Karnataka news paper

‘ಕ್ಯಾಪ್ಟನ್ಸಿ ಇಲ್ಲದ ಕೊಹ್ಲಿ ಅಪಾಯಕಾರಿ ಬ್ಯಾಟ್ಸ್‌ಮನ್‌’ ಎಂದ ಗಂಭೀರ್‌!


ಹೈಲೈಟ್ಸ್‌:

  • ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಒಡಿಐ ಸರಣಿಯಲ್ಲಿ ಭಾರತ ತಂಡವನ್ನು ರೋಹಿತ್‌ ಮುನ್ನಡೆಸಲಿದ್ದಾರೆ.
  • ಇನ್ಮುಂದೆ ಭಾರತ ಟೆಸ್ಟ್‌ ತಂಡದ ನಾಯಕನಾಗಿ ಮಾತ್ರವೇ ವಿರಾಟ್‌ ಕೊಹ್ಲಿ ಮುಂದುವರಿಯಲಿದ್ದಾರೆ.
  • ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಮಹತ್ವದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ ಗೌತಮ್ ಗಂಭೀರ್‌.

ಬೆಂಗಳೂರು: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಇತ್ತೀಚೆಗಷ್ಟೇ ರೋಹಿತ್‌ ಶರ್ಮಾ ಅವರನ್ನು ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್‌ ಆಗಿ ನೇಮಕ ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಇದರೊಂದಿಗೆ ಭಾರತ ಟೆಸ್ಟ್‌ ತಂಡದಲ್ಲಿ ಮಾತ್ರವೇ ವಿರಾಟ್‌ ಕೊಹ್ಲಿ ನಾಯಕನಾಗಿ ಮುಂದುವರಿಯಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಾಯಕತ್ವ ಇಲ್ಲದ ವಿರಾಟ್‌ ಕೊಹ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ ಆಗಿ ಬೆಳೆಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಕಳೆದ ಕೆಲ ವರ್ಷಗಳಿಂದ ವಿರಾಟ್‌ ಕೊಹ್ಲಿ ಇನ್ನಿಲ್ಲದಂತೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ವರ್ಷಕ್ಕೆ ಕನಿಷ್ಠ 4-5 ಅಂತಾರಾಷ್ಟ್ರೀಯ ಶತಕಗಳನ್ನಾದರೂ ಬಾರಿಸುತ್ತಿದ್ದ ಕಿಂಗ್‌ ಕೊಹ್ಲಿ, 2019ರ ಬಳಿಕ ಒಂದು ಶತಕವನ್ನೂ ಬಾರಿಸಿಲ್ಲ ಎಂಬುದು ಅಚ್ಚರಿಯ ಸಂಗತಿ. ಅವರ ವೃತ್ತಿಬದುಕಿನ ದಾಖಲೆಯ 71ನೇ ಅಂತಾರಾಷ್ಟ್ರೀಯ ಶತಕ ಸಲುವಾಗಿ ಅಭಿಮಾನಿಗಳು ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ.

ವಿರುಷ್ಕಾ ಬಾಡಿಗಾರ್ಡ್‌ ‘ಸೋನು’ಗೆ ಕೋಟಿ ಗಟ್ಟಲೆ ವೇತನ!

“ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ನಿಭಾಯಿಸುತ್ತಿರುವ ಪಾತ್ರವನ್ನು ಈಗ ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ನಿಭಾಯಿಸುವ ಅಗತ್ಯವಿದೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಾಯಕ ಅಲ್ಲ ಎಂಬುದನ್ನು ಬಿಟ್ಟರೆ ಉಳಿದೆಲ್ಲವೂ ಕೊಹ್ಲಿ ಪರವಾಗಿದೆ. ಈಗ ನಾಯಕತ್ವ ಇಲ್ಲದೆ ಒತ್ತಡ ಮುಕ್ತವಾಗಿ ಬ್ಯಾಟಿಂಗ್‌ ಮಾಡಬಲ್ಲರು. ಇದು ಅವರನ್ನು ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ ಆಗಿ ಮಾಡಬಲ್ಲದು,” ಎಂದು ಸ್ಟಾರ್‌ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ ಹೆಮ್ಮೆ ತರುವ ಆಟವಾಡಲಿದ್ದಾರೆ: ಗಂಭೀರ್‌
ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚಿನ ಬ್ಯಾಟಿಂಗ್‌ ಸರಾಸರಿ ಹೊಂದಿರುವ ಪ್ರಚಂಡ ಬ್ಯಾಟ್ಸ್‌ಮನ್‌ 33 ವರ್ಷದ ವಿರಾಟ್‌ ಕೊಹ್ಲಿ ಮುಂದಿನ ದಿನಗಳಲ್ಲಿ ಎಲ್ಲರೂ ಹೆಮ್ಮೆಪಡುವ ರೀತಿಯಲ್ಲಿ ಬ್ಯಾಟ್‌ ಮಾಡಲಿದ್ದಾರೆ ಎಂದು ಗಂಭೀರ್‌ ವಿಶ್ವಾಸ ಹೊರಹಾಕಿದ್ದಾರೆ.

