Karnataka news paper

ಸಿನಿಮಾ ಬಿಸ್ನೆಸ್ ವಿಚಾರದಲ್ಲಿ ಪರ್ಯಾಯ ಮಾರ್ಗ: ಒಟಿಟಿ ಗೆಲುವು ತಂದ 2021


ಹೈಲೈಟ್ಸ್‌:

  • ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷಾ ಚಿತ್ರಗಳಿಗೆ ಒಟಿಟಿ ಉತ್ತಮ ವೇದಿಕೆ
  • 2021ರಲ್ಲಿ ಸ್ಟಾರ್ ಸಿನಿಮಾಗಳೂ ಒಟಿಟಿಯಲ್ಲಿ ತೆರೆಕಂಡಿವೆ
  • ಸಿನಿಮಾ ಮಾರುಕಟ್ಟೆ ಒಟಿಟಿ ಮೂಲಕ ಮತ್ತೊಂದು ಮಗ್ಗುಲಿಗೆ ಹೊರಳಿದೆ

ಹರೀಶ್‌ ಬಸವರಾಜ್‌
ಕೋವಿಡ್‌ ಎಲ್ಲ ಕ್ಷೇತ್ರಗಳಂತೆ ಸಿನಿಮಾ ಕ್ಷೇತ್ರವನ್ನೂ ಎಡೆಬಿಡದೆ ಎರಡು ವರ್ಷಗಳಿಂದ ಕಾಡುತ್ತಿದೆ. ಈ ಸಮಯದಲ್ಲಿ ಸಿನಿಮಾರಂಗವನ್ನು ಕೊಂಚ ಉಸಿರಾಡುವಂತೆ ಮಾಡಿದ್ದು ಒಟಿಟಿ ವೇದಿಕೆ. ಹೌದು, ಒಟಿಟಿ ವೇದಿಕೆ ಎಲ್ಲ ಭಾಷೆಯ ಸಿನಿಮಾಗಳಿಗೂ ಬಿಸ್ನೆಸ್‌ ವಿಚಾರದಲ್ಲಿ ಪರ್ಯಾಯ ಮಾರ್ಗವಾಗಿ ಕಾಣುತ್ತಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷಾ ಚಿತ್ರಗಳಿಗೆ ಇದು ಉತ್ತಮ ಮಾರುಕಟ್ಟೆಯಾಗಿ ಒದಗಿ ಬಂದಿದೆ. 2020 ಒಟಿಟಿ ಮಾರುಕಟ್ಟೆಗೆ ಬುನಾದಿ ಹಾಕಿದ ವರ್ಷ ಎನ್ನಬಹುದು. 2021 ಒಟಿಟಿಯ ಮಾರುಕಟ್ಟೆಯನ್ನು ಬೇರೆಯ ಸ್ತರಕ್ಕೆ ತೆಗೆದುಕೊಂಡು ಹೋದ ವರ್ಷ. ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌ ಹೀಗೆ ಎಲ್ಲಾ ಚಿತ್ರರಂಗಗಳಲ್ಲಿನ ಸ್ಟಾರ್‌ ನಟರು ಒಟಿಟಿಯಲ್ಲಿ ತಮ್ಮ ಸಿನಿಮಾಗಳನ್ನು ನೇರವಾಗಿ ಬಿಡುಗಡೆ ಮಾಡಿದರು.

ಸ್ಟಾರ್‌ಗಳೇ ಹೆಚ್ಚು: ಕೋವಿಡ್‌ನ ಎರಡನೇ ಅಲೆಯಿಂದ ದಕ್ಷಿಣ ಭಾರತ ಬೇಗ ಚೇತರಿಸಿಕೊಂಡಿತು. ಆದರೆ ಬಾಲಿವುಡ್‌ ಬಾಕ್ಸ್‌ಆಫೀಸ್‌ಗೆ ಮೂಲ ನೆಲೆಯಾದ ಉತ್ತರ ಭಾರತ ಮತ್ತು ಮುಂಬಯಿ ಬಹಳ ತಡವಾಗಿ ಚೇತರಿಸಿಕೊಂಡು, ಚಿತ್ರಮಂದಿರಗಳು ತೆರೆಯುವುದು ಬಹಳ ತಡವಾಯಿತು. ಇಂತಹ ಹೊತ್ತಿನಲ್ಲಿ ಹಿಂದಿ ಚಿತ್ರಗಳಿಗೆ ನೆಲೆ ಒದಗಿಸಿಕೊಟ್ಟದ್ದೇ ಒಟಿಟಿಗಳು. 2021ರಲ್ಲಿಅಕ್ಷಯ್‌ ಕುಮಾರ್‌, ಸಲ್ಮಾನ್‌ ಖಾನ್‌ರಂತಹ ದೊಡ್ಡ ಸ್ಟಾರ್‌ಗಳು ಸಹ ನೇರವಾಗಿ ಒಟಿಟಿಯಲ್ಲಿ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಿದರು. ಮಲಯಾಳಂನ ಮೋಹನ್‌ಲಾಲ್‌, ಪೃಥ್ವಿರಾಜ್‌ ಸುಕುಮಾರನ್‌, ತಮಿಳಿನ ಸೂರ್ಯ, ಧನುಷ್‌, ತೆಲುಗಿನಲ್ಲಿ ವೆಂಕಟೇಶ್‌ ಹೀಗೆ ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾಗಳು 2021ರಲ್ಲಿಒಟಿಟಿಯಲ್ಲಿ ಬಿಡುಗಡೆಯಾದವು. ಅಲ್ಲಿನ ಚಿತ್ರಾಭಿಮಾನಿಗಳೂ ತಮ್ಮ ನೆಚ್ಚಿನ ನಟರ ಚಿತ್ರಗಳನ್ನು ಮುಗಿಬಿದ್ದು ಸಿನಿಮಾ ನೋಡಿದ ಉದಾಹರಣೆ 2021ರಲ್ಲಿ ದಾಖಲಾಯಿತು. ಅಕ್ಷಯ್‌ ಕುಮಾರ್‌, ಧನುಷ್‌ ನಟಿಸಿದ್ದ ‘ಅತ್ರಂಗಿ ರೇ’ಯಂತಹ ಮಲ್ಟಿ ಸ್ಟಾರ್‌ ಸಿನಿಮಾ ಕೂಡ ಒಟಿಟಿಗೆ ಬಂದದ್ದು 2021ರ ಅಚ್ಚರಿಯೇ ಸರಿ.

