Karnataka news paper

ಬೆಂಗಳೂರಿನಲ್ಲಿ ಫೈನಾನ್ಶಿಯರ್‌ ಕೊಲೆಗೈದು ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ಶೀಟರ್‌ ಕಾಲಿಗೆ ಗುಂಡೇಟು..!


ಹೈಲೈಟ್ಸ್‌:

  • ವರ್ತೂರು ಪ್ರಕಾಶ್‌ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ
  • ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ
  • ಫೈನಾನ್ಶಿಯರ್‌ನನ್ನು ಅಪಹರಿಸಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರನ್ನು ಅಪಹರಿಸಿ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದು ಫೈನಾನ್ಶಿಯರ್‌ನನ್ನು ಅಪಹರಿಸಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮೋಸ್ಟ್‌ ವಾಂಟೆಡ್‌ ರೌಡಿ ಶೀಟರ್‌ ಕಾಲಿಗೆ ಗುಂಡು ಹಾರಿಸಿ ಇಂದಿರಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ವ್ಯಾಪ್ತಿಯ ರೌಡಿ ಶೀಟರ್‌ ಲೋಹಿತ್‌ ಅಲಿಯಾಸ್‌ ರೋಹಿತ್‌ (32) ಬಂಧಿತ. ಆರೋಪಿಯನ್ನು ಬಂಧಿಸಲು ಹೋಗಿ ಹಲ್ಲೆಗೊಳಗಾಗಿ ಗಾಯಗೊಂಡಿದ್ದ ಪೊಲೀಸ್‌ ಕಾನ್ಸ್‌ಟೆಬಲ್‌ ಸೈಯದ್‌ ಮೊಹಿನುಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲೋಹಿತ್‌ ಜುಲೈ 5 ರಂದು ತನ್ನ ಸಹಚರರ ಜತೆಗೆ ಸೇರಿ ಆಟೋ ಚಾಲಕ ಹಾಗೂ ಫೈನಾನ್ಶಿಯರ್‌ ಆಗಿದ್ದ ಇಂದಿರಾ ನಗರ ನಿವಾಸಿ ವಿಜಯ ಕುಮಾರ್‌ ಅವರನ್ನು ಅಪಹರಿಸಿ ತಮಿಳುನಾಡಿನ ಕೃಷ್ಣಗಿರಿ ಕೊಂಗನ ಪಲ್ಲಿ ರಸ್ತೆಯ ಅರಣ್ಯ ಪ್ರದೇಶದಲ್ಲಿ ಬಂಧನದಲ್ಲಿರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ವಿಜಯ್‌ ಕುಮಾರ್‌ ಹಣ ಕೊಡಲು ಒಪ್ಪದಿದ್ದಾಗ ಮಾರಕಾಸ್ತ್ರದಿಂದ ಹತ್ಯೆ ಮಾಡಿ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಇಂದಿರಾ ನಗರ ಠಾಣೆ ಪೊಲೀಸರು, ಪ್ರಕರಣದ 9 ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಪ್ರಮುಖ ಆರೋಪಿ ಲೋಹಿತ್‌ ತಲೆಮರೆಸಿಕೊಂಡಿದ್ದ. ಲೋಹಿತ್‌ ಬಂಧನಕ್ಕೆ ಹಲಸೂರು ಎಸಿಪಿ ನೇತೃತ್ವದಲ್ಲಿ 4 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಕೊನೆಗೂ ಪೊಲೀಸರು ಜೆಬಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಲೋಹಿತ್‌ ವಿರುದ್ಧ ನಾನಾ ಪೊಲೀಸ್‌ ಠಾಣೆಗಳಲ್ಲಿ 17 ಪ್ರಕರಣಗಳು ದಾಖಲಾಗಿವೆ ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದರು.

ಆರೋಪಿ ಸುಳಿವು ಸಿಕ್ಕಿದ್ದು ಹೇಗೆ?

