Karnataka news paper

ರಾಮನಗರ: ನಿಷೇಧಾಜ್ಞೆ ಉಲ್ಲಂಘಿಸಿ ಹೊಸ ವರ್ಷಾಚರಣೆ ಪಾರ್ಟಿ; ರೆಸಾರ್ಟ್ ಮಾಲೀಕನ ಬಂಧನ


The New Indian Express

ರಾಮನಗರ: ರಾಮನಗರದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಹೊಸ ವರ್ಷಾಚರಣೆ ಪಾರ್ಟಿ ಆಯೋಜಿಸಿದ್ದ ಆರೋಪದ ಮೇರೆಗೆ ರೆಸಾರ್ಟ್ ಮಾಲೀಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯ ಬಳಿಯ ರೆಸಾರ್ಟ್ ನಲ್ಲಿ ಕೋವಿಡ್ ಮತ್ತು ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸಿ, ಹೊಸ ವರ್ಷದ ಸಂಭ್ರಮಾಚರಣೆ ತೊಡಗಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದು, ಪಾರ್ಟಿ ಆಯೋಜಿಸಿದ್ದ ರೆಸಾರ್ಟ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಓಮಿಕ್ರಾನ್ ವೈರಸ್, ಕೋವಿಡ್ 3ನೇ ಅಲೆ ಭೀತಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಬ್ರೇಕ್ ಹಾಕಿ ಕಠಿಣ ನಿಯಮಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ರಾಮನಗರ ಜಿಲ್ಲೆಯ ಕಣ್ವ ಜಲಾಶಯದ ಸಮೀಪದ ಟ್ರೀಕ್ಯೂಟ್ರಾ ರೆಸಾರ್ಟ್‌ನಲ್ಲಿ ಈ ಟಫ್ ರೂಲ್ಸ್‌ಗಳನ್ನು ಗಾಳಿಗೆ ತೂರಿ ಪಾರ್ಟಿ ಅಯೋಜಿಸಲಾಗಿತ್ತು.

