Karnataka news paper

ಉತ್ತರ ಕನ್ನಡದಲ್ಲಿ ಇತಿಹಾಸ ಸೃಷ್ಟಿಸುತ್ತಾ ಬಿಜೆಪಿ..? ಡಿಸೆಂಬರ್ 14ರತ್ತ ಎಲ್ಲರ ಚಿತ್ತ..!


ಹೈಲೈಟ್ಸ್‌:

  • ಸದಾ ಆಡಳಿತ ಪಕ್ಷದ ಅಭ್ಯರ್ಥಿಯೇ ಗೆಲುವು
  • ಮೂರು ಅವಧಿ ‘ಕೈ’ವಶದಲ್ಲಿದ್ದ ಕ್ಷೇತ್ರ
  • ಸೋಲು, ಗೆಲುವಿನ ಲೆಕ್ಕಾಚಾರ ಶುರು

ಪ್ರಮೋದ ಹರಿಕಾಂತ
ಕಾರವಾರ (ಉತ್ತರ ಕನ್ನಡ):
ತೀವ್ರ ಜಿದ್ದಾ ಜಿದ್ದಿಯೊಂದಿಗೆ ನಡೆದಿರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಈಗ ಸೋಲು, ಗೆಲುವಿನ ಲೆಕ್ಕಾಚಾರ ಶುರುವಾಗಿದ್ದು, ಈ ಬಾರಿಯ ಫಲಿತಾಂಶ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಲಿದೆಯಾ ಎನ್ನುವ ಕುತೂಹಲ ಗರಿಗೆದರಿದೆ.

ಕಳೆದ ಮೂರು ಅವಧಿಯಲ್ಲಿ ಸತತ ಗೆಲುವು ಸಾಧಿಸಿ ತನ್ನದೇ ಸಾಮ್ರಾಜ್ಯ ಸ್ಥಾಪಿಸಿಕೊಂಡಿದ್ದ ಕಾಂಗ್ರೆಸ್‌ ಕೈ ಮುರಿಯಲು ಬಿಜೆಪಿ ಈ ಬಾರಿ ಪಣ ತೊಟ್ಟಿತ್ತು. ಪರಿಷತ್‌ ಕ್ಷೇತ್ರದ ಮೇಲೆ ಯಾರ ‘ಹಸ್ತ’ಕ್ಷೇಪವೂ ಆಗದಂತೆ ನೋಡಿಕೊಂಡಿದ್ದ ಕಾಂಗ್ರೆಸ್‌ ಆರಂಭದಲ್ಲಿಯೇ ಗೊಂದಲ ಸೃಷ್ಟಿಸಿಕೊಂಡು ಅಖಾಡಕ್ಕೆ ಸಜ್ಜಾಗಿತ್ತು. ಬಲಿಷ್ಠ ಬಿಜೆಪಿಗೆ ಎದುರಾಗಿ ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರ ತೋಳ್ಬಲದಿಂದ ಅಖಾಡ ರಂಗೇರಿದ್ದಂತೂ ನಿಜ. ಇವರ ಮಧ್ಯೆ ತಾವೇನು ಕಡಿಮೆ ಇಲ್ಲ ಎಂದು ಮೂವರು ಪಕ್ಷೇತರರು ತೊಡೆ ತಟ್ಟಿ ಚುನಾವಣೆ ಎದುರಿಸಿದ್ದಾರೆ.

