ಹೈಲೈಟ್ಸ್:
- ಗೌಡಪ್ಪ ಗೌಡ ಮತ್ತು ಮರಿಯಪ್ಪ ಅವರು ಸುರತ್ಕಲ್ ಸಮೀಪದ ಕಾನದ ಎಸ್ಟೇಟೊಂದರ ಮನೆಯಲ್ಲಿ ವಾಸವಾಗಿದ್ದರು
- ಮರಿಯಪ್ಪ ತಾನು ಕೂಲಿ ಮಾಡಿದ ಸಂಬಳದಲ್ಲಿ 10 ಸಾವಿರ ರೂ. ಹಣ ಉಳಿತಾಯ ಮಾಡಿದ್ದ
- ತನ್ನ ಹಣವನ್ನಗೌಡಪ್ಪ ಗೌಡನಿಗೆ ಕೊಟ್ಟಿದ್ದ ಮರಿಯಪ್ಪ
ಕೂಲಿ ಕಾರ್ಮಿಕ ಬಾಗಲಕೋಟೆ ತಳಿಕೇರಿ ಗ್ರಾಮದ ಗೌಡಪ್ಪ ಗೌಡ ಸಣ್ಣ ಗೌಡ್ರು (55) ಮತ್ತು ಕೊಪ್ಪಳ ಜಿಲ್ಲೆಯ ಕಬ್ಬರಗಿ ಗ್ರಾಮದ ಹುಲ್ಲಪ್ಪ ಬಸಪ್ಪ ಸೂಡಿ ಶಿಕ್ಷೆಗೊಳಗಾದ ಅಪರಾಧಿಗಳು. ಕೂಲಿ ಕಾರ್ಮಿಕ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಮರಿಯಪ್ಪ ಕೊಲೆಯಾದವರು.
ಪ್ರಕರಣದ ವಿವರ: ಗೌಡಪ್ಪ ಗೌಡ ಮತ್ತು ಮರಿಯಪ್ಪ ಅವರು ಸುರತ್ಕಲ್ ಸಮೀಪದ ಕಾನದ ಎಸ್ಟೇಟೊಂದರ ಮನೆಯಲ್ಲಿ ವಾಸವಾಗಿದ್ದರು. ಮರಿಯಪ್ಪ ತಾನು ಕೂಲಿ ಮಾಡಿದ ಸಂಬಳದಲ್ಲಿ ಉಳಿತಾಯ ಮಾಡಿದ್ದ 10 ಸಾವಿರ ರೂ. ಹಣವನ್ನು ತೆಗೆದಿಡಲು ಗೌಡಪ್ಪ ಗೌಡನಿಗೆ ನೀಡಿದ್ದರು. ಕೆಲವು ಸಮಯದ ಬಳಿಕ ತಾನು ಊರಿನಲ್ಲಿ ಮನೆ ಕಟ್ಟಿಸುತ್ತಿದ್ದು, ಆ ಹಣ ವಾಪಸ್ ನೀಡಬೇಕು ಎಂದು ಗೌಡಪ್ಪ ಗೌಡನಲ್ಲಿ ಮರಿಯಪ್ಪ ಕೇಳಿದ್ದರು. ಇದರಿಂದ ಕೋಪಗೊಂಡಿದ್ದ ಗೌಡಪ್ಪ ಗೌಡ ತನ್ನ ಪರಿಚಿತನಾದ ಹುಲ್ಲಪ್ಪ ಬಸಪ್ಪ ಸೂಡಿಯೊಂದಿಗೆ ಸೇರಿ ಮರಿಯಪ್ಪ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.