ನ್ಯೂ ಇಯರ್ ಸೆಲೆಬ್ರೇಷನ್‌ಗೆ ಬ್ರೇಕ್ ಬಿದ್ದ ಹಿನ್ನಲೆಯಲ್ಲಿ ಬೆಂಗಳೂರು ಮತ್ತಿತರ ಕಡೆಯಿಂದ ನೂರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬಂದು ಮೋಜು ಮಸ್ತಿಯಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಸಂಭ್ರಮಾಚರಣೆಗೆ ಬ್ರೇಕ್ ಹಾಕಿದಲ್ಲದೇ ರೆಸಾರ್ಟ್ ಮಾಲೀಕನ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಮೂಲಗಳ ಪ್ರಕಾರ ಆನ್‌ಲೈನ್ ಬುಕ್ಕಿಂಗ್ ಮೂಲಕ ನ್ಯೂ ಇಯರ್ ಸೆಲೆಬ್ರೇಷನ್ ಪಾರ್ಟಿಗೆ ರೆಸಾರ್ಟ್ ಸರ್ವ ರೀತಿಯಲ್ಲೂ ತಯಾರಾಗಿತ್ತು. ಅಲ್ಲದೇ ಬೆಟ್ಟಗುಡ್ಡಗಳ ತಪ್ಪಲು, ಹಸಿರಿನಿಂದ ಕಂಗೊಳಿಸುತ್ತಿರುವ ಕಣ್ವ ಜಲಾಶಯದ ಬ್ಯಾಕ್ ವಾಟರ್ ಬಳಿಯ ರೆಸಾರ್ಟ್‌ನಲ್ಲಿ ಪಾರ್ಟಿ ಎಂದಾಗ ಜನ ತಾ ಮುಂದು, ನಾ ಮುಂದು ಎಂಬಂತೆ ಇಲ್ಲಿಗೆ ಆಗಮಿಸಿ ಮದ್ಯದ ನಶೆಯಲ್ಲಿ ಮೈಮರೆತು ಸೆಲೆಬ್ರೇಷನ್‌ಗೆ ಮುಂದಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ನೇತೃತ್ವದಲ್ಲಿ ರಾಮನಗರ ಪೊಲೀಸರು ತಡರಾತ್ರಿ ದಿಢೀರ್ ದಾಳಿ ನಡೆಸಿ ಮೋಜು ಮಸ್ತಿಗೆ ಬ್ರೇಕ್ ಹಾಕಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮ್ಯೂಸಿಕ್ ಸೌಂಡ್ ಇರುವಂತಿಲ್ಲ, ಐದಕ್ಕಿಂತ ಹೆಚ್ಚು ಜನ ಗುಂಪು ಸೇರಬಾರದು, 10 ಗಂಟೆಯ ಬಳಿಕ ಪಬ್, ಬಾರ್‌ಗಳಲ್ಲಿ ಕೂತು ಕುಡಿಯುವಂತಿಲ್ಲ, ರಸ್ತೆಯಲ್ಲಿ ಕುಣಿದು ಕುಪ್ಪಳಿಸುವಂತಿಲ್ಲ ಎಂದು ರಾಮನಗರ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಜಿಲ್ಲೆಯ ರೆಸಾರ್ಟ್‌ನಲ್ಲಿ ಶೇಕಡ 50ರಷ್ಟು ಮಂದಿಗೆ ಅವಕಾಶ ಹಾಗೂ ಪ್ರವಾಸಿ ತಾಣಗಳಿಗೆ ನೋ ಎಂಟ್ರಿ ಎಂದು ಕಟ್ಟುನಿಟ್ಟಿನ ರೂಲ್ಸ್ ಜಾರಿಗೆ ತಂದಿದೆ. ಇಷ್ಟೆಲ್ಲ ಟಫ್ ರೂಲ್ಸ್ ಇದ್ದರೂ, ಟ್ರೀಕ್ಯೂಟ್ರಾ ರೆಸಾರ್ಟ್‌ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಅಲ್ಲದೇ ನೂರಾರು ಟೆಂಟ್‌ಗಳನ್ನು ಹಾಕಿ ಇಲ್ಲಿ ಜನ ತಂಗಲು ಸಹ ವ್ಯವಸ್ಥೆ ಮಾಡಲಾಗಿತ್ತು. ಇನ್ನು ರೆಸಾರ್ಟ್‌ನಲ್ಲಿ ಯುವಕ, ಯುವತಿಯರು ಸೇರಿದಂತೆ ಹಲವರು ಮದ್ಯದ ನಶೆಯಲ್ಲೇ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಇವರಿಗೆ ಪೊಲೀಸರು ಬೈದು, ಬುದ್ದಿವಾದ ಹೇಳಿ ವಾಪಸ್ ಕಳಿಸಿದ್ದರು.

ರೆಸಾರ್ಟ್‌ನಲ್ಲಿ ಹಾಕಲಾಗಿದ್ದ ಶಾಮಿಯಾನ, ಟೆಂಟ್, ಮ್ಯೂಸಿಕ್ ಸಿಸ್ಟಮ್, ಮದ್ಯದ ಬಾಟಲ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದು, ಟ್ರೀಕ್ಯೂಟ್ರಾ ರೆಸಾರ್ಟ್ ಮಾಲೀಕ ಸ್ವಾಮಿ ಮೇಲೆ ಎಪಿಡೆಮಿಕ್ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ಪಾರ್ಟಿ ಸಂಘಟಿಸಿದ ರೆಸಾರ್ಟ್ ಮಾಲೀಕ ಸ್ವಾಮಿ ಎಂ.ಕೆ. ದೊಡ್ಡಿ ಪೊಲೀಸರ ವಶದಲ್ಲಿದ್ದಾರೆ.
 



Read more