ಹೈಲೈಟ್ಸ್:
- ವಿಮೆ ಚೆಕ್ ವಿತರಿಸಿದ ಕೇಂದ್ರ ಸಚಿವೆ ಶೋಭಾ
- ಠೇವಣಿ ವಿಮೆಯ ಮೊತ್ತವನ್ನು 1 ಲಕ್ಷ ರೂ. ನಿಂದ 5 ಲಕ್ಷಕ್ಕೆ ಏರಿಕೆ
- ಕೇಂದ್ರ ಕೃಷಿ ಖಾತೆಯ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ
ಬಾಗಲಕೋಟೆ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಭಾನುವಾರ ಡಿಐಸಿಜಿಸಿ ಫಲಾನುಭವಿಗಳೊಂದಿಗೆ ನಡೆದ ಪ್ರಧಾನ ಮಂತ್ರಿಗಳ ನೇರ ಸಂವಾದ ಕಾರ್ಯಕ್ರಮದಲ್ಲಿ ಸಾಂಕೇತಿಕ ಚೆಕ್ ವಿತರಿಸಿ ಅವರು ಮಾತನಾಡಿದರು.
‘ಬ್ಯಾಂಕ್‌ನಲ್ಲಿ ಜೀವಮಾನದ ಗಳಿಕೆಯನ್ನು ಠೇವಣಿ ರೂಪದಲ್ಲಿಡುವ ಗ್ರಾಹಕರು ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ನಲುಗಿ ಹೋಗುತ್ತಾರೆ. ಹಲವು ಸಂದರ್ಭಗಳಲ್ಲಿ ಹಣ ವಾಪಸ್ಸಾಗದಿದ್ದಾಗ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ. ಈ ಸಂಕಷ್ಟ ಮನಗಂಡ ಕೇಂದ್ರ ಸರಕಾರ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಶನ್ ಮೂಲಕ ಠೇವಣಿ ವಿಮೆಯ ಮೊತ್ತವನ್ನು 1 ಲಕ್ಷ ರೂ. ನಿಂದ 5 ಲಕ್ಷ ರೂ.ಗೆ ಹೆಚ್ಚಳಗೊಳಿಸಿತು. ಇದೀಗ 90 ದಿನಗಳಲ್ಲಿ ನಿರ್ದಿಷ್ಟ ಹಣ ಪಾವತಿಸಲು ಕ್ರಮ ಕೈಗೊಂಡಿದೆ. ಇದರಿಂದ ಠೇವಣಿದಾರರ ಹಿತಾಸಕ್ತಿ ರಕ್ಷಿಸಲು ಸಾಧ್ಯವಾಗಿದೆ’ ಎಂದು ತಿಳಿಸಿದರು.
ಭರವಸೆ ಕಳೆದುಕೊಳ್ಳಬೇಡಿ: ‘ದೇಶಾದ್ಯಂತ ಇಂದು 21, 209 ಗ್ರಾಹಕರಿಗೆ ವಿಮೆ ಹಣ ವಿತರಿಸಲಾಗುತ್ತಿದೆ. ಈ ಮೊತ್ತ 1, 300 ಕೋಟಿ ರೂ. ನಷ್ಟಿದೆ. ಹಾನಿ ಅನುಭವಿಸಿದ ಮುಧೋಳ ಕೋ ಆಪರೇಟಿವ್ ಬ್ಯಾಂಕ್‌ನ 604 ಗ್ರಾಹಕರಿಗೆ 10 ಕೋಟಿ 84 ಲಕ್ಷ ರೂ. ವಿತರಿಸಲಾಗುತ್ತದೆ. ಯೋಜನೆಯಡಿ 13, 549 ಠೇವಣಿದಾರರು ಸೌಲಭ್ಯ ಪಡೆಯಲಿದ್ದು, 11 ಸಾವಿರ ಸಣ್ಣ ಮೊತ್ತದ ಹಣ ಠೇವಣಿ ಮಾಡಿದವರಿದ್ದಾರೆ. 100 ಜನರು 5 ಲಕ್ಷ ರೂ. ಗಿಂತ ಹೆಚ್ಚಿನ ಠೇವಣಿ ಹೊಂದಿದ್ದಾರೆ. ಠೇವಣಿದಾರರು ಭರವಸೆ ಕಳೆದುಕೊಳ್ಳುವುದು ಬೇಡ, ಕೇಂದ್ರ ಸರಕಾರ ನಿಮ್ಮ ರಕ್ಷಣೆಗಿದೆ. ದೇಶದ ಆರ್ಥಿಕತೆ ಸುಧಾರಣೆಗೆ ಹೆಚ್ಚಿನ ಹಣ ಠೇವಣಿಯಿಡಿ’ ಎಂದರು.