ರವಿಚಂದ್ರನ್ ಬರ್ತಡೇ ಗಿಫ್ಟ್: ಬರಲಿದೆ ‘ಕನ್ನಡಿಗ’ ಟೀಸರ್
ಕನ್ನಡದಲ್ಲಿಯೂ ಉತ್ತಮ ಪ್ರತಿಕ್ರಿಯೆ: ಕನ್ನಡ ಭಾಷೆಗೆ ಒಟಿಟಿ ವೇದಿಕೆಯಲ್ಲಿ ಉತ್ತಮ ಮಾರುಕಟ್ಟೆ ಇಲ್ಲ ಎಂಬ ಮಾತು ಜನಜನಿತವಾಗಿದೆ. ಆದರೆ 2021ರಲ್ಲಿ ಕನ್ನಡದ ‘ಇಕ್ಕಟ್‌’, ‘ರತ್ನನ್‌ ಪ್ರಪಂಚ’, ‘ಕನ್ನಡಿಗ’ ಸಿನಿಮಾಗಳು ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾದವು. ಇವುಗಳಲ್ಲಿ‘ರತ್ನನ್‌ ಪ್ರಪಂಚ’ ಮತ್ತು ‘ಕನ್ನಡಿಗ’ ಸಿನಿಮಾಗಳು ಧನಂಜಯ ಮತ್ತು ರವಿಚಂದ್ರನ್‌ರಂತಹ ಸ್ಟಾರ್‌ ನಟರನ್ನು ಹೊಂದಿದ್ದವು. ‘ಇಕ್ಕಟ್‌’ ಸಿನಿಮಾದಲ್ಲಿ ನಾಗಭೂಷಣ್‌ ಮತ್ತು ಭೂಮಿ ಶೆಟ್ಟಿ ನಟಿಸಿದ್ದರು. ‘ಇಕ್ಕಟ್‌’ ಮತ್ತು ‘ರತ್ನನ್‌ ಪ್ರಪಂಚ’ ಸಿನಿಮಾಗೆ ಒಳ್ಳೆ ವೀಕ್ಷಕರು ಸಿಕ್ಕಿದರು ಎಂದು ಆ ನಿರ್ದಿಷ್ಟ ಒಟಿಟಿ ವೇದಿಕೆಯೇ ಅಧಿಕೃತವಾಗಿ ಹೇಳಿಕೊಂಡಿತು. ರವಿಚಂದ್ರನ್‌ ಅವರ ‘ಕನ್ನಡಿಗ’ ಸಹ ಸದ್ಯಕ್ಕೆ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಈ ಮೂಲಕ ಒಳ್ಳೆಯ ಸಿನಿಮಾಗಳನ್ನು ಮಾಡಿದರೆ ಒಟಿಟಿಯಲ್ಲಿಯೂ ಕನ್ನಡ ಸಿನಿಮಾಗಳ ಮಾರುಕಟ್ಟೆ ಸೃಷ್ಟಿ ಮಾಡಬಹುದು ಎಂಬುದು ಸಾಬೀತಾಗಿದೆ. ಇದೇ ಜನವರಿ ಮೊದಲ ವಾರದಲ್ಲಿ ಕನ್ನಡದ ಮೊಟ್ಟ ಮೊದಲ ವೆಬ್‌ ಸಿರೀಸ್‌ ಬಿಡುಗಡೆಯಾಗುತ್ತಿದೆ. ಗಮನಾರ್ಹ ವಿಷಯವೆಂದರೆ, ಕನ್ನಡದ ಹಲವು ಸಿನಿಮಾಗಳು ಬಿಡುಗಡೆಯಾಗಿ 25 ದಿನದೊಳಗೆ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿವೆ. ಹಾಗಾಗಿ ಸಿನಿಮಾ ಮಾರುಕಟ್ಟೆ ಒಟಿಟಿ ಮೂಲಕ ಮತ್ತೊಂದು ಮಗ್ಗುಲಿಗೆ ಹೊರಳಿದೆ ಎನ್ನಲಾಗುತ್ತಿದೆ.



Read more