ಹೈಲೈಟ್ಸ್:
- ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ನಾಯಕರ ಬಂಧನ
- ಪ್ರತಿಭಟನೆ ಆಯೋಜಿಸಿದ್ದ ಗುಪ್ಕರ್ ಮೈತ್ರಿಕೂಟದ ನಾಯಕರು
- ಸೀಮಾ ನಿರ್ಣಯ ಆಯೋಗದ ಶಿಫಾರಸುಗಳಿಗೆ ನಾಯಕರ ವಿರೋಧ
- ಪೊಲೀಸರು ಹಾಗೂ ಆಡಳಿತದ ವಿರುದ್ಧ ಮೈತ್ರಿಕೂಟದ ಆರೋಪ
‘ಶುಭೋದಯ ಮತ್ತು 2022ಕ್ಕೆ ಸ್ವಾಗತ. ತಮ್ಮ ಮನೆಗಳ ಒಳಗೆ ಜನರನ್ನು ಬಂಧಿಸಿಡುವ ಅದೇ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜತೆ ಮತ್ತು ಸಹಜ ಪ್ರಜಾಸತ್ತಾತ್ಮಕ ಚಟುವಟಿಕೆಯ ಬಗ್ಗೆ ಇಷ್ಟು ಭಯ ಪಡುವ ಆಡಳಿತದ ಜತೆ ಹೊಸ ವರ್ಷ ಆಚರಣೆ’ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಮತ್ತು ಮಾಜಿ ಸಿಎಂ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
‘ಗುಪ್ಕರ್ ಗ್ಯಾಂಗ್’ಗೆ ವಿದೇಶಿ ಬೆಂಬಲದ ಬಯಕೆ: ಗೃಹ ಸಚಿವ ಅಮಿತ್ ಶಾ ಗಂಭೀರ ಆರೋಪ!
‘ಜೆಕೆ-ಪಿಎಜಿಡಿ ನಡೆಸುವ ಶಾಂತಿಯುತ ಪ್ರತಿಭಟನೆಯನ್ನು ಹಾಳುಗೆಡವಲು ನಮ್ಮ ಗೇಟ್‌ಗಳ ಹೊರಗೆ ಟ್ರಕ್‌ಗಳನ್ನು ಪಾರ್ಕ್ ಮಾಡಲಾಗಿದೆ. ಕೆಲವು ಸಂಗತಿಗಳು ಎಂದಿಗೂ ಬದಲಾಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.
‘ಕಾನೂನು ರಹಿತ ಪೊಲೀಸ್ ರಾಜ್ಯ ಇದು. ನನ್ನ ತಂದೆಯ ಮನೆಯಿಂದ ನನ್ನ ಸಹೋದರಿಯ ಮನೆಗೆ ಸಂಪರ್ಕಿಸುವ ಆಂತರಿಕ ದ್ವಾರವನ್ನು ಕೂಡ ಪೊಲೀಸರು ಲಾಕ್ ಮಾಡಿದ್ದಾರೆ. ಆದರೂ ನಮ್ಮ ನಾಯಕರು ಭಾರತವು ಅತಿ ದೊಡ್ಡ ಪ್ರಜಾಸತ್ತಾತ್ಮಕ ದೇಶ ಎಂದು ಜಗತ್ತಿಗೆ ಹೇಳುತ್ತಾರೆ’ ಎಂದು ಅವರು ಕಿಡಿಕಾರಿದ್ದಾರೆ.
ಗುಪ್ಕರ್ ಮೈತ್ರಿಕೂಟ ಚೀನಾ, ಪಾಕ್‌ನ ಗುಪ್ತಚರ ಸಂಸ್ಥೆ: ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಆರೋಪ
ಜಮ್ಮು ಮತ್ತು ಕಾಶ್ಮೀರ ಆಡಳಿತವು ಒಂದು ಶಾಂತಿಯುತ ಪ್ರತಿಭಟನೆಗೂ ಅವಕಾಶ ನೀಡದಷ್ಟು ಹೆದರಿದೆ. ಜನರು ತಮ್ಮ ಅಭಿಪ್ರಾಯಗಳನ್ನು ಜನರ ಮುಂದೆ ವ್ಯಕ್ತಪಡಿಸಲು ಅವಕಾಶವನ್ನೂ ನೀಡದಂತೆ ಪರಿಸ್ಥಿತಿ ಕೆಟ್ಟು ಹೋಗಿದೆ ಎಂದು ಒಕ್ಕೂಟದ ವಕ್ತಾರರಾಗಿರುವ ಸಿಪಿಐ (ಎಂ) ನಾಯಕ ಎಂ ವೈ ತರಿಗಮಿ ಆರೋಪಿಸಿದ್ದಾರೆ.
ತಮ್ಮನ್ನು ಕೂಡ ಗೃಹ ಬಂಧನದಲ್ಲಿ ಇರಿಸಲಾಗಿದ್ದು, ಮನೆಯ ಹೊರಗೆ ಟ್ರಕ್ ನಿಲ್ಲಿಸಲಾಗಿದೆ ಎಂದು ಮಾಜಿ ಸಿಎಂ ಮೆಹಬೂಬ ಮುಫ್ತಿ ಕೂಡ ಹೇಳಿದ್ದಾರೆ.
ಗುಪ್ಕರ್ ಮೈತ್ರಿಕೂಟವು ಶನಿವಾರ ಶ್ರೀನಗರದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿತ್ತು. ಜಮ್ಮು ವಿಭಾಗದಲ್ಲಿ ಆರು ಸೀಟುಗಳನ್ನು ಹೆಚ್ಚಿಸುವ ಹಾಗೂ ಕಾಶ್ಮೀರದಲ್ಲಿ ಒಂದು ಕ್ಷೇತ್ರವನ್ನು ಹೆಚ್ಚಿಸುವ ಸೀಮಾ ನಿರ್ಣಯ ಆಯೋಗದ ಶಿಫಾರಸುಗಳ ವಿರುದ್ಧ ಅದು ಪ್ರತಿಭಟನೆಗೆ ಮುಂದಾಗಿತ್ತು. ಈ ನಿರ್ಧಾರ ಜಾರಿಯಾದರೆ ಜಮ್ಮು ವಿಭಾಗದ ವಿಧಾನಸಭೆ ಸೀಟುಗಳು 43ಕ್ಕೆ ಹಾಗೂ ಕಾಶ್ಮೀರದ ಸೀಟುಗಳ ಸಂಖ್ಯೆ 47ಕ್ಕೆ ಏರಿಕೆಯಾಗಲಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಮಿತ್ರ ಪಕ್ಷಗಳನ್ನು ಹೊರತುಪಡಿಸಿ ಉಳಿದ ಆರು ರಾಜಕೀಯ ಪಕ್ಷಗಳು ಸೇರಿ ಮೈತ್ರಿಕೂಟ ರಚಿಸಿದ್ದು, ಫಾರೂಕ್ ಅಬ್ದುಲ್ಲಾ ಅವರ ‘ಗುಪ್ಕರ್ ರೆಸಿಡೆನ್ಸ್’ನಲ್ಲಿ ಕೇಂದ್ರ ಸರ್ಕಾರ ನಿಯಮಗಳ ವಿರುದ್ಧ ಘೋಷಣೆ ಮಾಡಿದ್ದವು. ಇದನ್ನು ‘ಗುಪ್ಕರ್ ಘೋಷಣೆ‘ ಎಂದು ಕರೆಯಲಾಗಿದೆ.