ಲೋಹಿತ್‌ ಆಂಧ್ರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. ಆಂಧ್ರದ ವಿಕೋಟದಲ್ಲಿ ಇನ್ನೋವಾ ಕಾರೊಂದನ್ನು ಕದ್ದು, ಅದೇ ಕಾರಿನಲ್ಲಿ ಓಡಾಟ ಮಾಡುತ್ತಿದ್ದ. ಇತ್ತ ಪೊಲೀಸರು ಈತನ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದರು. ಶನಿವಾರ ರಾತ್ರಿ ಇಂದಿರಾ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಎಸ್‌ಐ ಅಮರೇಶ್‌ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಇನ್ನೋವಾ ಕಾರು ಪೊಲೀಸರನ್ನು ನೋಡಿ ಬಂದ ರಸ್ತೆಯಲ್ಲೇ ವಾಪಸ್‌ ತೆರಳಿತ್ತು. ಪೊಲೀಸರನ್ನು ನೋಡಿ ಭಯದಿಂದ ಯಾರೋ ಚಾಲಕ ವಾಪಸಾಗಿರಬೇಕೆಂದು ಪೊಲೀಸರು ಸುಮ್ಮನಿದ್ದರು. ಆದರೆ, ಅಮರೇಶ್‌ ನೇತೃತ್ವದ ತಂಡ ತಡರಾತ್ರಿ ಗಸ್ತು ತಿರುಗುವಾಗ ಎರಡು ಬಾರಿ ಇದೇ ಇನ್ನೋವಾ ಕಾರು ಓಡಾಡುವುದು ಕಣ್ಣಿಗೆ ಬಿದ್ದಿದೆ. ಇದರಿಂದ ಅನುಮಾನಗೊಂಡ ಪೊಲೀಸರು, ಕಂಟ್ರೋಲ್‌ ರೂಂಗೆ ಕರೆ ಮಾಡಿ ವಾಹನದ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಶಿವಮೊಗ್ಗದಲ್ಲಿ ರೌಡಿ ಶೀಟರ್‌ಗಳ ವಿರುದ್ಧ ಪೊಲೀಸರಿಂದ ‘ಕೋಕಾ’ ಅಸ್ತ್ರ..!
ಈ ವೇಳೆ ಇದು ಆಂಧ್ರದಲ್ಲಿ ಕಳ್ಳತನವಾಗಿರುವ ಕಾರು ಎಂದು ತಿಳಿದು ಬಂದಿದೆ. ಅದೇ ಸಮಯದಲ್ಲಿ ಇಂದಿರಾ ನಗರದ 80 ಅಡಿ ರಸ್ತೆಯಲ್ಲಿ ಲೋಹಿತ್‌ ಪುನಃ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಈತನ ಬೆನ್ನತ್ತಿದ ಪೊಲೀಸರು, ಒಂದು ಗಂಟೆ ಕಾರ್ಯಾಚರಣೆ ನಡೆಸಿ ಜೀವನ ಭೀಮಾನಗರ ಚಲ್ಲಘಟ್ಟದ ಬಳಿ ಮುಂಜಾನೆ 5.15ರ ಸಮಯದಲ್ಲಿ ಲೋಹಿತ್‌ನನ್ನು ಸುತ್ತುವರಿದಿದ್ದಾರೆ. ಪೊಲೀಸ್‌ ಕಾನ್ಸ್‌ಟೆಬಲ್‌ ಸೈಯದ್‌ ಲೋಹಿತ್‌ನನ್ನು ಬಂಧಿಸಲು ಹೋದ ವೇಳೆ ಆತ ಮಾರಕಾಸ್ತ್ರದಿಂದ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ.

ಕೂಡಲೇ ಇನ್‌ಸ್ಪೆಕ್ಟರ್‌ ಹರೀಶ್‌ ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರು. ಇಷ್ಟಾದರೂ ಎಚ್ಚೆತ್ತುಕೊಳ್ಳದ ಲೋಹಿತ್‌, ಮತ್ತೆ ಹಲ್ಲೆಗೆ ಮುಂದಾದಾಗ ಎಸ್‌ಐ ಅಮರೇಶ್‌ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿದರು. ಕುಸಿದು ಬಿದ್ದ ಲೋಹಿತ್‌ನನ್ನು ವಶಕ್ಕೆ ಪಡೆದ ಪೊಲೀಸರು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುರಪುರದಲ್ಲಿ ರೌಡಿ​​ಗಳಿಗೆ ಖಾಕಿ ಶಾಕ್; ರೌಡಿಶೀಟರ್‌ ಬಾಬುಗೌಡ ಅಗತೀರ್ಥ ಶೀಘ್ರ ಗಡಿಪಾರು!
ವರ್ತೂರು ಅಪಹರಣ ಪ್ರಕರಣ: 2020ರ ನವೆಂಬರ್‌ನಲ್ಲಿ ಕೋಲಾರದ ಹೊಸಹಳ್ಳಿ ಬಳಿ ವರ್ತೂರು ಪ್ರಕಾಶ್‌ ಮತ್ತು ಅವರ ಕಾರು ಚಾಲಕನನ್ನು ಅಪಹರಿಸಲಾಗಿತ್ತು. ಆರೋಪಿಗಳು ಮೂರು ದಿನ ತಮ್ಮ ವಶದಲ್ಲಿಟ್ಟುಕೊಂಡು 48 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಈ ನಡುವೆ ಕಾರು ಚಾಲಕ ಸುನೀಲ್‌ ಆರೋಪಿಗಳಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದರು. ಇದಾದ ಬಳಿಕ ವರ್ತೂರು ಪ್ರಕಾಶ್‌ ಅವರನ್ನು ಹೊಸಕೋಟೆ ನಂದಗುಡಿಯ ಬಳಿ ಆರೋಪಿಗಳು ಬಿಟ್ಟು ಕಳುಹಿಸಿದ್ದರು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು, ಈ ಪ್ರಕರಣದಲ್ಲಿ ಲೋಹಿತ್‌ನನ್ನು ಎ2 ಆರೋಪಿಯಾಗಿ ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದ. ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಯತ್ನ, ಎಲೆಕ್ಟ್ರಾನಿಕ್‌ ಸಿಟಿ, ಪರಪ್ಪನ ಅಗ್ರಹಾರ, ಹೆಗ್ಗೋಡಿ ಪೊಲೀಸ್‌ ಠಾಣೆಯಲ್ಲಿ ದರೋಡೆ ಮಾಡಿ ಪರಾರಿಯಾಗಿದ್ದ. ಬಳಿಕ ಇಂದಿರಾನಗರದ ವಿಜಯಕುಮಾರ್‌ ಅಪಹರಿಸಿ ಹತ್ಯೆಗೈದು ತಲೆಮರೆಸಿಕೊಂಡಿದ್ದ.

ಬೆಂಗಳೂರಿನಲ್ಲಿ ರೌಡಿ ಶೀಟರ್‌ ಜೆಸಿಬಿ ನಾರಾಯಣ ಹತ್ಯೆಗೆ ವಿಫಲ ಯತ್ನ: ಹಳೇ ದ್ವೇಷವೇ ಕಾರಣ..



Read more