ಹೈಲೈಟ್ಸ್:
- ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಓಡಿಐ ಸರಣಿ.
- ಕೆ.ಎಲ್ ರಾಹುಲ್ ಜೊತೆ ಶಿಖರ್ ಧವನ್ ಇನಿಂಗ್ಸ್ ಆರಂಭಿಸಬೇಕೆಂದ ಚೋಪ್ರಾ.
- ಜನವರಿ 19 ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಓಡಿಐ ಸರಣಿ.
ದಕ್ಷಿಣ ಆಫ್ರಿಕಾ ವಿರುದ್ದ ಮೂರು ಪಂದ್ಯಗಳ ಓಡಿಐ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ ಬಿಸಿಸಿಐ, ಗಾಯಾಳು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್ ರಾಹುಲ್‌ಗೆ ನಾಯಕತ್ವವನ್ನು ನೀಡಲಾಗಿದ್ದು, ವೇಗಿ ಜಸ್‌ಪ್ರಿತ್ ಬುಮ್ರಾ ಅವರಿಗೆ ಉಪ ನಾಯಕತ್ವದ ಜವಾಬ್ದಾರಿ ನಿಡಿದೆ. ಜನವರಿ 19 ರಿಂದ ಓಡಿಐ ಸರಣಿ ಶುರುವಾಗಲಿದೆ.
ಇತ್ತೀಚೆಗೆ ಮುಕ್ತಾಯವಾಗಿದ್ದ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದ ಹೊರತಾಗಿಯೂ ಶಿಖರ್ ಧವನ್‌ಗೆ 18 ಸದಸ್ಯರ ಓಡಿಐ ಸರಣಿಯ ಭಾರತ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಫಾರ್ಮ್‌ನಲ್ಲಿ ಇಲ್ಲದ ಹೊರತಾಗಿಯೂ ಶಿಖರ್ ಧವನ್‌ಗೆ ಇನಿಂಗ್ಸ್ ಆರಂಭಿಸಲು ಅವಕಾಶ ನೀಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.
ರೋಹಿತ್ ಔಟ್, ದ. ಆಫ್ರಿಕಾ ವಿರುದ್ಧದ ಒಡಿಐ ಸರಣಿಗೆ ರಾಹುಲ್ ನಾಯಕ!
ಇಲ್ಲಿಯವರೆಗೂ ಭಾರತ ತಂಡದ ಪರ 145 ಓಡಿಐ ಪಂದ್ಯಗಳಾಡಿರುವ ಶಿಖರ್ ಧವನ್ 17 ಶತಕ ಹಾಗೂ 33 ಅರ್ಧಶತಕಗಳೊಂದಿಗೆ 6500 ರನ್ ಗಳಿಸಿದ್ದಾರೆ. ಇದನ್ನು ಪರಿಗಣಿಸಿದ ಆಕಾಶ್ ಚೋಪ್ರಾ ನಾಯಕ ಕೆ.ಎಲ್ ರಾಹುಲ್ ಜೊತೆ ಶಿಖರ್ ಧವನ್ ಓಡಿಐ ಸರಣಿಯಲ್ಲಿ ಇನಿಂಗ್ಸ್ ಆರಂಭಿಸಬೇಕೆಂದು ಸಲಹೆ ನೀಡಿದ್ದಾರೆ.
“ಶಿಖರ್ ಧವನ್ ತಂಡದಲ್ಲಿ ಇರಬೇಕೆಂದು ನಾನು ಹೇಳುತ್ತಲೇ ಇದ್ದೇನೆ. ನಿರೀಕ್ಷೆಯಂತೆ ಅವರು ತಂಡದಲ್ಲಿ ಇರುವುದರಿಂದ ನನಗೆ ಸಂತೋಷವಾಗುತ್ತಿದೆ. ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಹಾಗೂ ಶಿಖರ್ ಧವನ್ ತಂಡದಲ್ಲಿದ್ದಿದ್ದರೆ ಯಾರು ಇನಿಂಗ್ಸ್ ಆರಂಭಿಸಬೇಕೆಂಬ ಬಗ್ಗೆ ತಲೆ ನೋವು ಇರುತ್ತಿತ್ತು. ಆದರೆ, ಇದೀಗ ರೋಹಿತ್ ಇಲ್ಲ, ಹಾಗಾಗಿ ಧವನ್ ಇನಿಂಗ್ಸ್ ಆರಂಭಿಸಬೇಕೆಂದು,” ಎಂದು ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ರಾಹುಲ್ ಮೇಲೆ ನಮಗೆ ವಿಶ್ವಾಸವಿದೆ’ ಕನ್ನಡಿಗನ ಬಗ್ಗೆ ಸೆಲೆಕ್ಟರ್ ಮೆಚ್ಚುಗೆ!
“ಅವರು(ಧವನ್) ಇದೀಗ ತಂಡದಲ್ಲಿದ್ದಾರೆ. ನನ್ನ ಅಭಿಪ್ರಾಯದಂತೆ ಅವರೇ ಇನಿಂಗ್ಸ್ ಆರಂಭಿಸಬೇಕು. ಕೆ.ಎಲ್ ರಾಹುಲ್ ಜೊತೆ ಶಿಖರ್ ಧವನ್ ಇನಿಂಗ್ಸ್ ಆರಂಭಿಸುವುದನ್ನು ನೀವು ನೋಡಲಿದ್ದೀರಿ. ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇದು ಟೆಸ್ಟ್ ಅಲ್ಲ, ಓಡಿಐ ಕ್ರಿಕೆಟ್ ಇದನ್ನು ನೀವು ಅರಿತುಕೊಳ್ಳಬೇಕು,” ಎಂದು ಚೋಪ್ರಾ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಓಡಿಐ ಸರಣಿಗೆ ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ಯುಜ್ವೇಂದ್ರ ಚಹಲ್, ರವಿಚಂದ್ರನ್ ಅಶ್ವಿನ್, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ (ಉಪನಾಯಕ), ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಪ್ರಸಿಧ್ ಕೃಷ್ಣ, ಶಾರ್ದುಲ್ ಠಾಕೂರ್, ಮೊಹಮ್ಮದ್ ಸಿರಾಜ್.