Karnataka news paper

ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇವಾಲಯಕ್ಕೆ ವರ್ಷಕ್ಕೆ 80 ಲಕ್ಷ ಭಕ್ತರ ದರ್ಶನ!


ಹೊಸದಿಲ್ಲಿ: ಜಮ್ಮು-ಕಾಶ್ಮೀರದ ವೈಷ್ಣೋದೇವಿ ದೇಗುಲವು ಹಿಂದೂಗಳ ಪವಿತ್ರ ಕ್ಷೇತ್ರವಾಗಿದ್ದು, ವಾರ್ಷಿಕವಾಗಿ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಶನಿವಾರ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಿಂದಾಗಿ ಮಾತಾ ವೈಷ್ಣೋದೇವಿ ದೇವಾಲಯ ಸುದ್ದಿಯಾಗಿದೆ. ಹಾಗಾದರೆ, ವರ್ಷಕ್ಕೆ ಎಷ್ಟು ಜನ ದೇಗುಲಕ್ಕೆ ಭೇಟಿ ನೀಡುತ್ತಾರೆ? ಇಲ್ಲೇಕೆ ಇಷ್ಟು ಜನಜಂಗುಳಿ ಆಗುತ್ತದೆ? ಇದರ ವಿಶೇಷವೇನು ಎಂಬುದರ ಮಾಹಿತಿ ಇಲ್ಲಿದೆ.

ದೇಗುಲದ ಇತಿಹಾಸ
ಜಮ್ಮು-ಕಾಶ್ಮೀರದ ಕಾತ್ರಾ ಪಟ್ಟಣದ ತ್ರಿಕುಟಾ ಬೆಟ್ಟದ ಮೇಲಿರುವ ವೈಷ್ಣೋದೇವಿ ದೇಗುಲಕ್ಕೆ 700 ವರ್ಷಗಳ ಇತಿಹಾಸವಿದೆ. ಇದು ಹಿಂದೂಗಳ ಪವಿತ್ರ ಯಾತ್ರಾಸ್ಥಳವಾಗಿದ್ದು, ಪ್ರಾಚೀನ ಕಾಲದಲ್ಲಿ ಮಹಾ ಕಾಳಿ, ಮಹಾಲಕ್ಷ್ಮೇ ಹಾಗೂ ಮಹಾ ಸರಸ್ವತಿಯ ರೂಪ ತಾಳಿದ ವೈಷ್ಣೋದೇವಿಯು ಧರ್ಮ ರಕ್ಷಿಸಿದರು ಎಂಬ ನಂಬಿಕೆ ಇದೆ. ಅಲ್ಲದೆ, ಮಾತಾ ವೈಷ್ಣೋದೇವಿಯು ದೇಗುಲದ ಮುಂದಿರುವ ಪವಿತ್ರ ಗುಹೆಯಲ್ಲಿ ಒಂಬತ್ತು ತಿಂಗಳು ವಿಶ್ರಾಂತಿ ಪಡೆದರು ಎಂಬ ನಂಬಿಕೆ ಇದೆ. ಹಾಗಾಗಿ, ಇದು ಹಿಂದೂಗಳ ಪವಿತ್ರ ಕ್ಷೇತ್ರವಾಗಿದೆ.

ಕಾಶ್ಮೀರದ ವೈಷ್ಣೋದೇವಿ ದೇಗುಲದಲ್ಲಿ ಭೀಕರ ಕಾಲ್ತುಳಿತ, 12 ಸಾವು, 14 ಮಂದಿಗೆ ಗಾಯ

ಜನಜಂಗುಳಿ ಹೆಚ್ಚು
ಜಮ್ಮುವಿನಿಂದ 61 ಕಿ.ಮೀ ದೂರದ ವೈಷ್ಣೋದೇವಿ ದೇಗುಲಕ್ಕೆ ಕಾತ್ರಾದಿಂದ 13.5 ಕಿ.ಮೀ ಚಾರಣದ ಮೂಲಕ ತೆರಳಬೇಕು. ಸಾವಿರಾರು ಜನ ಬೆಟ್ಟ-ಗುಡ್ಡಗಳಲ್ಲಿ 13.5 ಕಿ.ಮೀ ಚಾರಣ ಹೊರಡುವುದರಿಂದ ಜನಜಂಗುಳಿ ಆಗುತ್ತದೆ. ಕಠಿಣ ಮಾರ್ಗದ ಮೂಲಕ ಸಾಗುವ ಯಾತ್ರೆಯುದ್ದಕ್ಕೂ ‘ಜೈ ಮಾತಾ ದಿ’ ಎಂಬ ಘೋಷಣೆ ಕೂಗುತ್ತಾರೆ. ಅಲ್ಲದೆ, ದೇಶದಲ್ಲಿಯೇ ತಿರುಪತಿ ದೇಗುಲ ಬಿಟ್ಟರೆ ಅತಿ ಹೆಚ್ಚು ಯಾತ್ರಿಕರು ಭೇಟಿ ನೀಡುವ ಯಾತ್ರಾ ಸ್ಥಳ ವೈಷ್ಣೋದೇವಿ ದೇವಾಲಯವಾಗಿದೆ. ಹೀಗೆ ಸಾವಿರಾರು ಜನ ಚಾರಣ ಹೊರಟಾಗ ಕೆಲವೊಮ್ಮೆ ಕಾಲ್ತುಳಿತ ಆಗುತ್ತವೆ.

ವರ್ಷವಿಡೀ ಭೇಟಿ
ಯಾತ್ರಿಕರಿಗೆ ವರ್ಷವಿಡೀ ವೈಷ್ಣೋದೇವಿ ದೇಗುಲ ತೆರೆದಿರುತ್ತದೆ. ಆದರೆ, ತಾಪಮಾನ ತುಂಬ ಕಡಿಮೆ ಇರುವುದರಿಂದ ಮಾರ್ಚ್ನಿಂದ ಅಕ್ಟೋಬರ್‌ ಅವಧಿಯಲ್ಲಿ ಹೆಚ್ಚಿನ ಯಾತ್ರಿಕರು ತೆರಳುತ್ತಾರೆ. ಆದರೂ, ಕೆಲವೊಮ್ಮೆ ಹವಾಮಾನ ವೈಪರೀತ್ಯ, ಉಗ್ರರ ದಾಳಿ, ಕೊರೊನಾದಿಂದಾಗಿ ದೇಗುಲ ಮುಚ್ಚಲಾಗುತ್ತದೆ.

  • ವೈಷ್ಣೋದೇವಿಗೆ ವಾರ್ಷಿಕ ಭೇಟಿ ನೀಡುವ ಯಾತ್ರಿಕರು: 80 ಲಕ್ಷ
  • 5,200 ಅಡಿ ಎತ್ತರದಲ್ಲಿ ಮಾತಾ ವೈಷ್ಣೋದೇವಿ ದೇಗುಲ ಇದೆ



Read more