Online Desk
ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೋನಾ ಸ್ಫೋಟಗೊಂಡಿದ್ದು, ಕಳೆದ 24 ಗಂಟೆಗಳಲ್ಲಿ 4 ಒಮಿಕ್ರಾನ್ ಪ್ರಕರಣಗಳು ಸೇರಿದಂತೆ 8,067 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರದಲ್ಲಿ ಇಂದು ಕೊರೋನಾದಿಂದ 8 ಮಂದಿ ಮೃತಪಟ್ಟಿದ್ದು, ವಾಣಿಜ್ಯ ನಗರಿ ಮುಂಬೈನಲ್ಲಿ 5428 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.
ಇದನ್ನು ಓದಿ: ರಾಜಸ್ಥಾನ: ಓಮಿಕ್ರಾನ್‌ನಿಂದ ಚೇತರಿಸಿಕೊಂಡಿದ್ದ ವ್ಯಕ್ತಿ ಸಾವು
ಮಹಾರಾಷ್ಟ್ರದಲ್ಲಿ ಗುರುವಾರ 5,368 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. ಇಂದು ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ 24,509 ಸಕ್ರಿಯ ಕೋವಿಡ್-19 ಪ್ರಕರಣಗಳಿವೆ. ಮುಂಬೈ ಒಂದರಲ್ಲೇ ಸುಮಾರು 5600 ಕೋವಿಡ್-19 ಪ್ರಕರಣಗಳು ವರದಿಯಾಗಿವೆ.
ಸಾರ್ವಜನಿಕ ಆರೋಗ್ಯ ಇಲಾಖೆಯ ಪ್ರಕಾರ, ಇಂದು ನಾಲ್ವರಿಗೆ ಓಮಿಕ್ರಾನ್ ದೃಢಪಟ್ಟಿದ್ದು, ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 454ಕ್ಕೆ ತಲುಪಿದೆ. ಇದರಲ್ಲಿ 157 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮುಂಬೈ ಪೊಲೀಸರು ನಗರದಲ್ಲಿ ಇಂದು ಸೆಕ್ಷನ್ 144 ಜಾರಿ ಮಾಡಿದ್ದು, ಇಂದಿನಿಂದ ಜನವರಿ 15 ರವರೆಗೆ ಪ್ರತಿದಿನ ಸಂಜೆ 5 ರಿಂದ ಬೆಳಗ್ಗೆ 5 ರವರೆಗೆ ಜನರು ಬೀಚ್‌ಗಳು, ತೆರೆದ ಮೈದಾನಗಳು, ವಾಯುವಿಹಾರಗಳು, ಉದ್ಯಾನಗಳು, ಉದ್ಯಾನವನಗಳು ಅಥವಾ ಅಂತಹುದೇ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ.