Online Desk
ಇಸ್ಲಾಮಾಬಾದ್: ನೆರೆಯ ಪಾಕಿಸ್ತಾನದಲ್ಲಿ ಸದ್ದಿಲ್ಲದೇ ತಾಲಿಬಾನ್ ರಾಜ್ ಆರಂಭವಾಗಿದ್ದು, ಸೇನೆ ಮತ್ತು ತಾಲಿಬಾನ್ ಬಂಡುಕೋರರ ನಡುವಿನ ದಾಳಿಯಲ್ಲಿ ನಾಲ್ಕು ಪಾಕ್ ಸೈನಿಕರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಭದ್ರತಾ ಪಡೆಗಳು ಉತ್ತರ ವಜೀರಿಸ್ತಾನದ ಮೀರ್ ಅಲಿ ಪಟ್ಟಣದಲ್ಲಿ ಶಂಕಿತ ಬಂಡುಕೋರರ ಅಡಗುತಾಣಗಳ ಮೇಲೆ ದಾಳಿ ನಡೆಸುತ್ತಿದ್ದಾಗ “ತೀವ್ರವಾದ ಗುಂಡಿನ ಚಕಮಕಿಯಲ್ಲಿ” ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೇನೆಯ ಹೇಳಿಕೆ ತಿಳಿಸಿದೆ. ಅಂತೆಯೇ ಟಿಟಿಪಿ (ತೆಹ್ರೀಕ್ ಇ ತಾಲಿಬಾನಿ ಪಾಕಿಸ್ತಾನ) ಸಂಘಟನೆಯಲ್ಲೂ ಕೂಡ ಸಾಕಷ್ಟು ಸಾವುನೋವು ಸಂಭವಿಸಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನ ಆಡಳಿತವಿರುವ ಪ್ರದೇಶಗಳಲ್ಲಿ ಟಿಟಿಪಿ ನಿಯಂತ್ರಣ ಸಾಧಿಸಲು ಯತ್ನಿಸಿದಾಗ ಪರಸ್ಪರ ಕದನ ವಿರಾಮ ಉಲ್ಲಂಘನೆಯಾಗಿ ಗುಂಡಿನ ಕಾಳಗ ನಡೆದಿದೆ ಎನ್ನಲಾಗಿದೆ.
ಏನಿದು ಟಿಟಿಪಿ?
ಪಾಕಿಸ್ತಾನ, ಅಫ್ಘಾನಿಸ್ತಾನವನ್ನು ಹದ್ದುಬಸ್ತಿನಲ್ಲಿಡಲು ತಾನೇ ತಾಲಿಬಾನ್ ಅನ್ನು ಹುಟ್ಟು ಹಾಕಿತು. ಈಗ ಅದರದ್ದೇ ಭಾಗವಾಗಿರುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಪಾಕಿಸ್ತಾನವನ್ನು ನರಳಿ ನರಳಿ ಸಾಯುವಂತೆ ಮಾಡುತ್ತಿದೆ. ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಅನ್ನು ‘ಪಾಕಿಸ್ತಾನಿ ತಾಲಿಬಾನಿ’ ಎಂದು ಕರೆಯಲಾಗುತ್ತಿದ್ದು, ಇದರ ಬೇರುಗಳು ಅಫ್ಘಾನ್ ತಾಲಿಬಾನ್‌ನೊಂದಿಗೆ ಸಂಬಂಧ ಹೊಂದಿವೆ. ಟಿಟಿಪಿಯನ್ನು ಹಿಸುಕಿ ಹಾಕಲು ಪಾಕ್ ಸೇನೆ ಇನ್ನಿಲ್ಲದ ಕಸರತ್ತು ನಡೆಸಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಯಲ್ಲಿರುವ ಹಿಂದುಳಿದ ಪ್ರದೇಶಗಳು ಟಿಟಿಪಿಯ ಭದ್ರಕೋಟೆಗಳಾಗಿವೆ. ಟಿಟಿಪಿಯ ಅಡಗುತಾಣಗಳ ಮೇಲೆ ಪಾಕ್ ಸೇನೆ ದಾಳಿ ಮಾಡಿರುವ ಬಗ್ಗೆ ಸ್ವತಃ ಟಿಟಿಪಿ ದೃಢಪಡಿಸಿದೆ.