“ಇಡೀ ಭಾರತವೇ ಹೆಮ್ಮೆ ಪಡುವ ರೀತಿಯಲ್ಲಿ ಕೊಹ್ಲಿ ಬ್ಯಾಟ್‌ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಅವರು ಸ್ಥಿರವಾಗಿ ರನ್‌ ಗಳಿಸಲಿದ್ದಾರೆ. ತಂಡದ ಯಶಸ್ಸಿಗೆ ರೋಹಿತ್‌ ಮತ್ತು ಕೊಹ್ಲಿ ಇಬ್ಬರೂ ಅದ್ಭುತ ಸೇವೆ ಸಲ್ಲಿಸಲಿದ್ದಾರೆ. ಇಬ್ಬರ ದೃಷ್ಟಿಕೋನವೂ ತಂಡದ ಯಶಸ್ಸಿಗೆ ಅಗತ್ಯವಿದೆ,” ಎಂದು ಗಂಭೀರ್‌ ವಿವರಿಸಿದ್ದಾರೆ.

‘ವಿರಾಟ್‌ ಇಲ್ಲದೇ ಇದ್ದರೂ ರೋಹಿತ್‌ ಏಷ್ಯಾ ಕಪ್‌ ಗೆದ್ದುಕೊಟ್ಟಿದ್ದಾರೆ’ ಎಂದ ಗಂಗೂಲಿ!

“ವಿರಾಟ್‌ ಕೊಹ್ಲಿ ಅವರ ಶ್ರೇಷ್ಠ ರೂಪ ಮುಂದಿನ ದಿನಗಳಲ್ಲಿ ಕಾಣಲು ಸಿಗಲಿದೆ. ರೆಡ್‌ ಬಾಲ್‌ ಮತ್ತು ವೈಟ್‌ ಬಾಲ್‌ ಎಲ್ಲದರಲ್ಲೂ ಅಬ್ಬರಿಸಲಿದ್ದಾರೆ. ಸುದೀರ್ಘ ಅವಧಿ ಕಾಲ ಕೊಹ್ಲಿ ಕ್ರಿಕೆಟ್‌ ಮೇಲಿನ ಪ್ರೀತಿ ಮತ್ತು ರನ್‌ ಗಳಿಸುವ ಅಪಾರ ತುಡಿತ ಪ್ರದರ್ಶಿಸುತ್ತಾ ಬಂದಿದ್ದಾರೆ. ನಾಯಕತ್ವ ಇರಲಿ ಅಥವಾ ಇಲ್ಲದೇ ಇರಲಿ ಕೊಹ್ಲಿ ಅವರಲ್ಲಿನ ಉತ್ಸಾಹ ಮಾತ್ರ ಅದೇ ರೀತಿ ಮುಂದುವರಿಯಲಿದೆ,” ಎಂದಿದ್ದಾರೆ.

ಭಾರತ ತಂಡ ಡಿ.16ರಂದು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಡಿ.26ರಂದು ಸೆಂಚೂರಿಯನ್‌ನಲ್ಲಿ ಮೂರು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಶುರುವಾಗಲಿದೆ. ಈ ಸಲುವಾಗಿ ಬಿಸಿಸಿಐ ಕೆಲ ದಿನಗಳ ಹಿಂದಷ್ಟೇ ಕೊಹ್ಲಿ ಸಾರಥ್ಯದ 18 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟ ಮಾಡಿದೆ. ಜನವರಿಯಲ್ಲಿ ಅಷ್ಟೇ ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿ ನಡೆಯಲಿದ್ದು, ಈ ಸರಣಿಗೆ ರೋಹಿತ್‌ ಸಾರಥ್ಯದ ಭಾರತ ತಂಡ ಪ್ರಕಟ ಮಾಡುವುದು ಬಾಕಿ ಇದೆ.



Read more