Karnataka news paper

ಮೊದಲ ರೈಲಿಗೆ ಗ್ರೀನ್‌ ಸಿಗ್ನಲ್‌?; ಫೆಬ್ರವರಿಯಲ್ಲಿ ಹುಬ್ಬಳ್ಳಿ- ತಳಕಲ್‌- ಕುಕನೂರು ಮಾರ್ಗವಾಗಿ ಯಲಬುರ್ಗಾವರೆಗೆ ಸಂಚಾರ!


ಹೈಲೈಟ್ಸ್‌:

  • ಫೆಬ್ರವರಿ -2022ರ ವೇಳೆಗೆ ತಳಕಲ್‌-ಸಂಗನಹಾಳವರೆಗೆ ರೈಲ್ವೆ ಸಂಚಾರ ಆರಂಭಿಸುವುದಾಗಿ ಹುಬ್ಬಳ್ಳಿಯ ನೈಋುತ್ಯ ರೈಲ್ವೆ ವಲಯದ ಅಧಿಕಾರಿಗಳು ಭರವಸೆ ನೀಡಿದ್ದಾರೆ
  • ತಳಕಲ್‌ (ಗದಗ)- ವಾಡಿ ರೈಲ್ವೆ ಹೊಸ ಮಾರ್ಗಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಹಾಗೂ ರೈಲ್ವೆ ಹಳಿ ಜೋಡಣೆ ಕಾರ್ಯ ಭರದಿಂದ ಸಾಗಿದೆ
  • ತಳಕಲ್‌- ಕುಕನೂರು- ಸಂಗನಹಾಳ- ಯಲಬುರ್ಗಾ ಪಟ್ಟಣದವರೆಗಿನ ಮಾರ್ಗದ ರೈಲ್ವೆ ಹಳಿ ಜೋಡಣೆ ಕಾರ್ಯ ಮುಗಿಯುವ ಹಂತಕ್ಕೆ ಬಂದಿದೆ

ಗಂಗಾಧರ ಬಂಡಿಹಾಳ ಕೊಪ್ಪಳ
ಕೊಪ್ಪಳ: ಹುಬ್ಬಳ್ಳಿ- ತಳಕಲ್‌- ಕುಕನೂರು ಮಾರ್ಗವಾಗಿ ಯಲಬುರ್ಗಾ ಪಟ್ಟಣದವರೆಗೆ ಫೆಬ್ರವರಿಯಲ್ಲಿ ಮೊದಲ ಬಾರಿಗೆ ರೈಲು ಸಂಚರಿಸಲಿದೆ.

ಗದಗ (ತಳಕಲ್‌)-ವಾಡಿ ರೈಲ್ವೆ ಮಾರ್ಗ 256.57 ಕಿ.ಮೀ. ವ್ಯಾಪ್ತಿ ಹೊಂದಿದ್ದು ಮಂಜೂರಾತಿ ದೊರೆತು ಸುಮಾರು 7 ವರ್ಷಗಳಾಗಿವೆ. 2013-14 ನೇ ಸಾಲಿನಲ್ಲಿ ಹೊಸ ರೈಲ್ವೆ ಮಾರ್ಗ ಮಂಜೂರಾಗಿದೆ. ಈ ಮಾರ್ಗಕ್ಕಾಗಿ ಸುಮಾರು 2,841 ಕೋಟಿ ರೂ.ವೆಚ್ಚದಲ್ಲಿ ಮಂಜೂರಾಗಿ ಸಿಕ್ಕಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರ ಈ ವೆಚ್ಚದಲ್ಲಿ ತಲಾ ಶೇ.50ರಂತೆ ಕಾಮಗಾರಿ ಕೈಗೊಂಡಿದೆ. ಈ ಪೈಕಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ ರೈಲ್ವೆ ಇಲಾಖೆಗೆ ಹಸ್ತಾಂತರಿಸುವ ಜವಾಬ್ದಾರಿ ರಾಜ್ಯ ಸರಕಾರಕ್ಕೆ ಸೇರಿದೆ. ಈ ವೆಚ್ಚದ 2,841 ಕೋಟಿ ರೂ. ಪೈಕಿ ರಾಜ್ಯ ಸರಕಾರದ 1,527.44 ಕೋಟಿ ರೂ., ಕೇಂದ್ರ ಸರಕಾರದ 1,314.39 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದೆ.
ಬೆಂಗಳೂರು-ದಿಂಡಿಗಲ್‌ ಚತುಷ್ಪಥ ರಸ್ತೆ ನಿರ್ಮಾಣ: ಗುತ್ತಿಗೆ ಸಂಸ್ಥೆ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬ!
ಮುಗಿಯುವ ಹಂತ

ತಳಕಲ್‌ (ಗದಗ)- ವಾಡಿ ರೈಲ್ವೆ ಹೊಸ ಮಾರ್ಗಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಹಾಗೂ ರೈಲ್ವೆ ಹಳಿ ಜೋಡಣೆ ಕಾರ್ಯ ಭರದಿಂದ ಸಾಗಿದೆ. ತಳಕಲ್‌- ಕುಕನೂರು- ಸಂಗನಹಾಳ- ಯಲಬುರ್ಗಾ ಪಟ್ಟಣದವರೆಗಿನ ಮಾರ್ಗದ ರೈಲ್ವೆ ಹಳಿ ಜೋಡಣೆ ಕಾರ್ಯ ಮುಗಿಯುವ ಹಂತಕ್ಕೆ ಬಂದಿದೆ. ಈಗಾಗಲೇ ರೈಲ್ವೆ ಸ್ಟೇಶನ್‌ ನಿರ್ಮಾಣ ಮಾಡಿದೆ. ತಳಕಲ್‌ದಿಂದ ಕುಕನೂರುವರೆಗಿನ ಸುಮಾರು 12 ಕಿ.ಮೀ., ತಳಕಲ್‌- ರಾಜೂರುವರೆಗೆ 20 ಕಿ.ಮೀ., ಯಲಬುರ್ಗಾ- 28, ಹನುಮಾಪುರ- 34, ಲಿಂಗನಬಂಡಿ- 45, ಕುಷ್ಟಗಿವರೆಗೆ 55 ಕಿ.ಮೀ.ವರೆಗಿನ ಕಾಮಗಾರಿ ಭರದಿಂದ ಸಾಗಿದೆ.
ಚಿಕ್ಕಮಗಳೂರು -ಬೆಂಗಳೂರು ರೈಲು ಜನವರಿ ಮೊದಲ ವಾರ ಪುನಾರಂಭ
ಖಚಿತ
ಆದರೆ ಫೆಬ್ರವರಿ -2022ರ ವೇಳೆಗೆ ತಳಕಲ್‌-ಸಂಗನಹಾಳವರೆಗೆ ರೈಲ್ವೆ ಸಂಚಾರ ಆರಂಭಿಸುವುದಾಗಿ ಹುಬ್ಬಳ್ಳಿಯ ನೈಋುತ್ಯ ರೈಲ್ವೆ ವಲಯದ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸಂಗನಹಾಳದವರೆಗೆ ರೈಲು ಸಂಚಾರ ಆರಂಭಿಸುವುದಕ್ಕಿಂತ ಯಲಬುರ್ಗಾದವರೆಗೆ ವಿಸ್ತರಿಸಿದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ಆದ್ದರಿಂದ ಹುಬ್ಬಳ್ಳಿ- ತಳಕಲ್‌- ಯಲಬುರ್ಗಾದವರೆಗೆ ರೈಲು ಸಂಚಾರ ಆರಂಭಿಸುವುದು ಒಳ್ಳೆಯದು. ಸಂಗನಹಾಳ ಗ್ರಾಮದವರೆಗೆ 20 ಕಿ.ಮೀ. ಆಗಲಿದ್ದು, ಇನೂ ಹೆಚ್ಚುವರಿಯಾಗಿ 8 ಕಿ.ಮೀ.ವಿಸ್ತರಿಸಿದರೆ ಯಲಬುರ್ಗಾ ಪಟ್ಟಣದಿಂದಲೂ ಪ್ರಯಾಣಿಕರು ಪ್ರಯಾಣ ಬೆಳೆಸಲಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಅವರು ನೈಋುತ್ಯ ವಲಯದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಮೂಲ ತಿಳಿಸಿವೆ. ಈ ಕುರಿತಂತೆ ರೈಲ್ವೆ ಅಧಿಕಾರಿಗಳು ಸಮಯವಕಾಶ ಕೇಳಿದ್ದು, ಬಹುತೇಕ ಯಲಬುರ್ಗಾದವರೆಗೆ ವಿಸ್ತರಿಸುವುದು ಖಚಿತವಾಗಲಿದೆ ಎಂದು ಮೂಲ ತಿಳಿಸಿವೆ. ಹುಬ್ಬಳ್ಳಿಯಿಂದ ಆಗಮಿಸುವ ರೈಲು ಸಂಗನಹಾಳ ಇಲ್ಲವೆ ಯಲಬುರ್ಗಾದವರೆಗೆ ಫೆಬ್ರವರಿಯಲ್ಲಿ ಸಂಚರಿಸುವುದು ಖಚಿತವಾಗಿದೆ. ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಲಿದೆ.
ಗೊಟ್ಟಿಗೆರೆ-ನಾಗವಾರ ಮೆಟ್ರೊ ಸುರಂಗ ಕಾಮಗಾರಿ ಆಮೆಗತಿ; ರೈಲು ಸಂಚಾರ 2 ವರ್ಷ ವಿಳಂಬ ಸಾಧ್ಯತೆ
ಗದಗ(ತಳಕಲ್‌)- ವಾಡಿ ಹೊಸ ರೈಲ್ವೆ ಮಾರ್ಗ ಕಾಮಗಾರಿ ನಡೆದಿದ್ದು, ಫೆಬ್ರವರಿ ವೇಳೆಗೆ ಸಂಗನಹಾಳದವರೆಗೆ ರೈಲು ಸಂಚರಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಯಲಬುರ್ಗಾದವರೆಗೆ ರೈಲು ಓಡಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಭರವಸೆ ವ್ಯಕ್ತವಾಗಿದೆ.
ಸಂಗಣ್ಣ ಕರಡಿ, ಸಂಸದ, ಕೊಪ್ಪಳ



Read more