ಬ್ಯಾಂಡ್ ವಾದನದಲ್ಲಿ ಕಲಾ ರಸಿಕರು, ಕರ್ನಾಟಕ ವಾದ್ಯ ವೃಂದದಿಂದ ಶ್ರೀ ಮಹಾ ಗಣಪತಿ, ರಘುವಂಶ ಸುಧಾ, ಸದಾಮತಿಂ, ಶರವಣಭವ, ಶ್ರೀ ಚಾಮುಂಡೇಶ್ವರಿ ಭಜರೇ, ರಾಗ ರಾಗಿಣಿ ದೇವಿ ಹೀಗೆ ನಾನಾ ಗೀತೆಗಳನ್ನು ಕೇಳಿದರೆ, ಇಂಗ್ಲೀಷ್ ವಾದ್ಯ ವೃಂದದಿಂದ ಸ್ಲಂ ಡಾಗ್ ಮಿಲೇನಿಯರ್ ಚಿತ್ರದ ಜೈಹೋ ಗೀತೆ ಹೀಗೆ ಹಲವು ಗೀತೆಗಳನ್ನು ಕೇಳುವ ಮೂಲಕ ಆನಂದಿಸಿದರು.
ನಿರಂತರ ಒಂದು ಗಂಟೆ ಅರಮನೆ ಆಂಗಳದಲ್ಲಿ ಸೃಷ್ಟಿಯಾಗಿದ್ದ ಪುಷ್ಪ ಲೋಕದಲ್ಲಿ ವಿಹರಿಸುತ್ತಾ, ಪೊಲೀಸ್ ವಾದ್ಯದ ಸಂಗೀತ ಕೇಳುತ್ತಾ ಪುಳಕಿತಗೊಂಡರು. ಶಾಸಕ ಎಲ್ ನಾಗೇಂದ್ರ, ಉಪ ಮೇಯರ್ ಅನ್ವರ್ ಬೇಗ್, ಮುಡಾ ಅಧ್ಯಕ್ಷ ಎಚ್. ವಿ. ರಾಜೀವ್, ಕಾಡಾ ಅಧ್ಯಕ್ಷ ಎನ್. ಶಿವಲಿಂಗಯ್ಯ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್. ಆರ್. ಮಹದೇವ ಸ್ವಾಮಿ, ಖಾದಿ, ಗ್ರಾಮೋದ್ಯೋಗ ಅಭಿವೃದ್ಧಿ ಅಧ್ಯಕ್ಷ ಕೃಷ್ಣಪ್ಪ ಗೌಡ, ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ ಅಧ್ಯಕ್ಷ ಅಪ್ಪಣ್ಣ, ಮೈಲ್ಯಾಕ್ ಅಧ್ಯಕ್ಷ ಎನ್. ವಿ. ಫಣೀಶ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ಜಿಪಂ ಸಿಇಒ ಎ. ಎಂ. ಯೋಗೀಶ್, ಮುಡಾ ಆಯುಕ್ತ ಡಾ. ನಟೇಶ್, ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ. ಎಸ್. ಸುಬ್ರಹ್ಮಣ್ಯ ಇದ್ದರು.
ಪೊಲೀಸ್ ಬ್ಯಾಂಡ್ ಇತಿಹಾಸ ಅನಾವರಣ
103 ವರ್ಷಗಳ ಇತಿಹಾಸವಿರುವ ಮೈಸೂರಿನ ಬ್ಯಾಂಡ್ ಸಂಗೀತಕ್ಕೆ ವಿಶ್ವ ಮಟ್ಟದ ಪ್ರಸಿದ್ಧಿ ಇದೆ. ಮೈಸೂರು ಮಹಾರಾಜರ ಪ್ರೋತ್ಸಾಹದ ಮೇರೆಗೆ ಇಂಗ್ಲಿಷ್ ಬ್ಯಾಂಡ್ ಸಂಗೀತವನ್ನು ಬ್ರಿಟಿಷರಿಂದ ಬಳುವಳಿಯಾಗಿ ಪಡೆಯಲಾಗಿದೆ. ಇಂಗ್ಲಿಷ್ ಮತ್ತು ಶಾಸ್ತ್ರೀಯ ಸಂಗೀತ ಒಟ್ಟುಗೂಡಿರುವ ಈ ಸಂಗೀತ, ಮಹಾರಾಜರು ನಾಡಿಗೆ ಕೊಟ್ಟಿರು ಕೊಡುಗೆಗಳಲ್ಲಿ ಒಂದಾಗಿದೆ. ಮೈಸೂರಿನ ಪೊಲೀಸ್ ಬ್ಯಾಂಡ್ ಅನ್ನು 1951ರಲ್ಲಿ ಸರಕಾರ ಇಲಾಖೆಗೆ ವಹಿಸಿತು. ಅಂದಿನಿಂದ ಪೊಲೀಸ್ ಸಂಗೀತ ಕಲಾವಿದರು ಈ ಕಲೆಯನ್ನು ಮುನ್ನಡೆಸಿದ್ದಾರೆ. ವಿಶ್ವದಲ್ಲೆಡೆ ಬ್ಯಾಂಡ್ ಸಂಗೀತದ ಮಾಧುರ್ಯವನ್ನು ಪಸರಿಸಿದ್ದಾರೆ. ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಪೊಲೀಸ್ ಬ್ಯಾಂಡ್ ಸಂಗೀತಕ್ಕೆ ಮನಸೋತಿದ್ದರು. ಈಗ ಗುಜರಾತ್‌ನಲ್ಲೂ ಪೊಲೀಸ್ ಬ್ಯಾಂಡ್ ಪ್ರಸಿದ್ಧಿಯಾಗಿದೆ. ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರನ್ನು ಪೊಲೀಸ್ ಬ್ಯಾಂಡ್ ಗಮನ ಸೆಳೆದಿದೆ ಎಂದು ಸಂಗೀತ ವಾದ್ಯ ಮೇಳ ಆರಂಭಕ್ಕೂ ಮುನ್ನ ಪೊಲೀಸ್ ಬ್ಯಾಂಡ್ ಇತಿಹಾಸವನ್ನು ಶಾಸಕ ಎಸ್. ಎ. ರಾಮದಾಸ್, ಸಭಿಕರೊಂದಿಗೆ ಹಂಚಿಕೊಂಡರು.