Karnataka news paper

ಜೆಡಿಎಸ್‌ಗೆ ಮತ್ತೊಂದು ಶಾಕ್ : ದಳಕ್ಕೆ ಗುಡ್‌ ಬೈ ಹೇಳಿ, ಕೈ ಹಿಡಿಯಲಿದ್ದಾರೆ ಬಿಎಂಎಲ್‌ ಕಾಂತರಾಜು



ವಿಜಯಕುಮಾರ ಎಚ್‌ಎಸ್‌ ಹೊಸಪಾಳ್ಯ : ಹಲವು ವರ್ಷಗಳಿಂದ ತಾಲೂಕಿನಲ್ಲಿ ಜೆಡಿಎಸ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಕಾಂಗ್ರೆಸ್‌ ಕೈ ಹಿಡಿಯುವುದು ಖಚಿತವಾಗುತ್ತಿದ್ದಂತೆ ನೆಲಮಂಗಲ ಹಾಗೂ ತುರುವೆಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕೋಟೆ ಛಿದ್ರವಾಗುತ್ತಿದೆ.

ತಾಲೂಕಿನಲ್ಲಿ ಎರಡು ಬಾರಿ ಜೆಡಿಎಸ್‌ ಶಾಸಕರ ಆಯ್ಕೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದ ಬಿಎಂಎಲ್‌ ಕೃಷ್ಣಪ್ಪನವರ ಮಗ ಬಿಎಂಎಲ್‌ ಕಾಂತರಾಜು ತಮ್ಮ ರಾಜಕೀಯ ಬೆಳೆವಣಿಗೆಗಾಗಿ ಸೇರ್ಪಡೆಯನ್ನು ನಿಶ್ಚಿಯಿಸಿದ್ದು ನೂರಾರು ಮುಖಂಡರು, ಸಾವಿರಾರು ಕಾರ್ಯಕರ್ತರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆ ಆಗುವುದು ಬಹುಪಾಲು ಖಚಿತವಾಗಿದೆ.

ನೆಲಕಚ್ಚಲಿದೆ ಜೆಡಿಎಸ್‌!
ಪ್ರಸ್ತುತ ಜೆಡಿಎಸ್‌ ಶಾಸಕರನ್ನು ಹೊಂದಿರುವ ನೆಲಮಂಗಲ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಎದುರು 25 ಸಾವಿರಕ್ಕೂ ಹೆಚ್ಚು ಬಹುಮತಗಳಿಂದ ಗೆಲುವು ಪಡೆದು ಎರಡನೇ ಭಾರಿ ಅಧಿಕಾರದ ಗದ್ದುಗೆಗೇರಿತ್ತು. ಆದರೆ ತಾಲೂಕಿನಲ್ಲಿ ಜೆಡಿಎಸ್‌ ಶಾಸಕರ ಇತ್ತೀಚಿನ ನಡೆ, ಕಾರ್ಯಕರ್ತರ ಕಡೆಗಣನೆ, ಗ್ರಾಮಗಳ ಅಭಿವೃದ್ಧಿಯ ಕಡಗಣನೆ ಆರೋಪಗಳ ನಡುವೆ ಹಾಗೂ ಪಕ್ಷಕ್ಕೆ ಬಲವಾಗಿದ್ದ ಬಿಎಂಲ್‌ ಕಾಂತರಾಜು ಮತ್ತು ಬೆಂಬಲಿಗರು ಕಾಂಗ್ರೆಸ್‌ ಸೇರ್ಪಡೆ ಆಗುತ್ತಿರುವ ಪರಿಣಾಮ ಜನವರಿ ಐದನೇ ತಾರೀಖಿನ ನಂತರ ಸಂಪೂರ್ಣ ಜೆಡಿಎಸ್‌ ಪಕ್ಷ ನೆಲಕಚ್ಚಲಿದೆ ಎಂಬುದು ಎರಡೂ ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತುಮಕೂರಿನಲ್ಲಿ ಜೆಡಿಎಸ್‌ನಿಂದ ವಿಧಾನಪರಿಷತ್‌ ಸದಸ್ಯರಾಗಿದ್ದ ಕಾಂತರಾಜು ಬಹಳಷ್ಟು ಬೆಂಬಲಿಗರನ್ನು ಹೊಂದಿದ್ದು ಇವರು ಸಹ ಕೈ ಪಕ್ಷದ ಕಡೆಗೆ ಪಯಣ ಆರಂಭಿಸಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬಂದಿದೆ.

