Karnataka news paper

ಬಿಡಿಎ: ಇ ಹರಾಜು ಪ್ರಕ್ರಿಯೆ ಯಶಸ್ವಿ, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ


Online Desk

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಡಿಸೆಂಬರ್ ಮಾಹೆಯಲ್ಲಿ ಹಮ್ಮಿಕೊಂಡಿದ್ದ ಇ- ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಗರಿಷ್ಠ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟಾರೇ 296 ಮೂಲೆ ಮತ್ತು ಮಧ್ಯಂತರ ನಿವೇಶನಗಳು ಮಾರಾಟವಾಗಿವೆ.

ಅಂಜನಾಪುರ, ಬನಶಂಕರಿ, ಜೆ.ಪಿ. ನಗರ, ಆರ್ಕಾವತಿ ಲೇಔಟ್, ಎಚ್ ಬಿಆರ್ ಲೇಔಟ್, ನಾಗರಭಾವಿ, ನಾಡಪ್ರಭು ಕೆಂಪೇಗೌಡ ಲೇಔಟ್, ಸರ್.ಎಂ. ವಿಶ್ವೇಶ್ವರಯ್ಯ ಲೇಔಟ್, ಮತ್ತಿತರ ಬಡಾವಣೆಗಳಲ್ಲಿ ಒಟ್ಟು 372 ನಿವೇಶಗಳನ್ನು ಇ- ಹರಾಜಿನಲ್ಲಿ ಅಳವಡಿಸಿದ್ದು, 296 ನಿವೇಶನಗಳು ಮಾರಾಟವಾಗಿವೆ. ಯಶಸ್ವಿಯಾಗದ ಬಿಡ್ ದಾರರಿಗೆ ಪ್ರಾರಂಭಿಕ ಠೇವಣಿ ಹಣವನ್ನು ಹಿಂದಿರುಗಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಬಿಡಿಎ ಸಾರ್ವಜನಿಕ ಸಂಪರ್ಕಾಧಿಕಾರಿ ಜಡಿಯಪ್ಪ ತಿಳಿಸಿದ್ದಾರೆ.

ಒಟ್ಟಾರೇ 296 ನಿವೇಶನಗಳ  ಪ್ರಾರಂಭಿಕ ಬೆಲೆ 215 ಕೋಟಿ ರೂ.ಗಳಾಗಿದ್ದು, ಸದರಿ ನಿವೇಶನಗಳು 348 ಕೋಟಿ ರೂ.ಗಳಿಗೆ ಹರಾಜಿನಲ್ಲಿ ಮಾರಾಟವಾಗಿವೆ. 133 ಕೋಟಿ ರೂ.ಗಳಷ್ಟು ಅಧಿಕ ಆದಾಯ ಸಂಗ್ರಹವಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 118 ಮೂಲೆ ನಿವೇಶನಗಳನ್ನು ಇ-ಹರಾಜಿನಲ್ಲಿ ಪ್ರಕಟಿಸಲಾಗಿದ್ದು, ಇವುಗಳಲ್ಲಿ 80 ಮೂಲೆ ನಿವೇಶನಗಳು ಹರಾಜಿನಲ್ಲಿ ಮಾರಾಟವಾಗಿವೆ. ಸದರಿ ನಿವೇಶನಗಳ ಪ್ರಾರಂಭಿಕ ಮೊತ್ತ 44.28 ಕೋಟಿ ರೂ.ಗಳಾಗಿದ್ದು, 63.59 ಕೋಟಿ ರೂ.ಗಳಿಗೆ ಹರಾಜಿನಲ್ಲಿ ಮಾರಾಟವಾಗಿವೆ. ಅಂದರೆ 19.31 ಕೋಟಿ ರೂ.ಗಳಷ್ಟು ಅಧಿಕ ಆದಾಯ ಸಂಗ್ರಹವಾಗಿದೆ. 

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಗರಿಷ್ಠ 6,608 ರೂ. ಪ್ರತಿ ಚದರ ಅಡಿ ಹಾಗೂ ಅರ್ಕಾವತಿ ಬಡಾವಣೆಯಲ್ಲಿ ಗರಿಷ್ಠ 14,368  ರೂ. ಪ್ರತಿ ಚದರ ಅಡಿಗೆ ಭೂಮಿ ಮಾರಾಟವಾಗಿದೆ. ಮುಂದಿನ ಜನವರಿ ಮಾಹೆಯಲ್ಲಿ ಸುಮಾರು 500 ಮೂಲೆ ನಿವೇಶನಗಳು ಹಾಗೂ 500 ಮಧ್ಯಂತರ ನಿವೇಶನಗಳ ಇ- ಹರಾಜು ನಡೆಸಲಾಗುವುದು ಎಂದು ಬಿಡಿಎ ತಿಳಿಸಿದೆ.
 



Read more