Karnataka news paper

ತುಮಕೂರಿ ಕರಿಬಸವಸ್ವಾಮಿ ಮಠದ ಆನೆ ಅಪಹರಣ ಯತ್ನ..! ಸರ್ಕಸ್ ಕಂಪನಿಗೆ ಮಾರಲು ಸಂಚು..?


ಹೈಲೈಟ್ಸ್‌:

  • ಅರಣ್ಯ ಇಲಾಖೆ ಅಧಿಕಾರಿಗಳೇ ಶಾಮೀಲು ಆರೋಪ
  • ಚಿಕಿತ್ಸೆ ನೆಪದಲ್ಲಿ ಕರೆದೊಯ್ದು ಸಾಗಾಟಕ್ಕೆ ಸಂಚು..?
  • ಕುಣಿಗಲ್‌ನಲ್ಲಿ ಮಠದ ಭಕ್ತರಿಗೆ ಸಿಕ್ತು ಆನೆ ಲಕ್ಷ್ಮಿ

ತುಮಕೂರು: ನಗರದ ಹೊರಪೇಟೆಯ ಕರಿಬಸವಸ್ವಾಮಿ ಮಠದ ಆನೆಯನ್ನು ಅಪಹರಿಸುವ ಯತ್ನ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಕರಿ ಬಸವಸ್ವಾಮಿ ಮಠದ ಲಕ್ಷ್ಮಿ ಎಂಬ 30 ವರ್ಷದ ಆನೆಯನ್ನು ಶುಕ್ರವಾರ ಚಿಕಿತ್ಸೆ ನೆಪದಲ್ಲಿ ಮಠದಿಂದ ಕರೆದೊಯ್ದು ಗುಜರಾತಿಗೆ ಸಾಗಿಸುವ ಪ್ರಯತ್ನ ನಡೆದಿತ್ತು. ಕುಣಿಗಲ್‌ನಲ್ಲಿ ಆನೆ ಸಿಕ್ಕಿದ್ದು, ಪೊಲೀಸರ ನೆರವಿನಿಂದ ಶ್ರೀಮಠಕ್ಕೆ ವಾಪಸ್‌ ಕರೆ ತರಲಾಗಿದೆ.

ಚಿಕಿತ್ಸೆ ಹೆಸರಲ್ಲಿ ಅಪಹರಣ ಯತ್ನ: ಆನೆಯ ಹೊಟ್ಟೆಯಲ್ಲಿ ಗಡ್ಡೆಯಿದೆ. ಚಿಕಿತ್ಸೆಗೆ ಬನ್ನೇರುಘಟ್ಟಕ್ಕೆ ಕರೆದುಕೊಂಡು ಹೋಗಿ ಬಳಿಕ ಹಿಂತಿರುಗಿಸುತ್ತೇವೆಂದು ಅರಣ್ಯ ಇಲಾಖೆ ಅಧಿಕಾರಿಗಳೇ ಮಠಕ್ಕೆ ಲಾರಿಯೊಂದಿಗೆ ಬಂದಿದ್ದರು. ಭಕ್ತರು ಹಾಗೂ ಮಠದವರಿಗೆ ನಂಬಿಕೆ ಬರಲೆಂದು ಆ ಆನೆಯ ನಾಲ್ವರು ಮಾವುತರನ್ನೂ ಜತೆಗೆ ಕಳುಹಿಸಿ ಕೊಡಿ ಎಂದು ಕರೆದುಕೊಂಡು ಹೋಗಿದ್ದಾರೆ. ದಾಬಸ್‌ಪೇಟೆಯಲ್ಲಿ ಗುಜರಾತಿನವರು ಎನ್ನಲಾಗುತ್ತಿರುವ ನಾಲ್ವರು ಮಾವುತರು ಅರಣ್ಯ ಇಲಾಖೆ ಅಧಿಕಾರಿಗಳಿದ್ದ ತಂಡವನ್ನು ಸೇರಿಕೊಂಡು ಮಠದ ಆನೆಯ ಮಾವುತರ ಮೇಲೆ ಹಲ್ಲೆ ನಡೆಸಿ ವಾಪಸ್‌ ಕಳುಹಿಸಿದ್ದಾರೆ. ಲಾರಿ ಚಾಲಕನನ್ನು ಬೆದರಿಸಿ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಕುಣಿಗಲ್‌ನಲ್ಲಿ ಸಿಕ್ಕ ಲಕ್ಷ್ಮಿ: ಬಿಜೆಪಿ ಎಸ್‌ಟಿ ಮೋರ್ಚಾದ ಕಾರ್ಯದರ್ಶಿ ರಾಕೇಶ್‌ ಸೇರಿದಂತೆ ಶ್ರೀಮಠದ ಭಕ್ತರಿಗೆ ಅನುಮಾನ ಬಂದು ಬನ್ನೇರುಘಟ್ಟಕ್ಕೆ ಕಾರಿನಲ್ಲಿ ತೆರಳಿದ್ದಾರೆ. ಅಲ್ಲಿ ತಮ್ಮ ಆನೆ ಇರಲಿಲ್ಲ. ಜತೆಗೆ ಅದೇ ಸಮಯದಲ್ಲಿ ಮಾವುತರ ಮೇಲೆ ಹಲ್ಲೆ ಮಾಡಿ ವಾಪಸ್‌ ಕಳುಹಿಸಿರುವುದು ತಿಳಿದು ಬಂದಿದ್ದು, ಶಂಕೆ ಖಚಿತವಾಗಿದೆ. ಲಾರಿ ಚಾಲಕನಿಗೆ ಕರೆ ಮಾಡಿದರೆ ಆತ ಸಂಪರ್ಕಕ್ಕೆ ಸಿಗಲಿಲ್ಲ. ಹೀಗಿರುವಾಗ ಸ್ವಲ್ಪ ಸಮಯದ ಬಳಿಕ ಲಾರಿ ಚಾಲಕನೇ ಕರೆ ಮಾಡಿ ಕುಣಿಗಲ್‌ನ ನಾರಸಂದ್ರ ಗ್ರಾಮದಲ್ಲಿ ಆನೆಯನ್ನು ಹಿಡಿದಿಟ್ಟುಕೊಂಡಿರುವುದಾಗಿ ಮಾಹಿತಿ ನೀಡುತ್ತಾನೆ. ಕೂಡಲೇ ಸ್ಥಳೀಯ ಪೊಲೀಸರ ಸಹಾಯದಿಂದ ಆನೆಯನ್ನು ಪತ್ತೆ ಮಾಡಿ ಶ್ರೀಮಠಕ್ಕೆ ಕರೆತರಲಾಗಿದೆ.

ಆನೆಗೆ ಗಾಯ: ಲಕ್ಷ್ಮಿಯ ಮೈಮೇಲೆ ಸಾಕಷ್ಟು ಗಾಯಗಳಾಗಿದ್ದು, ಗುಜರಾತಿನ ಮಾವುತರಿಗೆ ಬಗ್ಗದಿದ್ದಾಗ ಜೆಸಿಬಿಯಿಂದ ಆಕೆಯನ್ನು ಲಾರಿಯಿಂದ ಕೆಳಕ್ಕೆ ದಬ್ಬಿ ಹಿಂಸಿಸಲಾಗಿದೆ ಎಂಬ ಆರೋಪ ಮಠದ ಭಕ್ತರು ಹಾಗೂ ಶ್ರೀಗಳದ್ದಾಗಿದೆ.

ಜೆಮಿನಿ ಸರ್ಕಸ್‌ನಿಂದ ರಕ್ಷಿಸಿದ ನಂತರ ಅರಮನೆಯಲ್ಲಿದ್ದ ನಾಲ್ಕು ಆನೆ ಗುಜರಾತ್‌ಗೆ ಸ್ಥಳಾಂತರ
ಪೂರ್ವಯೋಜಿತ ಸಂಚು