ಪರಿಷತ್‌ ಚುನಾವಣೆ ಪ್ರಚಾರ ಏಕೆ ಮಾಡಲಿಲ್ಲ? ಸ್ಪಷ್ಟನೆ ನೀಡಿದ ಅನಂತ್‌ ಕುಮಾರ್‌ ಹೆಗಡೆ
ತಂತ್ರಗಾರಿಕೆ, ಆಣೆ ಪ್ರಮಾಣ, ಕೊಡು ಕೊಳ್ಳುವಿಕೆ ಎಲ್ಲವೂ ಮುಗಿದು ಮತದಾರರು ಬರೆದ ಭವಿಷ್ಯ ಮತ ಪೆಟ್ಟಿಗೆ ಸೇರಿ ಆಗಿದೆ. ಡಿಸೆಂಬರ್ 14ಕ್ಕೆ ಎಲ್ಲರ ಜಾತಕ ಹೊರ ಬೀಳಲಿದೆ. ಅಲ್ಲಿಯವರೆಗೆ ಮತದಾನದ ಮೂಡ್‌ ಆಧಾರದ ಮೇಲೆ ಸೋಲು, ಗೆಲುವಿನ ಲೆಕ್ಕಾಚಾರ ನಡೆದಿದೆ. ಅದರಲ್ಲಿ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ನಡೆದಿರುವುದು ಸ್ಪಷ್ಟವಾಗಿದೆ. ಫಲಿತಾಂಶ ಯಾರ ಪರ ಆದರೂ ಅದು ಜಿಲ್ಲೆಯ ಮಟ್ಟಿಗೆ ಇತಿಹಾಸ ಆಗಲಿದೆ. ಇನ್ನೊಂದೆಡೆ ಜಿಲ್ಲೆಯ ಇಷ್ಟು ವರ್ಷಗಳ ಇತಿಹಾಸದಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಯೇ ಗೆದ್ದಿದ್ದಾರೆ. ಬಿಜೆಪಿಗೆ ಇದೊಂದು ನಿರೀಕ್ಷೆಯ ಅಂಶ.

ಬಿಜೆಪಿ ಖಾತೆ ತೆರೆಯುತ್ತಾ?

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನು ಗೆಲ್ಲಿಸಿಕೊಂಡಿದ್ದ ಬಿಜೆಪಿಯು ಈ ಚುನಾವಣೆಯಲ್ಲಿ ಮತದಾರರು ಕಣ್ತಪ್ಪಿಯೂ ಆಚೀಚೆ ಹೋಗದಂತೆ ನೋಡಿಕೊಂಡಿದೆ. ಒಬ್ಬ ಮತದಾರನ ಹಿಂದೆ ನಾಲ್ವರು ಕಾರ್ಯಕರ್ತರು ಇದ್ದರು. ಅಲ್ಲದೆ, ಎಲ್ಲೆಡೆ ತಮ್ಮ ಬೆಂಬಲಿತರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಆಣೆ, ಪ್ರಮಾಣವೂ ಮಾಡಿಸಿದೆ. ದೇವರ ಮೊರೆ ಹೋಗಿರುವ ವಿಚಾರವನ್ನು ಬಿಜೆಪಿಗರೇ ಈಗ ಬಾಯಿ ಬಿಟ್ಟಿದ್ದರಿಂದ ಈ ವಿಷಯ ಗುಟ್ಟಾಗಿ ಉಳಿದಿಲ್ಲ.

ಈ ಎಲ್ಲ ತಂತ್ರಗಾರಿಕೆ ಬಿಜೆಪಿಗೆ ಉಪಯೋಗಕ್ಕೆ ಬಂದಿದೆ. ಕಾಂಗ್ರೆಸ್‌ನ ಪ್ರಭಾವಿ ಮುಖಂಡರು ಇರುವಲ್ಲಿ ಮಾತ್ರ ಸವಾಲಾಗಿದ್ದು ಬಿಟ್ಟರೆ ಬಹುತೇಕ ಕಡೆ ಬಿಜೆಪಿಯ ಮೈಂಡ್‌ ಗೇಮ್‌ ಮತ್ತು ಫೀಲ್ಡ್‌ ಗೇಮ್‌ ವರ್ಕ್ ಆಗಿದೆ ಎಂದೇ ಹೇಳಲಾಗುತ್ತಿದೆ. ಹಾಗಾಗಿ ಕಮಲ ಗಣ ಅತ್ಯುತ್ಸಾಹದಲ್ಲಿದೆ. ಬಿಜೆಪಿ ಅಂದುಕೊಂಡಂತೆಯೇ ನಡೆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿಯಾಗಲಿದೆ. ಮೊದಲ ಬಾರಿಗೆ ಜಿಲ್ಲೆಯ ಪರಿಷತ್‌ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಅಲ್ಲದೆ, ಕರಾವಳಿ ಮೀನುಗಾರ ಸಮುದಾಯದ ಮೊದಲ ವ್ಯಕ್ತಿ ಗಣಪತಿ ಉಳ್ವೇಕರ ವಿಧಾನಸೌಧದ ಮೆಟ್ಟಿಲೇರಲಿದ್ದಾರೆ.