ಕೊಡಲಿಯಿಂದ ಕೊಲೆ: 2018ರ ಮೇ 31 ರಂದು ರಾತ್ರಿ ಮರಿಯಪ್ಪ ತನ್ನ ಹಣ ವಾಪಸ್ ನೀಡುವಂತೆ ಒತ್ತಾಯ ಮಾಡಿದ. ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದಲೇ ತಂದಿಟ್ಟಿದ್ದ ಕೊಡಲಿಯಿಂದ ಮರಿಯಪ್ಪನ ತಲೆಗೆ ಹೊಡೆದು ನಂತರ ಚೂರಿಯಿಂದ ಮೃತ ದೇಹವನ್ನು ಎರಡು ತುಂಡು ಮಾಡಿ ಅದಕ್ಕೆ ಪಂಚೆಯನ್ನು ಕಟ್ಟಿ ಮನೆಯ ಪಕ್ಕದಲ್ಲಿ ಮಳೆ ನೀರು ಹರಿಯುವ ತೋಡಿಗೆ ಎಸೆದಿದ್ದರು.
ಮೃತ ದೇಹ ಪತ್ತೆ: ಚೊಕ್ಕ ಬೆಟ್ಟುವಿನ ಬಳಿ ಸೇತುವೆ ಕಾಮಗಾರಿ ಸಂದರ್ಭ ಕೆಟ್ಟು ಹೋಗಿದ್ದ ಪಂಪ್ ದುರಸ್ತಿ ಮಾಡಲು ಗುತ್ತಿಗೆದಾರರು ಜೂನ್ 2ರಂದು ಬಂದಿದ್ದಾಗ ಮಳೆ ನೀರು ಹರಿಯುವ ತೋಡಿನಲ್ಲಿ ಮೃತದೇಹ ಪತ್ತೆಯಾಗಿತ್ತು. ಅವರು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದರು. ಘಟನೆಯ ದೃಶ್ಯಗಳು ಪಕ್ಕದ ಫ್ಲ್ಯಾಟ್‌ನಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದವು. ಪೊಲೀಸ್ ನಿರೀಕ್ಷಕರಾಗಿದ್ದ ರಾಮಕೃಷ್ಣ ಕೆ. ಜಿ. ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನಾ ಪರವಾಗಿ 21 ಮಂದಿ ಸಾಕ್ಷಿದಾರರನ್ನು ನ್ಯಾಯಾಲಯದಲ್ಲಿ ವಿಚಾರಿಸಲಾಗಿತ್ತು.
ಜೀವಾವಧಿ ಶಿಕ್ಷೆ: ಕೊಲೆ ಕೃತ್ಯಕ್ಕೆ ಜೀವಾವಧಿ ಶಿಕ್ಷೆ ಮತ್ತು ತಲಾ 5,000 ರೂ. ದಂಡ, ಒಂದು ವೇಳೆ ದಂಡದ ಹಣ ಪಾವತಿಸಲು ತಪ್ಪಿದರೆ ಹೆಚ್ಚುವರಿ 2 ತಿಂಗಳು ಜೈಲು ಶಿಕ್ಷೆ, ಸಾಕ್ಷ್ಯನಾಶ ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ ಮತ್ತು 2,000 ರೂ. ದಂಡ, ದಂಡದ ಹಣ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 1 ತಿಂಗಳು ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಬಸಪ್ಪ ಬಾಲಪ್ಪ ಜಕಾತಿ ತೀರ್ಪು ನೀಡಿದ್ದಾರೆ. ಅಲ್ಲದೆ ದಂಡದ ಹಣದಲ್ಲಿ 10 ಸಾವಿರ ರೂ.ಗಳನ್ನು ಕೊಲೆಯಾದ ಮರಿಯಪ್ಪ ಅವರ ಪತ್ನಿಗೆ ನೀಡಲು ಹಾಗೂ ಪತ್ನಿ ಮತ್ತು ಆಕೆಯ ಮಕ್ಕಳಿಗೆ ಸೂಕ್ತ ಪರಿಹಾರ ನೀಡಲು ದ. ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿ ಡಿಸೆಂಬರ್ 31ರಂದು ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ನಾರಾಯಣ ಶೇರಿಗಾರ್ ಯು. ಪ್ರಕರಣ ನಡೆಸಿ ವಾದ ಮಂಡಿಸಿದ್ದಾರೆ.