PTI
ನವದೆಹಲಿ: ಭಾರತ, ಪಾಕಿಸ್ತಾನ ತಮ್ಮ ದೇಶಗಳಲ್ಲಿರುವ ಪರಮಾಣು ವಿದ್ಯುತ್ ಸ್ಥಾವರಗಳು, ಪರಮಾಣು ಇಂಧನಕ್ಕೆ ಸಂಬಂಧಿಸಿದ ಇತರ ಸೌಲಭ್ಯಗಳ ಮಾಹಿತಿಯನ್ನು ಸತತ 31 ವರ್ಷವೂ ವಿನಿಮಯ ಮಾಡಿಕೊಂಡಿವೆ.
ಪರಸ್ಪರ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡುವುದನ್ನು ತಡೆಯುವ ಉದ್ದೇಶದಿಂದ ಮಾಡಿಕೊಂಡ ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ ಶನಿವಾರ ಉಭಯ ದೇಶಗಳು ರಾಜತಾಂತ್ರಿಕ ಮಾರ್ಗಗಳ ಮೂಲಕ ನವದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿ ಮಾಹಿತಿ ವಿನಿಮಯ ಮಾಡಿಕೊಂಡಿವೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಶನಿವಾರ ತಿಳಿಸಿದೆ.
ಜನವರಿ 1 ರಂದು ತಮ್ಮ ಪರಮಾಣು ಕೇಂದ್ರಗಳು, ಇತರ ಸೌಲಭ್ಯಗಳ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಉಭಯ ದೇಶಗಳು 1991ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ಗಡಿಯಾಚೆಗಿನ ಭಯೋತ್ಪಾದನೆ, ಕಾಶ್ಮೀರ ವಿಚಾರದಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಮುಂದುವರಿದಿರುವ ಸಮಯದಲ್ಲೂ ಒಪ್ಪಂದದ ಅನುಷ್ಠಾನ ಎಂದಿನಂತೆ ಮುಂದುವರಿದಿರುವುದು ಮಹತ್ವಪಡೆದುಕೊಂಡಿದೆ.