ಬಿಜೆಪಿಯವರಿಗೆ ಬೌದ್ಧಿಕ ದಾರಿದ್ರ್ಯ ವಕ್ಕರಿಸಿದೆ, ವೋಟಿಗಾಗಿ ಶನೇಶ್ವರನ ಮೇಲೆ ಆಣೆ ಮಾಡಿಸ್ತಿದ್ದಾರೆ: ರಮೇಶ್ ಕುಮಾರ್
ಕಾಂಗ್ರೆಸ್‌ ನೆಲೆ ಉಳಿಯುತ್ತಾ?

ಕಳೆದ ಮೂರು ಅವಧಿಯಲ್ಲಿ ಕಾಂಗ್ರೆಸ್‌ ಗೆದ್ದಿದೆ. ಈ ಬಾರಿ ಕೈ ಟಿಕೆಟ್‌ ಪಡೆಯುವವರೇ ಇರಲಿಲ್ಲ. ಸ್ಪರ್ಧೆಯೊಡ್ಡಲು ಪಕ್ಷದ ಕೈ ಹಿಡಿದ ಭೀಮಣ್ಣ ನಾಯ್ಕ ಕೆಲವು ಕಡೆಗಳಲ್ಲಿ ಕಾಂಗ್ರೆಸ್‌ ವೋಟ್‌ ಹೊರತಾಗಿ ಮತ ಸೆಳೆಯಲು ಯಶಸ್ವಿಯಾಗಿದ್ದಾರೆ. ಬಿಜೆಪಿ ಶಾಸಕರೇ ಇರುವ ಕೆಲ ತಾಲೂಕುಗಳಲ್ಲಿ ಬಿಜೆಪಿಗೆ ಸಮನಾಗಿ ಕಾಂಗ್ರೆಸ್‌ ಪೈಪೋಟಿ ಕೊಟ್ಟಿರುವ ಸೂಚನೆ ಇದೆ. ಮತ ಪಡೆಯುವುದಕ್ಕಾಗಿ ಕೊಡು ಕೊಳ್ಳುವಿಕೆಯಲ್ಲಿ ಕಾಂಗ್ರೆಸ್‌ ಕೂಡ ಹಿಂದೆ ಬಿದ್ದಿಲ್ಲ. ಕೈ ನಾಯಕರೂ ಮತದಾರರ ಮೇಲೆ ದೇವರ ಹೆಸರು ಪ್ರಯೋಗಿಸಿದ್ದಾರೆ.

ಈ ಚುನಾವಣೆಯಲ್ಲಿ ಎಲ್ಲರಿಗೂ ಮತ ಹಾಕುವ ಅವಕಾಶ ಇದ್ದುದರಿಂದ ಕಾಂಗ್ರೆಸ್‌ ಕೂಡ ವೋಟ್‌ ಪಡೆದುಕೊಂಡಿದೆ. ಆದರೆ, ಅದರಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳು ಎಷ್ಟು ಎನ್ನುವುದು ಕೈ ಪಾಳಯದಲ್ಲಿರುವ ಚಿಂತೆ. ಕಣದಲ್ಲಿ ಇಬ್ಬರೇ ಪ್ರಬಲ ಅಭ್ಯರ್ಥಿಗಳು ಇರುವುದರಿಂದ ಒಬ್ಬರಿಗೆ ಎರಡನೇ ಪ್ರಾಶಸ್ತ್ಯದ ಮತ ಬಿದ್ದರೆ, ಮೊದಲ ಪ್ರಾಶಸ್ತ್ಯದ ಮತಗಳು ಎದುರಾಳಿಗೇ ಹೋಗಿರುತ್ತದೆ. ಬಿಜೆಪಿ ಶಾಸಕರೇ ಹೆಚ್ಚಾಗಿರುವ ಅಖಾಡದಲ್ಲಿ ಕಾಂಗ್ರೆಸ್‌ ಗೆದ್ದರೆ ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಆಡಳಿತ ಪಕ್ಷಕ್ಕೆ ಇದಕ್ಕಿಂತ ಕೆಟ್ಟ ಅವಮಾನ ಬೇರೊಂದಿಲ್ಲ.

‘ಪ್ರಜ್ಞಾವಂತರ ವೇದಿಕೆ’ಗೆ ಕುಬೇರರ ಎಂಟ್ರಿ; ವಿಧಾನ ಪರಿಷತ್‌ನ ಎಲ್ಲ ಅಭ್ಯರ್ಥಿಗಳ ಒಟ್ಟು ಆಸ್ತಿ ₹3,123 ಕೋಟಿ!



Read more