Karnataka news paper

ನಮ್ಮ ಮೆಟ್ರೋದಲ್ಲಿ ಬರಲಿದೆ ‘ಟ್ರಿಪ್‌ ಟಿಕೆಟ್‌’ ಯೋಜನೆ; ಕಾರ್ಡ್‌ನಲ್ಲಿ ಕನಿಷ್ಠ ಬ್ಯಾಲೆನ್ಸ್‌ ಉಳಿಸುವ ಅಗತ್ಯವಿಲ್ಲ!


ಹೈಲೈಟ್ಸ್‌:

  • ನಮ್ಮ ಮೆಟ್ರೋ’ ಪ್ರಯಾಣಿಕರ ಅನುಕೂಲಕ್ಕೆ ಹಲವು ವಿನೂತನ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಈ ವರ್ಷದ ಮಾರ್ಚ್ ನಿಂದ ‘ಟ್ರಿಪ್‌ ಟಿಕೆಟ್‌’ ಯೋಜನೆ ಜಾರಿಗೆ ತರಲು ನೀಲನಕ್ಷೆ ರೂಪಿಸಿದೆ
  • ಸಾರ್ವಜನಿಕರು ಟಿಕೆಟ್‌ ಕೌಂಟರ್‌ನಲ್ಲಿ ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸುವುದು ಹಾಗೂ ಶೀಘ್ರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವುದು ಇದರ ಹಿಂದಿರುವ ಉದ್ದೇಶ
  • ಮೆಟ್ರೋ ಕಾರ್ಡ್‌ ಮಾದರಿಯಲ್ಲೇ ಇರಲಿರುವ ಟ್ರಿಪ್‌ ಟಿಕೆಟ್‌ಗಳು 25, 50, 100 ಹೀಗೆ ನಿರ್ದಿಷ್ಟ ಟ್ರಿಪ್‌ಗಳನ್ನು ಹೊಂದಿರುತ್ತವೆ. ಮುಂಗಡ ಹಣ ನೀಡಿ ಟ್ರಿಪ್‌ ಟಿಕೆಟ್‌ ಪಡೆಯಬಹುದು

ಬೆಂಗಳೂರು: ನಗರ ಸಂಚಾರ ಜೀವನಾಡಿಯಾದ ‘ನಮ್ಮ ಮೆಟ್ರೋ‘ ಪ್ರಯಾಣಿಕರ ಅನುಕೂಲಕ್ಕೆ ಹಲವು ವಿನೂತನ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಈ ವರ್ಷದ ಮಾರ್ಚ್ ನಿಂದ ‘ಟ್ರಿಪ್‌ ಟಿಕೆಟ್‌‘ ಯೋಜನೆ ಜಾರಿಗೆ ತರಲು ನೀಲನಕ್ಷೆ ರೂಪಿಸಿದೆ.

ಈ ಮೂಲಕ ಸಾರ್ವಜನಿಕರು ಟಿಕೆಟ್‌ ಕೌಂಟರ್‌ನಲ್ಲಿ ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸುವುದು ಹಾಗೂ ಶೀಘ್ರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವುದು ಇದರ ಹಿಂದಿರುವ ಉದ್ದೇಶವಾಗಿದೆ.

ಮೆಟ್ರೋ ಕಾರ್ಡ್‌ ಮಾದರಿಯಲ್ಲೇ ಇರಲಿರುವ ಟ್ರಿಪ್‌ ಟಿಕೆಟ್‌ಗಳು 25, 50, 100 ಹೀಗೆ ನಿರ್ದಿಷ್ಟ ಟ್ರಿಪ್‌ಗಳನ್ನು ಹೊಂದಿರುತ್ತವೆ. ಮುಂಗಡ ಹಣ ನೀಡಿ ಟ್ರಿಪ್‌ ಟಿಕೆಟ್‌ ಪಡೆಯಬಹುದು. ಇದಕ್ಕೆ ದೂರದ ಮಿತಿ ಇಲ್ಲ. ಎರಡು ಸ್ಟೇಷನ್‌ಗಳ ಅಂತರದಲ್ಲಿ ಎಲ್ಲಿ ಬೇಕಾದರೂ ಇಳಿದುಕೊಳ್ಳಬಹುದು. ಕಾರ್ಡ್‌ನಿಂದ ಪ್ರತಿ ಟ್ರಿಪ್‌ಗೂ ಸ್ವಯಂ ಚಾಲಿತವಾಗಿ ಹಣ ಕಡಿತಗೊಳ್ಳುತ್ತದೆ.

