Karnataka news paper

ಆಸ್ತಿ ಖರೀದಿಸುವವರಿಗೆ ಗುಡ್ ನ್ಯೂಸ್; ಮೂರು ತಿಂಗಳಿಗೆ ಮಾರ್ಗಸೂಚಿ ದರ 10% ಇಳಿಕೆ, ಸರ್ಕಾರಕ್ಕೆ ಆದಾಯದ ನಿರೀಕ್ಷೆ!


ಹೈಲೈಟ್ಸ್‌:

  • ಆಸ್ತಿ ಖರೀದಿ ಉತ್ತೇಜಿಸುವ ಸಲುವಾಗಿ ಎಲ್ಲ ವಿಧದ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಸರ್ಕಾರ ಶೇ. 10ರಷ್ಟು ಇಳಿಸಿದೆ
  • ಮಾರ್ಗಸೂಚಿ ದರ ಇಳಿಕೆಯಿಂದ ಮುದ್ರಾಂಕ ಮತ್ತು ನೋಂದಣಿ ಶುಲ್ಕವೂ ಕಡಿಮೆಯಾಗಲಿದ್ದು ಆಸ್ತಿ ಖರೀದಿದಾರರಿಗೆ ಲಾಭವಾಗಲಿದೆ
  • ಮಾರ್ಗಸೂಚಿ ದರ ಇಳಿಕೆಯಿಂದ ಖರೀದಿದಾರರಿಗೆ ಲಾಭವಾಗಲಿದೆ. ಜತೆಗೆ ವ್ಯವಹಾರ ಹೆಚ್ಚುವುದರಿಂದ ಸರಕಾರಕ್ಕೂ ಲಾಭವಾಗಲಿದೆ.
  • ಹೊಸ ವರ್ಷದ ಮೊದಲ ದಿನವೇ ಸರಕಾರ ಜನರ ಅನುಕೂಲಕ್ಕಾಗಿ ಮಾರ್ಗಸೂಚಿ ದರದಲ್ಲಿ ರಿಯಾಯ್ತಿ ನೀಡಿದ್ದು, ತಕ್ಷಣದಿಂದಲೇ ಈ ಸೌಲಭ್ಯ ಪಡೆದುಕೊಳ್ಳಬಹುದು

ಬೆಂಗಳೂರು: ಕೊರೊನಾದಿಂದ ಆಗಿರುವ ಆದಾಯ ನಷ್ಟ ಭರಿಸಲು ಮತ್ತು ಆಸ್ತಿ ಖರೀದಿ ಉತ್ತೇಜಿಸುವ ಸಲುವಾಗಿ ಎಲ್ಲ ವಿಧದ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಶೇ. 10ರಷ್ಟು ಇಳಿಸಿದೆ. ರಾಜ್ಯಾದ್ಯಂತ ಏಕರೂಪವಾಗಿದ್ದು, ಜನವರಿ 1ರಿಂದ ಮಾರ್ಚ್ 31ರವರೆಗೆ ಅನ್ವಯವಾಗಲಿದೆ.

ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್‌/ ಫ್ಲಾಟ್‌ ಸೇರಿದಂತೆ ಎಲ್ಲ ವಿಧದ ಆಸ್ತಿಗಳಿಗೆ ಇದು ಅನ್ವಯವಾಗುತ್ತಿದ್ದು, ಶೇ. 10ರ ಕಡಿತಗೊಳಿಸಿದ ದರವನ್ನೇ ದಸ್ತಾವೇಜುಗಳ ನೋಂದಣಿಗೆ ಮಾರ್ಗದರ್ಶಿ ದರವೆಂದು ಪರಿಗಣಿಸಲು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

ಮಾರ್ಗಸೂಚಿ ದರ ಇಳಿಕೆಯಿಂದ ಮುದ್ರಾಂಕ ಮತ್ತು ನೋಂದಣಿ ಶುಲ್ಕವೂ ಕಡಿಮೆಯಾಗಲಿದ್ದು ಆಸ್ತಿ ಖರೀದಿದಾರರಿಗೆ ಲಾಭವಾಗಲಿದೆ. ಈ ಮೂಲಕ ಆಸ್ತಿ ಖರೀದಿ ಹೆಚ್ಚಾಗಿ ಸರಕಾರಕ್ಕೆ ಆದಾಯ ಹೆಚ್ಚುವ ನಿರೀಕ್ಷೆ ಇದೆ.