ಪಾಕ್ ಸೇನೆ ಹಾಗೂ ಟಿಟಿಪಿ ಮಧ್ಯೆ ಈ ತಿಂಗಳ ಆರಂಭದಲ್ಲಿ ಕದನ ವಿರಾಮ ಕೊನೆಗೊಂಡ ಬಳಿಕ, ಉತ್ತರ ವಜಿರಿಸ್ತಾನದ ಮೀರ್ ಅಲಿ ಪಟ್ಟಣದಲ್ಲಿ ಪಾಕ್ ಸೇನೆ ಹಾಗೂ ಟಿಟಿಪಿ ಸಂಘಟನೆ ಮಾರಾಣಾಂತಿವಾಗಿ ಸೆಣಸಾಡುತ್ತಿವೆ. ಪಾಕಿಸ್ತಾನಿ ತಾಲಿಬಾನ್ ಜೊತೆಗಿನ ಗುಂಡಿನ ಚಕಮಕಿಯಲ್ಲಿ ತನ್ನ ನಾಲ್ವರು ಯೋಧರು ಸಾವಿಗೀಡಾಗಿದ್ದಾರೆಂದು ಪಾಕಿಸ್ತಾನ ಸೇನೆ ಶುಕ್ರವಾರ ಖಚಿತಪಡಿಸಿದೆ.
ವಾಯುವ್ಯದಲ್ಲಿರುವ ಟ್ಯಾಂಕ್ ಜಿಲ್ಲೆಯಲ್ಲಿ ನಡೆದ ಮೊದಲ ದಾಳಿಯಲ್ಲಿ ಇಬ್ಬರು ಶಸ್ತ್ರಸಜ್ಜಿತ ಯೋಧರು ಸಾವಾದ್ರೆ, ಉತ್ತರ ವಜಿರಿಸ್ತಾನ್ ಜಿಲ್ಲೆಯಲ್ಲಿ ಎರಡನೇ ದಾಳಿ ನಡೆದಿದೆ. ಈ ಘಟನೆಯಲ್ಲಿ ಪಾಕ್ ನ ನಾಲ್ವರು ಸೈನಿಕರು ಸಾವಿಗೀಡಾದ್ರೆ, ಒಬ್ಬ ಭಯೋತ್ಪಾದಕನನ್ನು ಬಂಧಿಸಲಾಗಿದೆ.ಉತ್ತರ ವಜೀರಿಸ್ತಾನದ ಮೀರ್ ಅಲಿ ನಗರದಲ್ಲಿನ ಅನುಮಾನಾಸ್ಪದ ಸ್ಥಳಗಳ ಮೇಲೆ ಪಾಕ್ ನ ಭದ್ರತಾ ಪಡೆಗಳು ದಾಳಿ ನಡೆಸುತ್ತಿವೆ. ಕದನ ವಿರಾಮದ ಘೋಷಣೆ ಬಳಿಕವೂ ಪಾಕಿಸ್ತಾನ ಸರ್ಕಾರವು ಟಿಟಿಪಿ ಭಯೋತ್ಪಾದಕರನ್ನು ಮನವೊಲಿಸಲು ಪ್ರಯತ್ನಿಸುತ್ತಿದೆ.
ತೆಹ್ರೀಕ್-ಎ-ತಾಲಿಬಾನ್ ಮುಖ್ಯ ಗುರಿ ಏನು?
ಟಿಟಿಪಿ ಭಯೋತ್ಪಾದನೆ ಸಂಘಟನೆ ಪಾಕಿಸ್ತಾನದ ಸಂವಿಧಾನವನ್ನು ನಂಬುವುದಿಲ್ಲ ಹಾಗೂ ಗೌರವಿಸುವುದಿಲ್ಲ. ತಾಲಿಬಾನ್ ಸಂಘಟನೆ ಹೇಗೆ ಅಫ್ಘಾನಿಸ್ತಾವನ್ನು ವಶಪಡಿಸಿಕೊಂಡಿತು. ಅದೇ ರೀತಿ ಪಾಕಿಸ್ತಾನವನ್ನೂ ಕಬಳಿಸಿ, ಇಲ್ಲಿ ಖಟ್ಟರ್ ಇಸ್ಲಾಂ ಅನ್ನು ಹೇರುವುದು ತೆಹ್ರೀಕ್-ಎ-ತಾಲಿಬಾನ್ ಸಂಘಟನೆಯ ಮುಖ್ಯ ಗುರಿಯಾಗಿದೆ.
ಪೇಶಾವರ ಶಾಲೆಯ ದಾಳಿಯಲ್ಲಿ 150 ಮಕ್ಕಳು ಸಾವು
2007ರಲ್ಲಿ ಸ್ಥಾಪನೆಗೊಂಡಿರುವ ತೆಹ್ರೀಕ್-ಎ-ತಾಲಿಬಾನ್ ಸಂಘಟನೆ, 2014ರಲ್ಲಿ ಪೇಶಾವರ ಶಾಲೆಯ ಮೇಲೆ ದಾಳಿ ಮಾಡಿತ್ತು. ಈ ವೇಳೆ 150 ಶಾಲಾ ಮಕ್ಕಳು ಅಸುನೀಗಿದ್ದರು. ಇದರಿಂದ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತೆಹ್ರೀಕ್-ಎ-ತಾಲಿಬಾನ್ ಹೆಚ್ಚು ಕುಖ್ಯಾತಿ ಪಡೆದುಕೊಂಡಿತ್ತು.