PTI
ಚಂಡೀಗಢ: ಪಂಜಾಬ್ ವಿಧಾನಸಭೆ ಚುನಾವಣೆ ಕಣ ರಂಗೇರಿರುವಂತೆಯೇ ಇತ್ತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಭದ್ರಕೋಟೆ ಪಂಜಾಬಿನ ಪಟಿಯಾಲಾದಲ್ಲಿ ಅರವಿಂದ್ ಕೇಜ್ರಿವಾಲ್ `ಶಾಂತಿ ಮಾರ್ಚ್` ನಡೆಸಿ ಮಾತನಾಡಿದ ಕೇಜ್ರಿವಾಲ್ ಅವರು, ಪಂಜಾಬ್ ನಲ್ಲಿ ಪ್ರಸ್ತುತ ಇರುವುದು ಅತ್ಯಂತ ದುರ್ಬಲ ಸರ್ಕಾರ. ಜನರ ಕಾಳಜಿಗಿಂತ ಅವರಿಗೆ ಮುಖ್ಯಮಂತ್ರಿ ಹುದ್ದೆಯೇ ಮುಖ್ಯವಾಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಪಂಜಾಬ್: ಚಂಡೀಗಢ ಮುನ್ಸಿಪಾಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಎಎಪಿಗೆ ಗೆಲುವು, ಬಿಜೆಪಿಗೆ 2ನೇ ಸ್ಥಾನ!
ರಾಜಕಾರಣಿಗಳು ಮತ್ತೆ ಪಂಜಾಬ್‍ನ ವಾತಾವರಣವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ. ಪಂಜಾಬಿನ ಸಾಮಾನ್ಯ ಜನರು ಮಾತ್ರ ರಾಜ್ಯವನ್ನು ಉಳಿಸುತ್ತಾರೆಯೇ ಹೊರತು ಜನಪ್ರತಿನಿಧಿಗಳಲ್ಲ. ಇದುವರೆಗೆ ಪಂಜಾಬಿನಲ್ಲಿ ಅತ್ಯಂತ ದುರ್ಬಲ ಸರ್ಕಾರವೆಂದರೆ ಅದು ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಹುದ್ದೆಗಾಗಿ ಪರಸ್ಪರ ಹೊಡೆದಾಡಿಕೊಳ್ಳುವುದರಲ್ಲೇ ಮುಳುಗಿ ಹೋಗಿದ್ದಾರೆ. ಪಂಜಾಬ್ ಪರಿಸ್ಥಿತಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಟೀಕಿಸಿದರು.
ಕೇಜ್ರಿವಾಲ್ ಮೆರವಣಿಗೆಯಲ್ಲಿ ಹಿರಿಯ ಎಎಪಿ ನಾಯಕ ಭಗವಂತ್ ಮಾನ್ ಜೊತೆಗಿದ್ದರು. ಶಾಂತಿ ಮಾರ್ಚ್` ಮುನ್ನ ಪಟಿಯಾಲದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಕೇಜ್ರಿವಾಲ್ ನಂತರ ಶ್ರೀ ಕಾಳಿ ದೇವಿ ಮಂದಿರದಲ್ಲಿ ಪೂಜೆ ಸಲ್ಲಿಸಿದರು. ಮೆರವಣಿಗೆ ನಡೆಸಿದ ನಂತರ, ಕೇಜ್ರಿವಾಲ್ ಇಲ್ಲಿನ ಗುರುದ್ವಾರ ಶ್ರೀ ದುಃಖಿವಾರನ್ ಸಾಹಿಬ್‍ಗೆ ನಮನ ಸಲ್ಲಿಸಿದರು.