ಆನೆ ಅಪಹರಣದ ಯತ್ನ ಪೂರ್ವ ಯೋಜಿತವಾಗಿದೆ. ಮಾವುತರು ಆನೆ ಹಿಡಿದುಕೊಂಡು ಭಿಕ್ಷೆ ಬೇಡುತ್ತಾರೆ, ಹಿಂಸಿಸುತ್ತಾರೆಂದು ಪ್ರಾಣಿ ದಯಾ ಸಂಘದವರೂ ಕೋರ್ಟ್‌ ಮೆಟ್ಟಿಲೇರಿದ್ದು, ತಾನು ನಿಮ್ಮ ಪರ ವಾದ ಮಾಡುತ್ತೇನೆಂದು ಶ್ರೀ ಮಠಕ್ಕೆ ಪರಿಚಯವಾದ ದೇವರಾಜು ಎಂಬ ವ್ಯಕ್ತಿಯೇ ಕೃತ್ಯದ ಕೀಲಿ ಕೈ ಎನ್ನಲಾಗುತ್ತಿದೆ. ಮಠದ ಹಿರಿಯ ಶ್ರೀ ಕರಿ ಬಸವ ಸ್ವಾಮೀಜಿ ಅವರಿಗೆ 91 ವರ್ಷ. ಭಯ, ಭಕ್ತಿ, ವಿದೇಯತೆಯಿಂದ ಮಾತನಾಡಿದ ದೇವರಾಜನನ್ನು ಶ್ರೀಗಳು ನಂಬಿದ್ದರು. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಸಹ ಜತೆಗೂಡಿದ್ದಾರೆಂಬ ಆರೋಪವಿದೆ. ಆನೆಗೆ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಕಳೆದ 4 ತಿಂಗಳಲ್ಲಿ 3 ಬಾರಿ ಮಠದಿಂದ ಕರೆದುಕೊಂಡು ಹೋಗಿ ವಾರ ಅಥವಾ ವಾರದೊಳಗೆ ಹಿಂತಿರುಗಿಸಿದ್ದರೆಂದು ತಿಳಿದುಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅವರ ಪತ್ರವನ್ನೇ ನಂಬಿ ಈ ಬಾರಿಯೂ ಆನೆಯನ್ನು ಕಳುಹಿಸಿಕೊಡಲಾಗಿತ್ತು ಎನ್ನಲಾಗುತ್ತಿದೆ.

ಸರ್ಕಸ್‌ ಕಂಪನಿಗೆ ಮಾರಲು ಹೊಂಚು?

ಶ್ರೀಮಠದ ಸಂಪ್ರದಾಯದಂತೆ, ಜಾತ್ರೆ ಸಮಯದಲ್ಲಿ ತೇರು, ಬ್ರಹ್ಮ ರಥೋತ್ಸವದಲ್ಲಿ ಆನೆ ಭಾಗಿಯಾಗುತ್ತಿತ್ತು. 1994ರಲ್ಲಿ ಈ ಲಕ್ಷ್ಮಿ ಎಂಬ ಆನೆಯನ್ನು ಶ್ರೀ ಕರಿಬಸವಸ್ವಾಮಿಗಳು ಅರಣ್ಯ ಇಲಾಖೆಯಿಂದ ಕೊಂಡು ಶ್ರೀಮಠಕ್ಕೆ ತಂದಿದ್ದರು. ಶ್ರೀಮಠದಲ್ಲಿ ಪಳಗಿರುವ ಲಕ್ಷ್ಮಿ ತೀರ ಸೌಮ್ಯ ಸ್ವಭಾವದವಳು. ತುಮಕೂರು ನಗರದಲ್ಲಿ ಆಗಾಗ್ಗೆ ಸಂಚರಿಸುವಾಗ ಎಲ್ಲರ ಗಮನ ಸೆಳೆಯುವುದನ್ನು ಸ್ಮರಿಸಬಹುದು. ಈ ಆನೆಯನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳಬಹುದು ಎಂಬುದು ದುಷ್ಕರ್ಮಿಗಳಿಗೆ ತಿಳಿದಿದ್ದು, ಇದೇ ಕಾರಣದಿಂದ ಸರ್ಕಸ್‌ ಕಂಪನಿಗೆ ಮಾರಲು ಹೊಂಚು ಹಾಕಿದ್ದರು ಎನ್ನಲಾಗುತ್ತಿದೆ. ಆದರೆ, ಅರಣ್ಯ ಇಲಾಖೆಯವರೇ ಇದಕ್ಕೆ ಸ್ಪಷ್ಟ ಉತ್ತರ ನೀಡಬೇಕು. ಆದರೆ ಯಾವೊಬ್ಬ ಅಧಿಕಾರಿಯೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಭಕ್ತರ ಜತೆ ಉಡಾಫೆಯಾಗಿ ಮಾತನಾಡಿದ್ದಾರೆಂಬ ಆರೋಪವೂ ಇದೆ.