ಕಳೆದ ಡಿ. 8ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ನಡೆದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ 2019-20ನೇ ಸಾಲಿನಿಂದ ರಾಜಸ್ವ ಸಂಗ್ರಹ ಅವಲೋಕಿಸಿದಾಗ ಕೋವಿಡ್‌ ಹಿನ್ನೆಲೆಯಲ್ಲಿ 2101 ಕೋಟಿ ರೂ. ಕೊರತೆಯಾಗಿರುವುದು ಕಂಡುಬಂದಿತ್ತು. ಈ ನಡುವೆ ಹೊಸದಿಲ್ಲಿಯಲ್ಲಿ ನಿರ್ದಿಷ್ಟ ಅವಧಿಗೆ ಶೇ. 20ರಷ್ಟು ಮಾರ್ಗಸೂಚಿ ದರ ಕಡಿತಗೊಳಿಸಿದ್ದರಿಂದ ರಾಜಸ್ವ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿರುವ ಬಗ್ಗೆಯೂ ಚರ್ಚೆಯಾಗಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಶೇ. 10ರಷ್ಟು ಮಾರ್ಗಸೂಚಿ ದರ ಕಡಿತಗೊಳಿಸುವ ಬಗ್ಗೆ ಪ್ರಸ್ತಾವ ಸಲ್ಲಿಸುವಂತೆ ಸಿಎಂ ಸೂಚಿಸಿದ್ದರು.
ಆಸ್ತಿ ಖರೀದಿ, ಮಾರಾಟ ಮಾಡುವವರಿಗೆ ಸಿಹಿ ಸುದ್ದಿ; ಮಾರ್ಗಸೂಚಿ ದರ 10% ರಿಯಾಯಿತಿ ಘೋಷಣೆಅದರಂತೆ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿಗಳು ಪ್ರಸ್ತಾವ ಸಲ್ಲಿಸಿದ್ದರು. ಕೃಷಿ ಜಮೀನು, ನಿವೇಶನ ಮತ್ತು ಕಟ್ಟಡಗಳು, ಭೂಪರಿವರ್ತಿತ ಜಮೀನುಗಳು, ಅಪಾರ್ಟ್‌ಮೆಂಟ್‌ಗಳು ಮತ್ತು ಇನ್ನಿತರ ಸ್ಥಿರಾಸ್ತಿಗಳಿಗೆ ಸಂಬಂಧಪಟ್ಟ ದಸ್ತಾವೇಜುಗಳಾದ ಕ್ರಯ, ದಾನ, ಅದಲು- ಬದಲು, ವರ್ಗಾವಣೆ, ಸೆಟ್ಲ್ಮೆಂಟ್‌, ಸಾಮಾನ್ಯ ಅಧಿಕಾರ ಪತ್ರ, ಗುತ್ತಿಗೆ, ಸ್ವಾಧೀನಸಹಿತ ಕ್ರಯದ ಕರಾರು, ಜಂಟಿ ಅಭಿವೃದ್ಧಿ ಕರಾರು, ಸ್ವಾಧೀನಸಹಿತ ಆಧಾರ ಪತ್ರ ಇತರೆ ವ್ಯವಹಾರಕ್ಕೆ ಮಾರ್ಗಸೂಚಿ ದರವೇ ಆಧಾರ.

ಹಾಗಾಗಿ ಮಾರ್ಗಸೂಚಿ ದರದಲ್ಲೇ ಮೂರು ತಿಂಗಳ ಅವಧಿಗೆ ಶೇ. 10ರಷ್ಟು ಕಡಿತಗೊಳಿಸಿದರೆ ನೋಂದಣಿ ಹೆಚ್ಚಾಗಿ ರಾಜಸ್ವ ಸಂಗ್ರಹ ಹೆಚ್ಚಾಗುವ ನಿರೀಕ್ಷೆಯಿಂದ ಕೇಂದ್ರ ಮೌಲ್ಯಮಾಪನ ಸಮಿತಿ ಸಭೆ ಮಾರ್ಗಸೂಚಿ ದರ ಇಳಿಕೆ ಮಾಡಲು ನಿರ್ಧರಿತ್ತು. ಅದರಂತೆ ಜ. 1ರಂದು ಅಧಿಸೂಚನೆ ಹೊರಡಿಸಲಾಗಿದೆ.
ಜನರಿಗೆ ಅನುಕೂಲ
ಹೊಸ ವರ್ಷದ ಮೊದಲ ದಿನವೇ ಸರಕಾರ ಜನರ ಅನುಕೂಲಕ್ಕಾಗಿ ಮಾರ್ಗಸೂಚಿ ದರದಲ್ಲಿ ಶೇ. 10ರಷ್ಟು ರಿಯಾಯ್ತಿ ನೀಡಿದ್ದು, ತಕ್ಷಣದಿಂದಲೇ ಈ ಸೌಲಭ್ಯ ಪಡೆದುಕೊಳ್ಳಬಹುದು. ಇದರಿಂದ ಸರಕಾರಕ್ಕೆ ಆರ್ಥಿಕವಾಗಿ ಸ್ವಲ್ಪ ಆದಾಯ ಕಡಿಮೆಯಾಗಬಹುದು. ಆದರೆ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತದೆ. ಸಾಕಷ್ಟು ರೈತರು ಅಗ್ರಿಮೆಂಟ್‌, ಜಿಪಿಎ ಮಾಡಿಕೊಂಡಿದ್ದು, ಅವರೆಲ್ಲ ಈಗ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು. ಈ ರಿಯಾಯಿತಿ ಜ. 1ರಿಂದ ಮುಂದಿನ ಮಾ. 31ರವರೆಗೆ ಮಾತ್ರ ಅನ್ವಯಯವಾಗಲಿದೆ ಎಂದು ಸಚಿವ ಆರ್‌.ಅಶೋಕ್‌ ತಿಳಿಸಿದರು.

