Online Desk
ಪಿಯೋಂಗ್ಯಾಂಗ್: ವಿಶ್ವದ ಪಾಲಿಗೆ ರಾಕ್ಷಸನಾಗಿ ಕಾಡುತ್ತಿರುವ ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬದಲಾಗುತ್ತಿದ್ದಾರೆಯೇ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಪರಮಾಣು ಪ್ರಯೋಗ, ಖಂಡಾಂತರ ಮಿಸೈಲ್ ಗಳ ಪರೀಕ್ಷೆ ಮಾಡುವುದರ ಮೂಲಕ ವಿಶ್ವದ ಆರ್ಥಿಕ ಬಲಾಢ್ಯ ರಾಷ್ಟ್ರ ಅಮೆರಿಕದ ಕೆಂಗಣ್ಣಿಗೆ ಕಿಮ್ ಜಾಂಗ್ ಉನ್ ಈ ಹಿಂದೆ ಗುರಿಯಾಗಿದ್ದನು.
ಆದರೆ, 2022ರ ನೂತನ ವರ್ಷದಲ್ಲಿ ಉತ್ತರ ಕೋರಿಯಾದ ಸರ್ವಾಧಿಕಾರಿ ಬದಲಾಗುತ್ತಿದ್ದಾರೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಹೊಸ ವರ್ಷದಲ್ಲಿ ತನ್ನ ಲಕ್ಷ್ಯ ಪರಮಾಣು ಶಸ್ತ್ರಾಸ್ತ್ರಗಳು ಹಾಗೂ ಅಮೆರಿಕದ ಗುರಿಯಾಗಿರಿಸುವುದರ ಬದಲಾಗಿ ದೇಶದ ಆರ್ಥಿಕ ಅಭಿವೃದ್ಧಿಯತ್ತ ಕೇಂದ್ರಿಕೃತವಾಗಲಿದೆ ಎಂದು ಹೇಳಿದ್ದಾರೆ. ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮದ ವರದಿ ಪ್ರಕಾರ, ದೇಶದ ಕಾರ್ಖಾನೆಗಳಲ್ಲಿ ಉತ್ಪಾದನೆ ಹೆಚ್ಚಿಸಿ ಜನರ ಜೀವನ ಸುಧಾರಿಸುವ ಬಗ್ಗೆ ಕಿಮ್ ಜಾಂಗ್ ಉನ್, ಕಳೆದ ಸೋಮವಾರ ಆರಂಭವಾಗಿರುವ ಕೋರಿಯಾ ವರ್ಕರ್ಸ್ ಪಾರ್ಟಿಯ (ಡಬ್ಲ್ಯುಪಿಕೆ) 8ನೇ ಕೇಂದ್ರಿಯ ಸಮಿತಿ ಸಭೆ ಉದ್ದೇಶಿಸಿ ನಿನ್ನೆ ಮಾತನಾಡಿದ್ದರು ಎಂದು ತಿಳಿಸಿದೆ.
ಉತ್ತರ ಕೊರಿಯಾ ಜನರು ಸಾವು ಮತ್ತು ಬದುಕಿನ ನಡುವೆ ಸಂಘರ್ಷ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ನೂತನ ವರ್ಷ 2022 ಆಗಮನವಾಗಿದ್ದು, ತಮ್ಮ ರಾಷ್ಟ್ರ ಪ್ರಮುಖವಾಗಿ ಅಭಿವೃದ್ಧಿಯತ್ತ ಹೆಚ್ಚಿನ ಗಮನಹರಿಸಿ ಜನರ ಜೀವನವನ್ನು ಸುಧಾರಿಸುವುದಾಗಿದೆ ಎಂದು ಕಿಮ್ ಜಾಂಗ್ ಉನ್ ಹೇಳಿದ್ದಾರೆ.
2011ರಲ್ಲಿ ಕಿಮ್ ಜಾಂಗ್ ಉನ್ ತಂದೆ ತೀರಿಕೊಂಡ ಬಳಿಕ, ಅವರು ದೇಶದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಾಷ್ಟ್ರದ ಹೊಣೆ ಹೊತ್ತು 10 ವರ್ಷ ಗತಿಸಿದ ಮೇಲೆ ಈ ಸಭೆಗಳನ್ನು ಸರ್ವಾಧಿಕಾರಿ ನಡೆಸುತ್ತಿದ್ದಾನೆ. ಈ ಸಂದರ್ಭದಲ್ಲಿ, ‘ಪಂಚವಾರ್ಷಿಕ ಯೋಜನೆಯ ಅನುಷ್ಠಾನ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಜನರ ಜೀವನದಲ್ಲಿ ಗಮನಾರ್ಹ ಬದಲಾವಣೆಯನ್ನು ತರುವುದು ನಮ್ಮ ಮೂಲ ಕಾರ್ಯವಾಗಿದೆ’ ಎಂದು ಕಿಮ್ ಹೇಳಿದರು.
ಸಾಮಾನ್ಯವಾಗಿ, ಪ್ರಮುಖ ನೀತಿ ಘೋಷಣೆಗಳನ್ನು ಮಾಡಲು ಕಿಮ್ ಜೊಂಗ್ ಹೊಸ ವರ್ಷದ ಆರಂಭವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಾ ಬಂದಿದ್ದಾರೆ. ಆದರೆ ಈ ಬಾರಿ ತಮ್ಮ ಭಾಷಣದಲ್ಲಿ ದೇಶೀಯ ಸಮಸ್ಯೆಗಳಿಗೆ ಹೆಚ್ಚು ಒತ್ತು ನೀಡಿದರು. ಗ್ರಾಮೀಣಾಭಿವೃದ್ಧಿಯ ಮಹತ್ವಾಕಾಂಕ್ಷೆಯ ಯೋಜನೆಯಿಂದ ಜನರ ಆಹಾರ, ಶಾಲಾ ಸಮವಸ್ತ್ರ ಮತ್ತು ‘ಸಮಾಜವಾದಿ ಪದ್ಧತಿ’ಗೆ ಕಡಿವಾಣ ಹಾಕಬೇಕು ಎಂದು ಕರೆ ನೀಡಿದರು. ಕಿಮ್ ಜೊಂಗ್ ಅವರ ಈ ಭಾಷಣವನ್ನು ವಿಭಿನ್ನವೆಂದು ಪರಿಗಣಿಸಲಾಗಿದೆ ಏಕೆಂದರೆ ಈ ಸಮಯದಲ್ಲಿ ಅವರು ಜಾಗತಿಕ ವ್ಯವಹಾರಗಳ ಬಗ್ಗೆ ಮಾತನಾಡಲಿಲ್ಲ. ಸೇನೆ ಅಥವಾ ಆಯುಧಗಳಿಗೆ ಹೆಚ್ಚಿನ ಒತ್ತು ನೀಡಲಿಲ್ಲ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.