Karnataka news paper

ದೇವಾಲಯಗಳ ಸ್ವಾಯತ್ತತೆ ಪ್ರಸ್ತಾಪಕ್ಕೆ ಸ್ವಾಮೀಜಿಗಳ ಸ್ವಾಗತ, ಭಕ್ತರೆಂದರೆ ಬರೀ ಆರ್‌ಎಸ್‌ಎಸ್ ಅಲ್ಲ ಎಂದ ಮುಜರಾಯಿ ಸಚಿವ


Online Desk

ಬೆಂಗಳೂರು: ಭಕ್ತರೆಂದರೆ ಬರೀ ಆರ್‌ಎಸ್‌ಎಸ್ ಅಷ್ಟೇ ಅಲ್ಲ, ದೇವರನ್ನು ನಂಬಿದವರೆಲ್ಲರೂ ಭಕ್ತರೇ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಪ್ರತಿಪಕ್ಷ ಕಾಂಗ್ರೆಸ್‌ ಅನ್ನು ಮಾತಿನ ಮೂಲಕ ತಿವಿದಿದ್ದಾರೆ.

ಬಿಜೆಪಿ, ಆರ್ ಎಸ್.ಎಸ್ ಕಾರ್ಯಕರ್ತರಿಗೆ ನೂರಾರು ಕೋಟಿ ಬೆಲೆ ಬಾಳುವ ದೇವಸ್ಥಾನಗಳನ್ನು ಹಸ್ತಾಂತರಿಸುವ ಅಜೆಂಡಾ ಹೊಂದಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಕೋಟಾ ಶ್ರೀನಿವಾಸ ಪೂಜಾರಿ ಅವರು ಈ ರೀತಿ ತಿರುಗೇಟು ನೀಡಿದ್ದಾರೆ.

ಇದನ್ನು ಓದಿ: ರಾಜ್ಯದ “ದೇವಾಲಯಗಳ ಸ್ವಾಯತ್ತತೆ ಐತಿಹಾಸಿಕ ಬ್ಲಂಡರ್, ಬಿಜೆಪಿ ಸರ್ಕಾರ ಭಸ್ಮವಾಗಲಿದೆ”: ಡಿಕೆ ಶಿವಕುಮಾರ್​

ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ತಪ್ಪಿಸಿ ಭಕ್ತರ ಕೈಗೆ ನೀಡಬೇಕು ಎಂಬುದು ನಮ್ಮ ಚಿಂತನೆ. ಭಕ್ತರು ಎಂದರೆ ಬಿಜೆಪಿ, ಆರ್ ಎಸ್.ಎಸ್ ಕಾರ್ಯಕರ್ತರೂ ಆಗಿರಬಹುದು ಅಥವಾ, ಡಿ.ಕೆ. ಶಿವಕುಮಾರ್ ಕೂಡ ಆಗಿರಬಹುದು. ಭಕ್ತರ ವ್ಯಾಪ್ತಿ ಬರೀ ಆರ್‌ಎಸ್‌ಎಸ್ ಅಷ್ಟೇ ಅಲ್ಲ, ದೇವರನ್ನು ನಂಬಿದವರೆಲ್ಲರೂ ಭಕ್ತರೇ ಆಗಿದ್ದಾರೆ. ಹೀಗಾಗಿ ರಾಜ್ಯದ ಹಿಂದೂ ದೇವಸ್ಥಾನಗಳನ್ನು ಕಾನೂನು ಹಾಗೂ ನಿಯಮಗಳಿಂದ ಸರಳೀಕರಣಗೊಳಿಸಿ ನಾವು ಭಕ್ತರಿಗೆ ಕೊಡಬೇಕು ಎಂದು ಆಲೋಚಿಸಿದ್ದೇವೆಯಾದರೂ ಇನ್ನೂ ಮಾರ್ಗಸೂಚಿ ಸಿದ್ಧಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ದೇವಾಲಯಗಳ ಸ್ವಾಯತ್ತತೆ ಪಸ್ತಾಪ ಸ್ವಾಗತಿಸಿದ ಸ್ವಾಮೀಜಿಗಳು
ಹಿಂದೂ ದೇವಾಲಯಗಳನ್ನು ಸ್ವತಂತ್ರಗೊಳಿಸಿ ದೇವಾಲಯದ ವರಮಾನವನ್ನು ದೇವಾಲಯಗಳ ಅಭಿವೃದ್ಧಿಗೇ ಮೀಸಲಿಡುವ ರಾಜ್ಯ ಸರ್ಕಾರದ ಪ್ರಸ್ತಾವದ ಪರ, ವಿರೋಧದ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸರ್ಕಾರದ ಈ ಪ್ರಸ್ತಾವವನ್ನು ಕಡಗಂಚಿಯ ವೀರಭದ್ರ ಶಿವಾಚಾರ್ಯ‌ ಸ್ವಾಮೀಜಿ ಸ್ವಾಗತಿಸಿದ್ದಾರೆ.

ಇದರೊಂದಿಗೆ ಸರ್ಕಾರದ ಅಭಿಪ್ರಾಯಕ್ಕೆ ವಿವಿಧ ಮಠಾಧೀಶರು ಸಹ ಬೆಂಬಲಿಸಿದ್ದು, ಪ್ರಾಚೀನ ಕಾಲದಿಂದ ಬಂದಿರುವ ನಮ್ಮ ಹಿಂದೂ ದೇವಾಲಯಗಳು ಸರ್ಕಾರದ ಅಧೀನದಲ್ಲಿ ಇರುವುದರಿಂದ ಅದರ ಅಭಿವೃದ್ಧಿ ಆಗುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಂತನಶೀಲರಾಗಿ ಹಿಂದೂಗಳಿಗೆ ಸಮ್ಮತವಾದ ನಿರ್ಣಯವನ್ನು ತೆಗೆದುಕೊಂಡಿರುವುದು ಸ್ವಾಗತಾರ್ಹವಾಗಿದೆ. ಸರ್ಕಾರ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ ಎಂದು ಸರಡಗಿಯ ಡಾ.ರೇವಣಸಿದ್ಧ ಶಿವಾಚಾರ್ಯರು, ಶಖಾಪುರ ತಪೋವನ ಮಠದ ಡಾ . ಸಿದ್ಧರಾಮ ಶಿವಾಚಾರ್ಯರು , ಪಾಳಾದ ಡಾ. ಗುರುಮೂರ್ತಿ ಶಿವಾಚಾರ್ಯರು ಸೇರಿದಂತೆ ಮತ್ತಿತರರು ಶ್ಲಾಘಿಸಿದ್ದಾರೆ.



Read more