ಟ್ರಿಪ್‌ ಟಿಕೆಟ್‌ ಪಡೆದು ಪ್ರಯಾಣ ಮಾಡುವವರ ಕಾರ್ಡ್‌ನಲ್ಲಿ ಕನಿಷ್ಠ ಬ್ಯಾಲೆನ್ಸ್‌ ಇಟ್ಟುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಈ ಟ್ರಿಪ್‌ ಟಿಕೆಟ್‌ಗೆ ಸಂಬಂಧಿಸಿದಂತೆ ಇನ್ನೂ ಬೆಲೆ ನಿಗದಿಯಾಗಿಲ್ಲ. ಕಿಲೋಮೀಟರ್‌ ಅಥವಾ ಎರಡು ಸ್ಟೇಷನ್‌ಗಳ ಮಧ್ಯ ಬೆಲೆ ನಿಗದಿಪಡಿಸಬೇಕೇ? ಎಷ್ಟು ರಿಯಾಯತಿ ನೀಡಬೇಕು? ಎನ್ನುವುದರ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನ ರಸ್ತೆಗಿಳಿದಿವೆ 6 ಎಲೆಕ್ಟ್ರಿಕ್‌ ಬಸ್‌ಗಳು..! ಮಾಲಿನ್ಯ ನಿಯಂತ್ರಣಕ್ಕೆ ‘ಅಸ್ತ್ರ’..!
ಅನುಕೂಲವೇನು?

ಕೋವಿಡ್‌ ನಂತರ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಈ ರೀತಿಯ ಹೊಸ ಯೋಜನೆಗಳು ಪ್ರಯಾಣಿಕರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ. ಬೆಂಗಳೂರು ಪ್ರವಾಸ ಕೈಗೊಳ್ಳುವವರಿಗೆ ಈ ಟ್ರಿಪ್‌ ಟಿಕೆಟ್‌ ಬಹಳ ಅನುಕೂಲವಾಗಲಿದೆ. ಒಂದು ಬಾರಿ ಟಿಕೆಟ್‌ ತೆಗೆದುಕೊಂಡರೆ ಎಲ್ಲಿ ಬೇಕಾದರೂ ಪ್ರಯಾಣಿಸಬಹುದಾಗಿದೆ. ಇದು ಸಮಯ, ಹಣ ಎರಡನ್ನೂ ಉಳಿತಾಯ ಮಾಡುತ್ತದೆ. ಸ್ಮಾರ್ಟ್‌ ಕಾರ್ಡ್‌ ತೆಗೆದುಕೊಂಡರೆ ಕನಿಷ್ಠ 50 ರೂ. ಬ್ಯಾಲೆನ್ಸ್‌ ಇಟ್ಟುಕೊಳ್ಳಲೇ ಬೇಕು. ಇದರಲ್ಲಿ ಅದು ಇಲ್ಲದಿರುವುದರಿಂದ ಹೆಚ್ಚಿನವರು ಈ ಟಿಕೆಟ್‌ ಪಡೆಯುವುದಕ್ಕೆ ಆಸಕ್ತಿ ತೋರಿಸುವ ಸಾಧ್ಯತೆ ಇದೆ.

ಬೇರೆ ಮೆಟ್ರೊಗಳಲ್ಲಿ ಭರಪೂರ ಕೊಡುಗೆ

ಹೈದರಾಬಾದ್‌, ಚೆನ್ನೈ, ಹೊಸದಿಲ್ಲಿ ಮತ್ತು ಕೊಚ್ಚಿ ಮೆಟ್ರೊ ರೈಲು ನಿಗಮಗಳು ಪ್ರಯಾಣಿಕರನ್ನು ಸೆಳೆಯುವ ನಿಟ್ಟಿನಲ್ಲಿ ಹಲವು ಕೊಡುಗೆಗಳನ್ನು ನೀಡುತ್ತಿವೆ. ಕೊಚ್ಚಿ ಮೆಟ್ರೊದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಪಾಸ್‌, ಪ್ರವಾಸಿಗರಿಗಾಗಿ ಟೂರಿಸ್ಟ್‌ ಸ್ಮಾರ್ಟ್‌ ಕಾರ್ಡ್‌ ನೀಡುತ್ತಿದೆ. ದಿಲ್ಲಿ ಮೆಟ್ರೊದಲ್ಲಿ ವಾರಾಂತ್ಯದ ದಿನಗಳು ಹಾಗೂ ರಾಷ್ಟ್ರೀಯ ಹಬ್ಬಗಳ ದಿನಗಳಂದು ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲಾಗುತ್ತಿದೆ. ಆದರೆ, ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಪ್ರಯಾಣಿಕರನ್ನು ಹೆಚ್ಚಿಸಿಕೊಳ್ಳಲು ಯಾವುದೇ ರಿಯಾಯಿತಿಗಳನ್ನು ನೀಡುತ್ತಿಲ್ಲ.
2022ರ ಅಂತ್ಯಕ್ಕೆ 37 ಕಿಮೀ ಮೆಟ್ರೋ ಮಾರ್ಗ ಸೇರ್ಪಡೆ: ಟ್ರಾಫಿಕ್‌ ಜಾಮ್‌ ತಗ್ಗುವ ಸಾಧ್ಯತೆ
ಗ್ರೂಪ್‌ ಟಿಕೆಟ್‌ ಕೇಳೋರೆ ಇಲ್ಲ

ಈಗಾಗಲೇ ನಮ್ಮ ಮೆಟ್ರೊದ ‘ಗ್ರೂಪ್‌ ಟ್ರಿಕೆಟ್‌’ ಯೋಜನೆಯ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿಯೇ ಇಲ್ಲ. 25 ಅಥವಾ ಅದಕ್ಕಿಂತ ಹೆಚ್ಚಿನ ಜನರು ಗುಂಪಾಗಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಗ್ರೂಪ್‌ ಟಿಕೆಟ್‌ ಪಡೆಯಬಹುದು. ನಿಲ್ದಾಣಗಳೊಳಗಿನ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಗುಂಪು ಟಿಕೆಟ್‌ ಅನ್ನು ಭೌತಿಕವಾಗಿ ಮಾತ್ರ ಖರೀದಿಸಬಹುದು. ಸಾಮಾನ್ಯ ಟೋಕನ್‌ ದರಕ್ಕಿಂತ ಶೇ.10 ರಿಯಾಯಿತಿ ಗ್ರೂಪ್‌ ಟಿಕೆಟ್‌ನಲ್ಲಿ ಪಡೆಯಬಹುದಾಗಿದೆ. ಟಿಕೆಟ್‌ ನೀಡುವ ಮೊದಲು ಗುಂಪಿನಲ್ಲಿ ಎಷ್ಟು ಜನರಿದ್ದಾರೆ ಎಂದು ಎಣಿಸಿ ಟಿಕೆಟ್‌ ನೀಡಲಾಗುತ್ತದೆ. ಮದುವೆಗೆ ಗುಂಪಾಗಿ ಹೋಗುವವರು, ಶಾಲಾ ಮಕ್ಕಳು, ಗುಂಪು ಗುಂಪಾಗಿ ಪ್ರಯಾಣಿಸುವ ಪ್ರವಾಸಿಗರಿಗೆ ಈ ಯೋಜನೆ ಸಾಕಷ್ಟು ಸಹಕಾರಿಯಾಗಲಿದೆ. ನವೆಂಬರ್‌ನಲ್ಲಿ ಶೇ. 0.12 ಪ್ರಯಾಣಿಕರು ಗ್ರೂಪ್‌ ಟಿಕೆಟ್‌ ಖರೀದಿಸಿದ್ದಾರೆ, ಅಕ್ಟೋಬರ್‌ನಲ್ಲಿ ಶೇ. 0.02 ಮತ್ತು ಸೆಪ್ಟೆಂಬರ್‌ನಲ್ಲಿ ಒಂದೂ ಗ್ರೂಪ್‌ ಟಿಕೆಟ್‌ ಖರೀದಿಯಾಗಿಲ್ಲ.



Read more