
ಹ್ಯೂಸ್ಟನ್: ಕಂಪನಿಯ ಆಟೊಪೈಲಟ್ ತಂಡದ ಮೊದಲ ಉದ್ಯೋಗಿಯಾಗಿ ಭಾರತ ಮೂಲದ ಅಶೋಕ್ ಎಲ್ಲುಸ್ವಾಮಿ ಆಯ್ಕೆಯಾಗಿದ್ದಾರೆ ಎಂದು ಟೆಸ್ಲಾ ಕಂಪನಿಯ ಸ್ಥಾಪಕ ಮತ್ತು ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ.
ಉದ್ಯೋಗಿಗಳ ನೇಮಕಾತಿಗೆ ಮಸ್ಕ್ ಅವರು ಸಾಮಾಜಿಕ ಮಾಧ್ಯಮಗಳನ್ನೇ ಬಳಸುತ್ತಿದ್ದಾರೆ. ಕಂಪನಿಯ ಆಟೊಪೈಲಟ್ ತಂಡಕ್ಕೆ ನೇಮಕಾತಿಗೆ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳ ಮೂಲಕವೇ ಸಂದರ್ಶನ ನಡೆಸಿದ್ದರು. ಎಲ್ಲುಸ್ವಾಮಿ ಅವರ ಸಂದರ್ಶನಕ್ಕೆ ಸಂಬಂಧಿಸಿದ ವಿಡಿಯೊಯೊಂದನ್ನು ಅವರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
‘ನನ್ನ ಟ್ವೀಟ್ ಮೂಲಕ ನೇಮಕ ಮಾಡಿಕೊಂಡಿರುವ ಮೊದಲ ವ್ಯಕ್ತಿ ಅಶೋಕ್’ ಎಂದು ಅವರು ಈ ವಿಡಿಯೊದಲ್ಲಿ ಹೇಳಿದ್ದಾರೆ.
ಟೆಸ್ಲಾ ಕಂಪನಿ ಸೇರುವುದಕ್ಕೂ ಮುನ್ನ ಅಶೋಕ್ ಅವರು ಫೋಕ್ಸ್‌ವ್ಯಾಗನ್ ಎಲೆಕ್ಟ್ರಾನಿಕ್ಸ್ ರಿಸರ್ಚ್ ಲ್ಯಾಬ್, ವ್ಯಾಬ್‌ಕೊ ವೆಹಿಕಲ್ ಕಂಟ್ರೋಲ್ ಸಿಸ್ಟಮ್ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಚೆನ್ನೈನ ಗಿಂಡಿಯಲ್ಲಿರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ (ಇಆ್ಯಂಡ್‌ಸಿ) ಪದವಿ ಪಡೆದಿರುವ ಅವರು, ಅಮೆರಿಕದ ಕಾರ್ನಿಗಿ ಮೆಲ್ಲಾನ್ ವಿಶ್ವವಿದ್ಯಾಲಯದಿಂದ ರೊಬೊಟಿಕ್ಸ್ ಸಿಸ್ಟಮ್ ಡೆವಲೆಪ್‌ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.