ಸದಸ್ಯರ ಬಲ ಕುಸಿತ!
ತಾಲೂಕಿನ 21 ಗ್ರಾಮ ಪಂಚಾಯಿತಿಗಳು, ನಗರಸಭೆ,ತಾಲೂಕು ಪಂಚಾಯಿತಿ, ಜಿಲ್ಲಾಪಂಚಾಯಿತಿಯಲ್ಲಿ ಜೆಡಿಎಸ್‌ ಸದಸ್ಯರ ಪ್ರಾಬಲ್ಯ ಬಹಳಷ್ಟಿತ್ತು. ಮುಂದಿನ ದಿನಗಳಲ್ಲಿ ಬಹುಪಾಲು ಸದಸ್ಯರು ಕಾಂಗ್ರೆಸ್‌ ಮನೆ ಸೇರಲಿದ್ದು ಜೆಡಿಎಸ್‌ ಸದಸ್ಯ ಬಲ ಕುಸಿಯುವುದು ಬಹುತೇಕ ಖಚಿತವಾಗಿದೆ. ಪಕ್ಷದ ತಾಲೂಕು ಅಧ್ಯಕ್ಷರು ಸೇರಿದಂತೆ ವಿವಿಧ ಪ್ರಭಾವಿ ಮುಖಂಡರು ಕಾಂಗ್ರೆಸ್‌ ಪಾಲಾಗುವುದರಿಂದ ಜೆಡಿಎಸ್‌ ಮುಂದಿನ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಕೈ ಬಲ ಜೆಡಿಎಸ್‌ಗೆ ಸಂಕಷ್ಟ!
ತುಮಕೂರು ಜಿಲ್ಲೆಯ ತುರುವೆಕೆರೆಯ ವಿಧಾನಸಭಾ ಕ್ಷೇತ್ರಧಿದ ಚುನಾವಣೆಯಲ್ಲಿ ಕೈ ಟಿಕೇಟ್‌ ಆಕಾಂಕ್ಷಿ ಆಗಿರುವ ಬಿಎಂಎಲ್‌ ಕಾಂತರಾಜು ಜೆಡಿಎಸ್‌ ಬಾಗಿಲು ಮುಚ್ಚಿದೆ. ಕಾಂಗ್ರೆಸ್‌ ಸೇರ್ಪಡೆ ಮಾತ್ರ ಬಾಕಿ ಇದೆ ಎಂಬ ಹೇಳಿಕೆ ರಾಜಕೀಯವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ನೆಲಮಂಗಲ ಹಾಗೂ ತುರುವೆಕೆರೆಯಲ್ಲಿ ಕೈ ತನ್ನ ಬಲವನ್ನು ಹೆಚ್ಚಿಸಿಕೊಂಡರೇ ಜೆಡಿಎಸ್‌ ತನ್ನ ನಿಷ್ಠಾವಂತ ಮುಖಂಡರು, ಕಾರ್ಯಕರ್ತರನ್ನು ಕಳೆದುಕೊಂಡು ಸಂಕಷ್ಟ ಅನುಭವಿಸುವಂತಾಗಿರುವುದರಲ್ಲಿ ಸಂದೇಹವಿಲ್ಲ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.

ಗೊಂದಲಕ್ಕೆ ತೆರೆ !
ಬಿಎಂಎಲ್‌ ಕಾಂತರಾಜು ಹುಟ್ಟುಹಬ್ಬಕ್ಕೆ ಮಾಜಿ ಸಚಿವ ಅಂಜನಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿಸದಸ್ಯ ಚೆಲುವರಾಜು ಸೇರಿದಂತೆ ಕಾಂಗ್ರೆಸ್‌ನ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಪ್ರಭಾವಿ ಮುಖಂಡರು ಬಿಎಂಎಲ್‌ ಕಾಂತರಾಜು ಮನೆಗೆ ತೆರಳಿ ಶುಭಾಷಯ ಕೋರಿದ್ದಾರೆ. ಪಕ್ಷದ ಕಾರ್ಯಕರ್ತರು ಗೊಂದಲ ಪಡಬೇಡಿ ಜೆಡಿಎಸ್‌ ಬಾಗಿಲು ಮುಚ್ಚಿದೆ ಎಂದು ಬಿಎಂಎಲ್‌ ಕಾಂತರಾಜು ಗೊಂದಲಕ್ಕೆ ತೆರೆ ಎಳೆದರು.


ಜೆಡಿಎಸ್‌ನಲ್ಲಿಅಧಿಕಾರ ಪಡೆದು ಪಕ್ಷಕ್ಕೆ ನಿಷ್ಠೆಯಿಂದ ಸೇವೆ ಮಾಡಿದ್ದೇನೆ. ಆದರೆ ನನ್ನನ್ನು ಜೆಡಿಎಸ್‌ನಲ್ಲಿ ಗುರುತಿಸಲಿಲ್ಲ. ಆದ್ದರಿಂದ ಪ್ರಸ್ತುತ ಜೆಡಿಎಸ್‌ ಬಾಗಿಲು ಮುಚ್ಚಿದ್ದು ಕಾಂಗ್ರೆಸ್‌ ಬಾಗಿಲು ತೆರೆದಿದೆ. ಕಾಂಗ್ರೆಸ್‌ ಮುಖಂಡರ ಬಳಿ ಮಾತನಾಡಿದ್ದು ಮೂರ್ನಾಲ್ಕು ದಿನದಲ್ಲಿ ಸೇರ್ಪಡೆ ಆಗುವ ಬಗ್ಗೆ ಘೋಷಣೆ ಮಾಡಲಿದ್ದೇನೆ.

– ಬಿಎಂಎಲ್‌ ಕಾಂತರಾಜು | ವಿಧಾನಪರಿಷತ್‌ ಸದಸ್ಯರು



Read more