ಮಾರ್ಗಸೂಚಿ ದರ ಇಳಿಕೆ ವಿಶೇಷ
ಪ್ರತಿ ವರ್ಷ ಕೇಂದ್ರ ಮೌಲ್ಯಮಾಪನ ಸಮಿತಿಯು ಉಪಸಮಿತಿಗಳಿಗೆ ಮಾರ್ಗಸೂಚಿ ದರ ಪರಿಷ್ಕರಣೆಗೆ ಸೂಚನೆ ನೀಡುತ್ತದೆ. ಉಪಸಮಿತಿಗಳು ಸಲ್ಲಿಸಿದ ದರಗಳನ್ನು ಪರಿಶೀಲಿಸಿ ಕೇಂದ್ರ ಮೌಲ್ಯಮಾಪನ ಸಮಿತಿ ಅಂತಿಮ ಮಾರ್ಗಸೂಚಿ ದರ ನಿಗದಿಪಡಿಸುತ್ತದೆ. ನಂತರ ಸಾರ್ವಜನಿಕ ಆಕ್ಷೇಪಣೆ ಸ್ವೀಕರಿಸಿ ಅಂತಿಮ ದರ ಪ್ರಕಟಿಸುವುದು ವಾಡಿಕೆ. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಮೂರು ವರ್ಷಗಳಿಂದ ದರ ಪರಿಷ್ಕರಣೆಯಾಗಿರಲಿಲ್ಲ. ಸಾಮಾನ್ಯವಾಗಿ ಪರಿಷ್ಕರಣೆ ಎಂದರೆ ಮಾರ್ಗಸೂಚಿ ದರ ಏರಿಕೆಯಾಗುತ್ತದೆ. ಆದರೆ ಮೂರು ತಿಂಗಳ ಅವಧಿಗೆ ಮಾರ್ಗಸೂಚಿ ದರ ಕಡಿತಗೊಳಿಸಿರುವುದು ವಿಶೇಷ!
ಸರ್ಕಾರಿ ಕಾಮಗಾರಿಗಳ ಜಿಎಸ್‌ಟಿ ಶೇ.12 ರಿಂದ ಶೇ.18ಕ್ಕೆ ಏರಿಕೆ: ಗುತ್ತಿಗೆದಾರರು ಗರಂ..!ಎರಡು ರೀತಿಯ ಅನುಕೂಲ
ಮಾರ್ಗಸೂಚಿ ದರ ಇಳಿಕೆಯಿಂದ ಖರೀದಿದಾರರಿಗೆ ಲಾಭವಾಗಲಿದೆ. ಜತೆಗೆ ವ್ಯವಹಾರ ಹೆಚ್ಚುವುದರಿಂದ ಸರಕಾರಕ್ಕೂ ಲಾಭವಾಗಲಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದ 12,500 ಕೋಟಿ ರೂ. ಸಂಗ್ರಹ ಗುರಿ ಇದೆ. ಡಿಸೆಂಬರ್‌ ಅಂತ್ಯಕ್ಕೆ ಸುಮಾರು 9000 ಕೋಟಿ ರೂ.ನಷ್ಟು ಆದಾಯ ಸಂಗ್ರಹವಾಗಿದ್ದು, ಮಾರ್ಚ್ ಅಂತ್ಯಕ್ಕೆ ನಿಗದಿತ ಗುರಿ ತಲುಪುವ ವಿಶ್ವಾಸವಿದೆ.
ಪಿ.ಎನ್‌. ರವೀಂದ್ರ, ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತ

