ಹೈಲೈಟ್ಸ್:
- ಭಾನುವಾರ ಡಿಸೆಂಬರ್ 12ರ ಸಂಜೆ 7.22ಕ್ಕೆ ಭೂಮಿಯ ಬಳಿ ಬಂದಿದ್ದ ಧೂಮಕೇತು
- ಬೈನಾಕ್ಯುಲರ್ ಅಥವಾ ದೂರದರ್ಶಕ ಬಳಸಿ ನೋಡಬಹುದಿತ್ತು
- ಸೆಕೆಂಡ್‌ಗೆ 47 ಕಿ. ಮೀ. ವೇಗದಲ್ಲಿ ಬಂದಷ್ಟೇ ವೇಗವಾಗಿ ಹೊರಟು ಹೋದ ಧೂಮಕೇತು
ಸೆಕೆಂಡ್‌ಗೆ 47 ಕಿ. ಮೀ. ವೇಗದಲ್ಲಿ ಸಾಗುವ ಲಿಯೋನಾರ್ಡ್ ಎಂಬ ಈ ಧೂಮಕೇತು, ಸರಿ ಸುಮಾರು 523 ಶತಕೋಟಿ ಕಿ. ಮೀ. ದೂರದಿಂದ ಭೂಮಿಯ ಬಳಿಗೆ ಬಂದು, ಇದೀಗ ದೂರ ಸರಿಯುತ್ತಿದೆ. 70 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭೂಮಿಗೆ ಇಷ್ಟು ಸಮೀಪ ಬಂದಿದ್ದ ಲಿಯೋನಾರ್ಡ್ ಧೂಮಕೇತು, ಭೂಮಿಯಿಂದ 35 ದಶಲಕ್ಷ ಕಿ. ಮೀ. ದೂರದಲ್ಲಿ ಹಾದು ಹೋಗಿದೆ.
ಭಾನುವಾರ ಡಿಸೆಂಬರ್ 12ರ ಸಂಜೆ 7.22ಕ್ಕೆ ಈ ಧೂಮಕೇತು ಭೂಮಿಯ ಬಳಿ ಬರುತ್ತೆ ಎಂದು ನಾಸಾ ಮಾಹಿತಿ ನೀಡಿತ್ತು. ಜನಸಾಮಾನ್ಯರು ಬೈನಾಕ್ಯುಲರ್ ಅಥವಾ ದೂರದರ್ಶಕ ಬಳಸಿ ಈ ಧೂಮಕೇತುವನ್ನು ಕಣ್ತುಂಬಿಕೊಳ್ಳಬಹುದಾಗಿತ್ತು. ಇದೇ ಆಸೆಯಲ್ಲಿದ್ದ ಹಲವರು ಬೆಂಗಳೂರಿನಲ್ಲಿ ಆಗಸದತ್ತ ದೃಷ್ಟಿ ನೆಟ್ಟು ಈಗ ನಿರಾಶರಾಗಿದ್ದಾರೆ. ಏಕೆಂದರೆ, ಬೆಂಗಳೂರಲ್ಲಿ ಕೆಲವೆಡೆ ಮೋಡಕವಿದ ವಾತಾವರಣವಿದ್ದರೆ, ಬಹುತೇಕ ನಗರದ ಪ್ರಕಾಶಮಾನ ಬೆಳಕಿನಿಂದಾಗಿ ಆಗಸದಲ್ಲಿ ಧೂಮಕೇತುವಿನ ದರ್ಶನವೇ ಆಗಲಿಲ್ಲ.
