ಹೈಲೈಟ್ಸ್:
- ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿರುವ ರಾಷ್ಟ್ರೀಯ ಸಂಸತ್ ಸಂಕೀರ್ಣ
- 1884ರಲ್ಲಿ ನಿರ್ಮಿಸಿದ್ದ ಪುರಾತನ ಸಂಸತ್ ಭವನದಲ್ಲಿ ಅಗ್ನಿ ಅನಾಹುತ
- ಕಟ್ಟಡದ ಒಳಗಿದ್ದ ಬಹಳ ಅಪರೂಪದ ಮತ್ತು ಅಮೂಲ್ಯ ಪುಸ್ತಕಗಳು ಭಸ್ಮ
ಧಗಧಗನೆ ಉರಿಯುತ್ತಿದ್ದ ಬೆಂಕಿಯ ಜ್ವಾಲೆಗಳು ಏಳು ಗಂಟೆಗೂ ಅಧಿಕ ಸಮಯ ತನ್ನ ಕೆನ್ನಾಲಿಗೆಗಳನ್ನು ಹರಡಿತ್ತು. ಇದು ದಕ್ಷಿಣ ಆಫ್ರಿಕಾ ಸಂಸತ್ ಸಂಕೀರ್ಣಕ್ಕೆ ಅಪಾರ ಹಾನಿ ಮಾಡಿದೆ ಎಂದು ವರದಿಯಾಗಿದೆ. ಸುಮಾರು 70 ಅಗ್ನಿಶಾಮಕ ತಂಡಗಳು ಬೆಂಕಿಯನ್ನು ನಂದಿಸಲು ಇನ್ನೂ ಪರದಾಡುತ್ತಿವೆ. ಭಾನುವಾರ ಬೆಳಿಗ್ಗೆ ಈ ಬೆಂಕಿ ಕಾಣಿಸಿಕೊಂಡಿದೆ ಎಂದು ಕೇಪ್‌ಟೌನ್‌ನ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ ವಕ್ತಾರ ಜರ್ಮೈನ್ ಕಾರೆಲ್ಸ್ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿ ಸಾವು..
ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೊಸಾ, ಸಚಿವರಾದ ಮೊಂಡ್ಲಿ ಗುಂಗುಬೆಲೆ, ಪ್ಯಾಟ್ರಿಕಾ ಡಿ ಲಿಲ್ಲೆ, ಜಿಜಿ ಕೊಡ್ವಾ ಮುಂತಾದವರು ಹಾನಿಗೊಳಗಾದ ಸಂಸತ್ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧ್ಯಕ್ಷ ಸಿರಿಲ್ ತಿಳಿಸಿದ್ದಾರೆ.
ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ. ಹಳೆ ಅಸೆಂಬ್ಲಿ ಕಟ್ಟಡದ ಮಹಡಿ ಕುಸಿದು ಬಿದ್ದಿದ್ದು, ಸಂಪೂರ್ಣ ಸುಟ್ಟುಹೋಗಿದೆ. ಬೆಂಕಿಗೆ ಕಾರಣ ಇದುವರೆಗೂ ಗೊತ್ತಾಗಿಲ್ಲ ಎಂದು ಸುರಕ್ಷತೆ ಮತ್ತು ಭದ್ರತೆ ಸಮಿತಿ ಸದಸ್ಯ ಜೀನ್ ಪಿಯರ್ ಸ್ಮಿತ್ ತಿಳಿಸಿದ್ದಾರೆ.
ಹಡಗಿನಲ್ಲಿ ಭೀಕರ ಅಗ್ನಿ ಅನಾಹುತ: ಸಿಹಿನಿದ್ದೆಯಲ್ಲಿದ್ದವರನ್ನು ಬಲಿ ಪಡೆದ ಬೆಂಕಿ, ಕನಿಷ್ಠ 37 ಸಾವು
ಈ ಐತಿಹಾಸಿಕ ಕಟ್ಟಡವು ಬಹಳ ಅಪರೂಪದ ಸಾವಿರಾರು ಪುಸ್ತಕಗಳನ್ನು ಹೊಂದಿತ್ತು. ಜತೆಗೆ ಹಿಂದಿನ ಆಫ್ರಿಕಾದ ರಾಷ್ಟ್ರಗೀತೆ ‘ದಕ್ಷಿಣ ಆಫ್ರಿಕಾದ ಧ್ವನಿ’ಯ ಮೂಲ ಪ್ರತಿ ಕೂಡ ಹಾನಿಗೊಳಗಾಗಿದೆ. ಇಡೀ ಕಟ್ಟಡ ಬೆಂಕಿ ಮತ್ತು ಹೊಗೆಯಿಂದ ಹಾನಿಗೊಳಗಾಗಿದೆ. ಜತೆಗೆ ಅಗ್ನಿಶಾಮಕ ದಳ ಬಳಸಿರುವ ನೀರಿನಿಂದ ಕಾಗದಪತ್ರಗಳು ನಾಶವಾಗಿವೆ. ಸಂಸತ್ ಕಟ್ಟಡದ ಅತಿ ಹಳೆಯ ವಿಭಾಗದಲ್ಲಿ ನಸುಕಿನ 3 ಗಂಟೆಗೆ ಬೆಂಕಿ ಹೊತ್ತಿಕೊಂಡಿತ್ತು. ಈ ಕಟ್ಟಡವನ್ನು 1884ರಲ್ಲಿ ನಿರ್ಮಿಸಲಾಗಿತ್ತು. ಇಲ್ಲಿನ ಕೊಠಡಿಗಳು ಮರದಿಂದ ಮಾಡಿದ್ದಾಗಿದ್ದು, ಒಂದು ಕಾಲದಲ್ಲಿ ಸಂಸದರು ಇಲ್ಲಿ ಕೂತು ಕಲಾಪದಲ್ಲಿ ಭಾಗವಹಿಸುತ್ತಿದ್ದರು. ಬೆಂಕಿಯ ಜ್ವಾಲೆಗಳು ಪಕ್ಕದ, ಈಗ ಬಳಕೆಯಾಗುತ್ತಿರುವ ಹೊಸ ಸಂಕೀರ್ಣಕ್ಕೂ ಆವರಿಸಿದ್ದವು.