Karnataka news paper

ಅಧಿವೇಶನದಲ್ಲಿ ಸರ್ಕಾರವನ್ನು ಹಣಿಯಲು ಸಿದ್ದರಾಮಯ್ಯ ಪಟ್ಟಿ ಮಾಡಿಕೊಂಡ ವಿಷಯಗಳಿವು


ಬೆಳಗಾವಿ: ಇಲ್ಲಿನ ‌ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಪ್ರಸ್ತಾಪಿಸಲು ಸಾಕಷ್ಟು ಸಮಸ್ಯೆಗಳ ಪಟ್ಟಿ ಮಾಡಿಕೊಂಡಿದ್ದೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಪ್ರವಾಹ, ಅತಿವೃಷ್ಟಿಯಿಂದ ಅಪಾರ ಹಾನಿಯಾಗಿದೆ. ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ನೆರೆ ಸಂತ್ರಸ್ತರಿಗೆ ಒಂದೂ ಮನೆಯನ್ನೂ ಕೊಟ್ಟಿಲ್ಲ. ಮತಾಂತರ ನಿಷೇಧ ಕಾಯ್ದೆ, ಶೇ 40ರಷ್ಟು  ಲಂಚದ ಭ್ರಷ್ಟಾಚಾರ ಹೀಗೆ… ಹಲವು  ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಲಾಗುವುದು’ ಎಂದರು.

ಈ ಸರ್ಕಾರದಲ್ಲಿ ಒಂದೂ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ರೈತರೆಲ್ಲರೂ ಬಹಳ ಕಷ್ಟದಲ್ಲಿದ್ದಾರೆ. ಈ  ಸಮಸ್ಯೆಗಳನ್ನು ಚರ್ಚಿಸಲಾಗುವುದು ಎಂದು ತಿಳಿಸಿದರು.

ಓದಿ: 

‘ಭ್ರಷ್ಟಾಚಾರದ ಕುರಿತು ಸರ್ಕಾರ ತನಿಖೆ ನಡೆಸಬೇಕು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ನಾನು ಹೇಳಿ ಪ್ರಧಾನಿಗೆ ಪತ್ರ ಬರೆಸಿದ್ದೀನಾ? ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು ಸುಳ್ಳಾ‌? ಪತ್ರದ ಪ್ರತಿ ನನ್ನ ಬಳಿ ಇದೆ’ ಎಂದರು.

ತಿದ್ದುಪಡಿ ಮಾಡಲಾದ ಎಪಿಎಂಸಿ ಕಾಯ್ದೆ ವಾಪಸ್ ಪಡೆದುಕೊಳ್ಳುವುದಿಲ್ಲ ಎಂಬ ಸಹಕಾರ ಸಚಿವ ಸೋಮಶೇಖರ ಹೇಳಿಕೆಗೆ, ‘ಕಾಯ್ದೆಯಿಂದ ಅನುಕೂಲ ಆಗಿದೆಯೇ? ಅನಾನುಕೂಲ ‌ಆಗಿದೆಯೇ ಎನ್ನುವುದನ್ನು ರೈತರು ಹೇಳಬೇಕೇ ಹೊರತು, ಸೋಮಶೇಖರ ಹೇಳುವುದಲ್ಲ’ ಎಂದು ಪ್ರತಿಕ್ರಿಯಿಸಿದರು.

‘ನೆರೆ ಸಂತ್ರಸ್ತರಿಗೆ ಪರಿಹಾರ ಕೊಟ್ಟಿಲ್ಲವಲ್ಲಾ, ಹಣವನ್ನೆಲ್ಲ ಏನು ಮಾಡಿದ್ದೀರಿ ಎಂದು ಮುಖ್ಯಮಂತ್ರಿಯನ್ನು ಕೇಳುತ್ತೇವೆ’ ಎಂದರು.

ಓದಿ: 

‘ಅಧಿವೇಶನ ವೇಳೆ ಪ್ರತಿಭಟನೆ ಸಹಜ’ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ, ‘ಆ ರೀತಿ ಲಘುವಾಗಿ ಮಾತನಾಡಬಾರದು. ದೆಹಲಿಯಲ್ಲಿ ನಡೆದ ರೈತರ ಹೋರಾಟ ರಾಜಕೀಯ ಪ್ರೇರಿತ ಎಂದು ಬೊಮ್ಮಾಯಿ ಹೇಳಿದ್ದರು. ಮತ್ತೇಕೆ ಮೂರು ಕಾಯ್ದೆಗಳನ್ನು ಕೇಂದ್ರ ಸರ್ಕಾರದವರು ವಾಪಸ್ ತೆಗೆದುಕೊಂಡರು’ ಎಂದು ಪ್ರಶ್ನಿಸಿದರು.



Read more from source