ಲೀಸ್‌/ ಸೇಲ್‌ ಡೀಡ್‌ ಅವಧಿ-99 ವರ್ಷ ಬದಲು 10 ವರ್ಷ
ಕೆಐಎಡಿಬಿ ಮೂಲಕ ಕೈಗಾರಿಕಾ ಉದ್ದೇಶಗಳಿಗೆ ಹಂಚಿಕೆಯಾದ 2 ಎಕರೆಗೂ ಹೆಚ್ಚಿನ ಭೂಮಿಯನ್ನು 10 ವರ್ಷಗಳ ಅವಧಿಯ ಭೋಗ್ಯ ಮತ್ತು ಮಾರಾಟಕ್ಕೆ (ಲೀಸ್‌ ಕಂ ಸೇಲ್‌) ನೀಡಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ಧರಿಸಿದೆ. ಇದು ಕೈಗಾರಿಕೋದ್ಯಮಿಗಳಿಗೆ ಹೊಸ ವರ್ಷದ ಬಂಪರ್‌ ಕೊಡುಗೆಯಾಗಲಿದೆ.
ಹೂಡಿಕೆದಾರರು, ಉದ್ಯಮಿಗಳಿಗೆ ‘ಲೀಸ್ ಕಂ ಸೇಲ್’ ಭೂಮಿ, ನಿರಾಣಿಯಿಂದ ಹೊಸ ವರ್ಷದ ಕೊಡುಗೆ!
ಮೊದಲು 99 ವರ್ಷದ ಲೀಸ್‌ಗೆ ನೀಡಲಾಗುತ್ತಿತ್ತು. ಅದುವರೆಗೆ ಮಂಜೂರಾದ ಭೂಮಿಯ ಮಾರಾಟಕ್ಕೆ, ಬ್ಯಾಂಕ್‌ಗಳಿಂದ ಸಾಲ ಪಡೆಯಲು, ಅಡಮಾನ ಇಡಲು ಇಲ್ಲವೇ ಬಂಡವಾಳ ಪಡೆಯಲು ಕಷ್ಟವಾಗುತ್ತಿತ್ತು. ಹೀಗಾಗಿ ಖಾಸಗಿ ಕಂಪನಿಗಳು ಕೈಗಾರಿಕೆ ಸ್ಥಾಪನೆಗೆ ಹಿಂಜರಿಯುತ್ತಿದ್ದವು. ಇದರಿಂದ ಹೂಡಿಕೆ ಹರಿವು, ಉದ್ಯೋಗ ಸೃಷ್ಟಿಗೆ ಹಿನ್ನಡೆಯಾಗಿತ್ತು. ಪ್ರಸ್ತಾವಿತ ತಿದ್ದುಪಡಿಯ ಮೂಲಕ, ಯಾವುದೇ ಕೈಗಾರಿಕಾ ಘಟಕವು ಭೂ ಹಂಚಿಕೆಯ ನಂತರ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರೆ, ತಕ್ಷಣವೇ ಕೆಐಎಡಿಬಿ ವತಿಯಿಂದ ಸೇಲ್‌ ಡೀಡ್‌ ಪಡೆಯಲು ಅರ್ಹರಾಗುತ್ತಾರೆ. ಇಲಾಖಾ ಅಧಿಕಾರಿಗಳ ಮೂಲಕ ಉದ್ಯಮದ 24 ತಿಂಗಳ ವ್ಯವಹಾರ ಪರಿಶೀಲಿಸಿ, ಇಲಾಖೆಗೆ ವರದಿ ನೀಡಿದ ನಂತರ ಸೇಲ್‌ ಡೀಡ್‌ ನೀಡಲಾಗುತ್ತದೆ.

ಬಂಡವಾಳ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಸುಲಲಿತ ವಹಿವಾಟು ನಡೆಸಲು ಅನುಕೂಲವಾಗುವಂತೆ ಶೀಘ್ರದಲ್ಲೇ ಹೊಸ ನೀತಿ ಜಾರಿ ಜಾರಿ ಬರಲಿದೆ. ಕೆಐಎಡಿಬಿ ಜಮೀನುಗಳನ್ನು ಖಾಸಗಿ ಕೈಗಾರಿಕೆಗಳು/ಸಂಸ್ಥೆಗಳಿಗೆ 10 ವರ್ಷಗಳ ಲೀಸ್‌ ಕಮ್‌ ಸೇಲ್‌ ಡೀಡ್‌ ಆಧಾರದ ಮೇಲೆ ಹಂಚಲಿದೆ.
ಮುರುಗೇಶ್‌ ನಿರಾಣಿ, ಕೈಗಾರಿಕಾ ಸಚಿವ



Read more