ಈವರೆಗೆ ನಮ್ಮ ಸೌರಮಂಡಲವೊಂದರಲ್ಲೇ 3,700 ಧೂಮಕೇತುಗಳನ್ನು ಗುರ್ತಿಸಲಾಗಿದೆ. ಇದೀಗ ಭೂಮಿಯ ಬಳಿ ಬಂದಿದ್ದ ಲಿಯನಾರ್ಡೋ ಧೂಮಕೇತು ಕೂಡಾ ಸೂರ್ಯನನ್ನು ಸುತ್ತುತ್ತದೆ. ಸೆಕೆಂಡ್‌ಗೆ 47 ಕಿ. ಮೀ. ವೇಗದಲ್ಲಿ ಈ ಧೂಮಕೇತು ಸೂರ್ಯನನ್ನ ಪ್ರದಕ್ಷಿಣೆ ಹಾಕುತ್ತದೆ. ಭಾನುವಾರ ಸಂಜೆ 7:22ಕ್ಕೆ ಭೂಮಿಗೆ ಅತಿ ಸಮೀಪ ಬಂದಿದ್ದ ಈ ಧೂಮಕೇತುವನ್ನು ಬರಿಗಣ್ಣಿನಲ್ಲಿ ನೋಡಬಹುದು ಎಂದು ಬಾಹ್ಯಾಕಾಶ ವಿಜ್ಞಾನಿಗಳು ಹೇಳಿದ್ದರಾದರೂ, ಬೆಂಗಳೂರಿನಂಥಾ ಮಹಾನಗರಗಳಲ್ಲಿ ವಾಸಿಸುವ ಜನರಿಗೆ ಈ ಸೌಭಾಗ್ಯ ಇರಲಿಲ್ಲ. ನಗರದ ದೀಪಗಳ ಬೆಳಕು ಆಗಸಕ್ಕೆ ಪ್ರತಿಫಲಿಸುವ ಕಾರಣ, ಆಗಸದ ಈ ಅಚ್ಚರಿ ಜನರ ಕಣ್ಣಿಂದ ದೂರವಾಯ್ತು.
ಅತ್ಯಂತ ವೇಗವಾಗಿ ಸಾಗುವ ಈ ಧೂಮಕೇತು ಭಾನುವಾರ ಸಂಜೆ 7:22ಕ್ಕೆ ಕೆಲ ಸೆಕೆಂಡುಗಳ ಕಾಲ ದರ್ಶನ ನೀಡಿ ಮತ್ತೆ ವಿಶಾಲ ಆಗಸದಲ್ಲಿ ಅದೃಶ್ಯವಾಯ್ತು.
ಸಾಮಾನ್ಯವಾಗಿ ಧೂಮಕೇತುಗಳು ಉದ್ದವಾದ ಬಾಲವನ್ನು ಹೊಂದಿರುತ್ತವೆ. ಧೂಮಕೇತುವಿನ ಮೂತಿ ಗಟ್ಟಿಯಾಗಿರುತ್ತದೆ. ಇದು ಬಿಳಿ ಬಣ್ಣದಲ್ಲಿದ್ದ ಹೊಳೆಯುತ್ತಿರುತ್ತದೆ. ಘನ ವಸ್ತುವಿನ ರೀತಿ ಕಾಣುವ ಧೂಮಕೇತುವಿನ ಮೂತಿಯ ಹಿಂದೆ ಕಿ. ಮೀ. ಗಟ್ಟಲೆ ಉದ್ದದ ಬಾಲ ಇರುತ್ತದೆ. ಈ ಬಾಲವು ಧೂಳಿನ ಕಣಗಳು ಹಾಗೂ ಕೆಲವೊಮ್ಮೆ ಹಿಮ ಹೊಂದಿರುತ್ತವೆ ಎಂದೂ ಅಂದಾಜಿಸಲಾಗಿದೆ.
ಇದೀಗ ಭೂಮಿಯ ಬಳಿ ಬಂದು ದೂರವಾಗಿರುವ ಲಿಯೋನಾರ್ಡ್ ಧೂಮಕೇತುವಿನ ಚಿತ್ರವನ್ನು ಡಿಸೆಂಬರ್ 7ರಂದೇ ಸೆರೆ ಹಿಡಿಯಲಾಗಿತ್ತು. ಸ್ಪೇನ್‌ನ ದೂರದರ್ಶಕದ ಮೂಲಕ ಈ ಧೂಮಕೇತುವಿನ ಚಿತ್ರವನ್ನು ಸೆರೆ ಹಿಡಿಯಲಾಗಿತ್ತು.