ಹೈಲೈಟ್ಸ್:
- ಎಳ್ಳಮವಾಸ್ಯೆ ಹಬ್ಬದ ವಿಶೇಷ ತಿನಿಸು ಭಜ್ಜಿ ಹಾಗೂ ಇತರೆ ಖಾದ್ಯಗಳನ್ನು ತಯಾರಿಸಲು ಬೇಕಾಗುವ ತರಹೇವಾರಿ ತರಕಾರಿಗಳ ಬೆಲೆ ಗಗನಕ್ಕೆ ಏರಿದೆ
- ಎಲ್ಲ ಕಷ್ಟಗಳ ನಡುವೆ ಜಿಲ್ಲೆಯ ರೈತರು ಇದೀಗ ಎಳ್ಳಮವಾಸ್ಯೆಯ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ
- ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಎಲ್ಲರಿಗೂ ಸೌಹಾರ್ದತೆಯೊಂದಿಗೆ ಊಟ ಮಾಡುವುದು ಈ ಹಬ್ಬದ ವಿಶೇಷತೆಯಾಗಿದೆ
ಉತ್ತರ ಕರ್ನಾಟಕದಲ್ಲಿ ಆಚರಿಸಲ್ಪಡುವ ಎಳ್ಳಮವಾಸ್ಯೆಯ ವಿಶೇಷ ಭಜ್ಜಿಗಾಗಿ ಬೇಕಾಗುವ ಎಲ್ಲ ತರಕಾರಿಗಳ ಬೆಲೆ ದಿಢೀರ್ ಏರಿಕೆಯಾಗಿದೆ. ಮೆಂತೆ ಸೊಪ್ಪಿನ ಬೆಲೆ ಕೇಜಿಗೆ 120 ರಿಂದ 140ಕ್ಕೆ ಮಾರಾಟವಾಗುತ್ತಿದೆ. ಅವರೇಕಾಯಿ ಕೆಜಿಗೆ 140- 150 ರೂ.ಗೆ ಏರಿಕೆ ಕಂಡಿದೆ. ಹಸಿ ಬಟಾಣಿ ಕೆಜಿಗೆ 120ಕ್ಕೆ ವೃದ್ಧಿಯಾಗಿದೆ. ಹಸಿ ಮೆಣಸಿನಕಾಯಿ ಕೆಜಿಗೆ 80 ರೂ. ಏರಿಕೆಯಾಗಿದೆ.
ಪಾಲಕ್ ಸೊಪ್ಪು 80 ರಿಂದ ಕೆಲವೆಡೆ 100 ಕೆಜಿಗೆ ಏರಿದೆ. ಬದನೆಕಾಯಿ 140 ರೂ. ಕೆಜಿಯಾದರೆ, ಹಸಿ ಹುಣಸೆಕಾಯಿ ಕೆಜಿ 100 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಸೋರೆಕಾಯಿ 60 ರೂ. ಕೆಜಿ., ಗಜ್ಜರಿ ಕೆಜಿಗೆ 60 ರಿಂರ 80 ರೂ., ತೊಗರಿಕಾಯಿ, ಅವರೆಕಾಯಿ, ಬಟಾಣಿ ಕಾಯಿಗಳ ಬೆಲೆ 100 ರೂ. ಮೇಲೆ ಇದ್ದು, ಜನತೆ ಮಾರುಕಟ್ಟೆಗೆ ಹೋಗಿ ತರಕಾರಿಗಳ ದರ ಕೇಳಿ ಹೌಹಾರುವಂತಾಗಿದೆ.
ಅತಿವೃಷ್ಟಿಯಿಂದಾಗಿ ಮುಂಗಾರು ಬೆಳೆಗಳೆಲ್ಲವೂ ಹಾಳಾಗಿದ್ದು, ಹಿಂಗಾರು ಬೆಳೆಗಳಾದ ಜೋಳ, ಕಡಲೆ, ಗೋಧಿ, ಕುಸುಬೆ ಹಾಗೂ ಇತರೆ ಬೆಳೆಗಳು ನಳ ನಳಿಸುತ್ತಿವೆ. ಆದರೆ, ರೈತರ ಕೈ ಹಿಡಯಬೇಕಾಗಿದ್ದ ತೊಗರಿ ಬಹುತೇಕ ಕಡೆಗಳಲ್ಲಿ ಗೊಡ್ಡು ಆಗಿದ್ದು, ಅನ್ನದಾತರ ಸಂಕಟ ಹೆಚ್ಚುವಂತೆ ಮಾಡಿದೆ. ಈ ಎಲ್ಲ ಕಷ್ಟಗಳ ನಡುವೆ ಜಿಲ್ಲೆಯ ರೈತರು ಇದೀಗ ಎಳ್ಳಮವಾಸ್ಯೆಯ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ.
ತನ್ನೊಂದಿಗೆ ಹಗಲಿರುಳು ದುಡಿಯುವ ಎತ್ತುಗಳನ್ನು ಹಾಗೂ ಅನ್ನ ನೀಡುವ ಭೂಮಿ ತಾಯಿಯನ್ನು ಪೂಜಿಸಲು ರೈತ ಅಣಿಯಾಗಿದ್ದು, ಹಬ್ಬಕ್ಕಾಗಿ ನಗರದ ಜನತೆ ಶನಿವಾರವೇ ತಮ್ಮ ಊರುಗಳಿಗೆ ತೆರಳುವುದು ಕಂಡು ಬಂತು. ವಿಶೇಷವಾಗಿ ಈ ಬಾರಿ ಹಬ್ಬ ಭಾನುವಾರದ ರಜಾ ದಿನ ಬಂದಿರುವುದರಿಂದ ಜನತೆ ತಮ್ಮೂರುಗಳತ್ತ ಮುಖ ಮಾಡಿದ್ದಾರೆ. ಭಾನುವಾರ ಜಿಲ್ಲೆಯಾದ್ಯಂತ ಗ್ರಾಮೀಣ ಭಾಗಕ್ಕೆ ಕಳೆ ಬರಲಿದೆ.
ಗ್ರಾಮೀಣದಲ್ಲಿ ಸಿದ್ಧತೆ ಜೋರು
ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಎಳ್ಳಮವಾಸ್ಯೆ ಹಬ್ಬದ ಸಿದ್ಧತೆ ಜೋರಾಗಿರುವುದು ಕಂಡು ಬಂತು. ಗ್ರಾಮೀಣ ಭಾಗದ ಜನರು ತಾವಷ್ಟೇ ಅಲ್ಲದೆ, ನೆಂಟರು, ಸ್ನೇಹಿತರು, ಅನ್ಯ ಧರ್ಮೀಯರನ್ನು ಕರೆದುಕೊಂಡು ಜಮೀನುಗಳಿಗೆ ತೆರಳಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಎಲ್ಲರಿಗೂ ಸೌಹಾರ್ದತೆಯೊಂದಿಗೆ ಊಟ ಮಾಡುವುದು ಈ ಹಬ್ಬದ ವಿಶೇಷತೆಯಾಗಿದೆ. ಹೀಗಾಗಿ, ಹಳ್ಳಿಗಳಲ್ಲಿ ಹಬ್ಬದ ಖರೀದಿ, ಸಿದ್ಧತೆ ನಗರಕ್ಕಿಂತ ಜೋರಾಗಿದೆ.