ದುಬಾರೆಯಲ್ಲಿ ದೋಣಿಗಳೇ ಸಿಗದೆ ಪ್ರವಾಸಿಗರ ಗೋಳು: ಆನೆ ಶಿಬಿರಕ್ಕೆ ಹೋಗಲು ಹರಸಾಹಸ..!
‘ಆನೆಯನ್ನು ಮಠದಿಂದ ಕರೆದೊಯ್ಯುತ್ತಿರುವ ವಿಚಾರ ತಿಳಿದು ಕೂಡಲೇ ಧಾವಿಸಿ ಪ್ರಶ್ನಿಸಿದೆವು. ಆಗ ಚಿಕಿತ್ಸೆ ನೆಪ ಹೇಳಿ ನಮ್ಮ ಮುಂದೆಯೇ ಅರಣ್ಯ ಇಲಾಖೆ ಅಧಿಕಾರಿಗಳೇ ಲಾರಿಯಲ್ಲಿ ಆನೆಯನ್ನು ಕರೆದೊಯ್ದರು. ನಾವು ಬನ್ನೇರುಘಟ್ಟಕ್ಕೆ ಹೋಗಿ ನೋಡಿದರೆ ಆನೆ ಇರಲಿಲ್ಲ. ನಂತರ ಕುಣಿಗಲ್‌ನಲ್ಲಿರುವುದು ತಿಳಿಯಿತು. ಸದ್ಯ ಮಠಕ್ಕೆ ವಾಪಸ್‌ ಕರೆದುಕೊಂಡು ಬಂದಿದ್ದೇವೆ’ ಎಂದು ಶ್ರೀಮಠದ ಭಕ್ತ ಬಿಜೆಪಿ ಎಸ್‌ಟಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಾಕೇಶ್ ತಿಳಿಸಿದ್ದಾರೆ.

‘ಸಂಚು ರೂಪಿಸಿ ಅಪಹರಣ ಯತ್ನ ಮಾಡಿದ್ದಾರೆ. ಈ ಹಿಂದೆಯೂ ಚಿಕಿತ್ಸೆಗೆಂದು 3 ಸಲ ಕರೆದುಕೊಂಡು ಹೋಗಿ ವಾಪಸ್‌ ಕರೆ ತಂದಿದ್ದರು. ವಕೀಲನೆಂದು ಮಠಕ್ಕೆ ಪರಿಚಿತನಾಗಿದ್ದ ದೇವರಾಜು ಎಂಬ ವ್ಯಕ್ತಿ ಮಧ್ಯವರ್ತಿ. ಅವನನ್ನು ಮಾತ್ರವಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳನ್ನೂ ಸಹ ನಂಬಿದೆವು. ಮಾನವೀಯತೆಯಿಲ್ಲದೆ ವರ್ತಿಸಿದ್ದಾರೆ. ಆನೆಯನ್ನು ಶ್ರೀಮಠಕ್ಕೆ ವಾಪಸ್‌ ಕರೆತಂದ ಮೇಲೆ ಅದಕ್ಕೆ ಗಾಯವಾಗಿದೆ ಬಂದು ನೋಡಿ ಅಂತ ಕೇಳಿಕೊಂಡರೂ ಅರಣ್ಯ ಇಲಾಖೆ ಅಧಿಕಾರಿಗಳು ಸೌಜನ್ಯಕ್ಕೂ ಭೇಟಿ ನೀಡಿಲ್ಲ’ ಎಂದು ಶ್ರೀ ಕರಿಬಸವಸ್ವಾಮಿ ಮಠದ ಶ್ರೀಗಳಾದ ಶ್ರೀ ಕಲ್ಯಾಣ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ಮಹಾದೇಶ್ವರ ಬೆಟ್ಟ: ಜೋಡಿ ಆನೆಗೆ ಗುಂಡು, ದಂತ ಅಪಹರಣ



Read more