Karnataka news paper

ಕೊಡಗಿನಲ್ಲಿ ಭರ್ಜರಿ ಬಿಯರ್‌ ಕಿಕ್‌; ಅಬಕಾರಿ ಇಲಾಖೆಯ ಟಾರ್ಗೆಟ್‌ ರೀಚ್‌!


ಹೈಲೈಟ್ಸ್‌:

  • ಕೊಡಗಿನಲ್ಲಿ ಕುಂಟುತ್ತಾ ಸಾಗುತ್ತಿದ್ದ ಬಿಯರ್‌ಗೆ ಈಗ ಸಖತ್‌ ಬೇಡಿಕೆ ಸೃಷ್ಟಿಯಾಗಿದೆ
  • 2021ರಲ್ಲಿ ಜಿಲ್ಲೆಯಾದ್ಯಂತ ಮತ್ತೆ ಭರ್ಜರಿ ಬಿಯರ್‌ ಮಾರಾಟವಾಗಿದ್ದು, ಅಬಕಾರಿ ಇಲಾಖೆ ನಿಗದಿತ ಗುರಿಯತ್ತ ಜಿಗಿದಿದೆ
  • ಕಳೆದ ಆರು ತಿಂಗಳ ಅಂಕಿ ಅಂಶ ಪ್ರಕಾರ ಜಿಲ್ಲೆಯಲ್ಲಿ 38,575 ಕೇಸ್‌ ಬಿಯರ್‌ ಮಾರಾಟ ಕಂಡಿದೆ

ಜಗದೀಶ್‌ ಜೋಡುಬೀಟಿ
ಗೋಣಿಕೊಪ್ಪ:
ಕೊರೊನಾ ಕಾರಣದಿಂದ ಕೊಡಗಿನಲ್ಲಿ ಕುಂಟುತ್ತಾ ಸಾಗುತ್ತಿದ್ದ ಬಿಯರ್‌ಗೆ ಈಗ ಸಖತ್‌ ಬೇಡಿಕೆ ಸೃಷ್ಟಿಯಾಗಿದೆ. ಈ ಮೂಲಕ ಕೊರೊನಾ ಸಂದರ್ಭದಲ್ಲಿ ಹುಟ್ಟಿಕೊಂಡ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

2021ರಲ್ಲಿ ಜಿಲ್ಲೆಯಾದ್ಯಂತ ಮತ್ತೆ ಭರ್ಜರಿ ಬಿಯರ್‌ ಮಾರಾಟವಾಗಿದ್ದು, ಅಬಕಾರಿ ಇಲಾಖೆ ನಿಗದಿತ ಗುರಿಯತ್ತ ಜಿಗಿದಿದೆ. ಕಳೆದ ಆರು ತಿಂಗಳ ಅಂಕಿ ಅಂಶ ಪ್ರಕಾರ ಜಿಲ್ಲೆಯಲ್ಲಿ 38,575 ಕೇಸ್‌ ಬಿಯರ್‌ ಮಾರಾಟ ಕಂಡಿದೆ. ಉಳಿದಂತೆ ಇತರ ಮದ್ಯಗಳು ಸೇರಿ 88,242 ಕೇಸ್‌ಗಳು ಮಾರಾಟಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆರು ತಿಂಗಳಲ್ಲಿ 6 ತಿಂಗಳ ಅವಧಿಯಲ್ಲಿ 18,490 ಬಿಯರ್‌ ಬಾಕ್ಸ್‌ ಹೆಚ್ಚುವರಿಯಾಗಿ ಮಾರಾಟವಾಗಿದೆ.

ಗಡಿ ಭಾಗದಲ್ಲಿ ಮಾರಾಟ ಕುಸಿತ
ವಿರಾಜಪೇಟೆ ತಾಲೂಕಿನಲ್ಲಿ ಮಾತ್ರ ಸುಮಾರು 2 ಸಾವಿರ ಲೀಟರ್‌ ಮದ್ಯ ಮಾರಾಟ ಕ್ಷೀಣಿಸಿದೆ. ಕುಟ್ಟ ಮತ್ತು ಮಾಕುಟ್ಟ ಗಡಿಭಾಗಗಳಲ್ಲಿ ಒಮಿಕ್ರಾನ್‌ ಮತ್ತು ಕೊರೊನಾದಿಂದ ಬಿಗಿ ಭದ್ರತೆ ಅಳವಡಿಸಿದ್ದೇ ಇದಕ್ಕೆ ಕಾರಣ. ಇದರಿಂದ ಕೇರಳ ರಾಜ್ಯದ ಮದ್ಯಪ್ರಿಯರು ಕೊಡಗಿನ ಕುಟ್ಟ, ವಿರಾಜಪೇಟೆ, ಕರಿಕೆ ಭಾಗಗಳಿಗೆ ಬಾರದೇ ಇರುವುದರಿಂದ ಮದ್ಯದ ವ್ಯಾಪಾರ ಒಂದಷ್ಟು ಕ್ಷೀಣಿಸಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಎಷ್ಟೆಷ್ಟು ಬಿಯರ್‌ ಮಾರಾಟ?
ವಿರಾಜಪೇಟೆ ತಾಲೂಕಿನಲ್ಲಿ 2020ರ ಏಪ್ರಿಲ್‌ ನಿಂದ ಡಿಸೆಂಬರ್‌ವರೆಗೆ ಬಿಯರ್‌ 67,302 ಬಾಕ್ಸ್‌ ಮಾರಾಟಗೊಂಡಿತು. 2021 ಏಪ್ರಿಲ್‌ನಿಂದ ಡಿಸೆಂಬರ್‌ ವರೆಗೆ 72659 ಬಾಕ್ಸ್‌ ಮಾರಾಟ ಕಂಡಿದೆ. ಸೋಮವಾರಪೇಟೆ ತಾಲೂಕಿನಲ್ಲಿ 2020ರ ಏಪ್ರಿಲ್‌ ನಿಂದ ಡಿಸೆಂಬರ್‌ ವರೆಗೆ ಬಿಯರ್‌ 76141 ಬಾಕ್ಸ್‌ ಮಾರಾಟ ಕಂಡಿತು. 2021 ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 82910 ಬಾಕ್ಸ್‌ಗಳು ಬಿಕರಿಯಾಗಿವೆ.

ಮಡಿಕೇರಿ ತಾಲೂಕಿನಲ್ಲಿ 2020ರ ಏಪ್ರಿಲ್‌ನಿಂದ ಡಿಸೆಂಬರ್‌ ವರೆಗೆ ಬಿಯರ್‌ 5,2847 ಬಾಕ್ಸ್‌ಗಳು ಮಾರಾಟ ಕಂಡಿತು. 2021 ಏಪ್ರಿಲ್‌ ನಿಂದ ಡಿಸೆಂಬರ್‌ ವರೆಗೆ 59,211 ಬಾಕ್ಸ್‌ಗಳು ಮಾರಾಟ ಕಂಡಿದೆ. ಒಟ್ಟು ಜಿಲ್ಲೆಯ ಮೂರು ತಾಲೂಕಿನಲ್ಲಿ ಏಪ್ರಿಲ್‌ 2021ರಿಂದ ಡಿಸೆಂಬರ್‌ವರೆಗಿನ 6 ತಿಂಗಳ ಅವಧಿಯಲ್ಲಿ 18,490 ಬಾಕ್ಸ್‌ ಹೆಚ್ಚುವರಿಯಾಗಿ ಮಾರಾಟ ಕಂಡು ಇಲಾಖೆ ಆದಾಯ ಚೇತರಿಸಿಕೊಂಡಿದೆ.



Read more