Online Desk
ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್. ವರ್ತಮಾನದ ಘಟನೆಗಳಿಗೆ ಅವರು ತಮ್ಮದೇ ವಿಧಾನದಲ್ಲಿ ಪ್ರತಿಕ್ರಿಯಿಸುತ್ತಿರುತ್ತಾರೆ. ಇದರಿಂದ ವಿವಾದಗಳನ್ನೂ ಮೈಮೇಲೆ ಎಳೆದುಕೊಳ್ಳುತ್ತಾರೆ.
ಇತ್ತೀಚೆಗೆ ಅಂದರೆ ಡಿಸೆಂಬರ್ 25ರಂದು ನಟ ಸಲ್ಮಾನ್ ಖಾನ್ಗೆ ಹಾವು ಕಚ್ಚಿದ್ದು ದೊಡ್ಡ ಸುದ್ದಿಯಾಗಿತ್ತು. ಸಲ್ಮಾನ್ಗೆ ಫಾರ್ಮ್ಹೌಸ್ನಲ್ಲಿ ಹಾವು ಕಚ್ಚಿದ ಪರಿಣಾಮ ಅವರು ಆಸ್ಪತ್ರೆಗೂ ದಾಖಲಾಗಿದ್ದರು. ಹುಟ್ಟುಹಬ್ಬಕ್ಕೆ ಕೇವಲ ಎರಡು ದಿನಗಳಿರುವಾಗ ಘಟನೆ ನಡೆದಿದ್ದು, ಅವರ ಅಭಿಮಾನಿಗಳಿಗೆ ಆತಂಕ ತಂದಿತ್ತು.
ನಂತರ ಡಿಸೆಂಬರ್ 27ರಂದು ಸಲ್ಮಾನ್ ಜನ್ಮದಿನದ ಸಂದರ್ಭದಲ್ಲಿ ಮಾತನಾಡಿ ಆ ದಿನ ಏನಾಗಿತ್ತು ಎಂಬುದನ್ನೆಲ್ಲಾ ಎಳೆಎಳೆಯಾಗಿ ತೆರೆದಿಟ್ಟಿದ್ದರು. ಅಲ್ಲದೇ ತಾವೀಗ ಕ್ಷೇಮ ಎಂದೂ ಹೇಳಿ ಪ್ರಕರಣಕ್ಕೆ ತೆರೆ ಎಳೆದಿದ್ದರು. ಆದರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಘಟನೆಗೆ ತುಸು ತಡವಾಗಿ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕಚ್ಚಿದ ಹಾವು: ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ!
ಟ್ವಿಟರ್ನಲ್ಲಿ ಆರ್ಜಿವಿ ಮೀಮ್ ಒಂದನ್ನು ಹಂಚಿಕೊಂಡಿದ್ದು, ಅದನ್ನು ನೋಡಿದ ನೆಟ್ಟಿಗರು ಆರ್ಜಿವಿ ಕಾಲೆಳೆದ ರೀತಿಗೆ ಬಿದ್ದುಬಿದ್ದು ನಕ್ಕಿದ್ದಾರೆ. ರಾಮ್ ಗೋಪಾಲ್ ವರ್ಮಾ ಹೆಚ್ಚೇನೂ ಬರೆದಿಲ್ಲ, ಕೇವಲ ಒಂದು ಕಾರ್ಟೂನ್ ಹಂಚಿಕೊಂಡಿದ್ದಾರೆ. ಅದರಲ್ಲಿ ಹಾವೊಂದು ನ್ಯಾಯಾಲಯದ ಕಟೆಕಟೆಯಲ್ಲಿದೆ. ಅದು ‘ಕಚ್ಚಿರೋದು ನಾನಲ್ಲ.. ನನ್ನ ಡ್ರೈವರ್..’’ ಎಂದು ವಾದ ಮಂಡಿಸುತ್ತಿರುವಂತೆ ಕಾರ್ಟೂನ್ ರಚಿಸಲಾಗಿದೆ.
ಈ ಕಾರ್ಟೂನ್ 2002ರ ಸೆಪ್ಟೆಂಬರ್ನಲ್ಲಿ ಸಲ್ಮಾನ್ರ ಹಿಟ್ ಆಂಡ್ ರನ್ ಪ್ರಕರಣವನ್ನು ಹಿನ್ನೆಲೆಯಾಗಿಟ್ಟು ರಚಿಸಲಾಗಿದೆ. ಕುಡಿದು ವಾಹನ ಚಲಾಯಿಸುತ್ತಾ ವಾಹನ ಚಲಾಯಿಸಿ ಒಬ್ಬರ ಮರಣಕ್ಕೆ ಹಾಗೂ ಹಲವರ ನೋವಿಗೆ ಘಟನೆ ಕಾರಣವಾಗಿತ್ತು.
— Ram Gopal Varma (@RGVzoomin) December 29, 2021