‘ಕೇಂದ್ರ ಸರಕಾರದ ಉತ್ತಮ ಆರ್ಥಿಕ ನೀತಿಯಿಂದ ಠೇವಣಿದಾರರಿಗೆ ರಕ್ಷಣೆ ಒದಗಿಸಲಾಗುತ್ತಿದೆ. ರಾಜ್ಯದಲ್ಲಿನ ಸಹಕಾರಿ ಸಂಘಗಳು ಉತ್ತಮ ಹೆಸರು ಹೊಂದಿದ್ದು, ಠೇವಣಿದಾರರ ಹಿತಾಸಕ್ತಿ ಕಾಪಾಡಬೇಕು. ಕೇಂದ್ರ ಸರಕಾರ ಎಲ್ಲ ಕ್ಷೇತ್ರಗಳಲ್ಲೂ ಸುಧಾರಣೆ ಮೂಲಕ ಜನಸಾಮಾನ್ಯರ ಬದುಕು ಸುಭದ್ರಗೊಳಿಸಿದೆ. 130 ಕೋಟಿ ಜನರಿಗೆ ಸ್ವದೇಶಿ ನಿರ್ಮಿತ ಕೋವಿಡ್ ಲಸಿಕೆ ವಿತರಿಸಿರುವುದು ದೊಡ್ಡ ಸಾಧನೆಯಾಗಿದೆ. ಎರಡೂ ಡೋಸ್ ಲಸಿಕೆ ಪಡೆದವರು ಕೋವಿಡ್‌ನಿಂದ ಜೀವ ಕಳೆದುಕೊಂಡ ಉದಾಹರಣೆ ಕಡಿಮೆ. ಸೇನೆಯ ಶಸ್ತ್ರಾಸ್ತ್ರಗಳಿಗೆ ವಿದೇಶದ ಅವಲಂಬನೆ ಕಡಿಮೆಗೊಳಿಸಲಾಗಿದೆ. ಇದೀಗ ಭಾರತದಲ್ಲೇ ಶಸ್ತ್ರಾಸ್ತ್ರ ಸಿದ್ಧವಾಗುತ್ತಿವೆ. ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ಸಿಡಿಎಸ್ ರಾವತ್ ಅವರ ಅಪಘಾತದ ಬಗ್ಗೆ ತನಿಖೆ ನಡೆಸಲಾಗುತ್ತದೆ. ಸೇನೆ ಬಲಪಡಿಸುವ ಮೂಲಕ ಕೇಂದ್ರ ಸರಕಾರ ದೇಶದ ರಕ್ಷಣೆಗೆ ಒತ್ತು ನೀಡಿದೆ’ ಎಂದು ವಿವರಿಸಿದರು.
ಗ್ರಾಹಕರ ವಿಶ್ವಾಸ ಕಾಪಾಡಿ: ‘ಬಾಂಗ್ಲಾ ದೇಶದ ಗಡಿಯಲ್ಲಿ ಅಕ್ರಮವಾಗಿ ಒಳ ನುಸುಳುವುದನ್ನು ತಡೆಯಲು ಬೇಲಿ ಅಳವಡಿಸಲಾಗುತ್ತಿದೆ. ರಾಜಕೀಯ ಮೀರಿ ಪ್ರಧಾನಿ ಮೋದಿ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ’ ಎಂದು ಸಮರ್ಥಿಸಿಕೊಂಡರು. ಶಾಸಕ ವೀರಣ್ಣ ಚರಂತಿಮಠ ‘ಹಣಕಾಸು ಸಂಸ್ಥೆಗಳು ಗ್ರಾಹಕರ ವಿಶ್ವಾಸ ಕಾಪಾಡಬೇಕು. ವಿಮೆ ಸೌಲಭ್ಯವಿದೆ ಎಂದು ಸಂಸ್ಥೆಗಳು ಮುಚ್ಚುವಂತಾಗಬಾರದು’ ಎಂದರು.
ತೇರದಾಳ ಶಾಸಕ ಸಿದ್ದು ಸವದಿ ‘ಕೆಲವೆಡೆ ಹಣಕಾಸು ಸಂಸ್ಥೆಗಳನ್ನು ದುರುದ್ದೇಶದಿಂದ ಸ್ಥಾಪಿಸಿ ನಂತರ ಠೇವಣಿದಾರರಿಗೆ ಮೋಸ ಮಾಡಲಾಗುತ್ತಿದೆ. ಇಂತಹ ಪ್ರವೃತ್ತಿ ನಿಯಂತ್ರಣಕ್ಕೆ ಕೇಂದ್ರ ಸರಕಾರ ಕಾನೂನು ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.
ಸಂಸದ ಪಿ. ಸಿ. ಗದ್ದಿಗೌಡರ ‘ದೇಶದ ಆರ್ಥಿಕ ಸದೃಢತೆಗೆ ಕೇಂದ್ರ ಸರಕಾರದಿಂದ ಹಲವಾರು ಕಾನೂನು ರೂಪಿಸಲಾಗಿದೆ. ಜನರು ಹೆಚ್ಚಿನ ಹಣ ಉಳಿತಾಯದತ್ತ ಗಮನ ಹರಿಸಬೇಕು’ ಎಂದು ತಿಳಿಸಿದರು.
ಹೊಸದಿಲ್ಲಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ನೇರ ಪ್ರಸಾರದಲ್ಲಿ 120 ಫಲಾನುಭವಿಗಳು ವೀಕ್ಷಿಸಿದರು. ಮುಧೋಳ ಕೋ ಆಪರೇಟಿವ್ ಬ್ಯಾಂಕ್ ಫಲಾನುಭವಿಗಳಿಗೆ ಸಾಂಕೇತಿಕವಾಗಿ 10 ಕೋಟಿ ರೂ. ಚೆಕ್ ವಿತರಿಸಲಾಯಿತು. ಕೆವಿಜಿ ಬ್ಯಾಂಕ್ ಅಧ್ಯಕ್ಷ ಟಿ. ಗೋಪಿ ಕೃಷ್ಣ, ಯೂನಿಯನ್ ಬ್ಯಾಂಕ್ ಡಿಜಿಎಂ ಸಂತೋಷ ಪ್ರಭು, ಎಸ್‌ಬಿಐನ ಶ್ಯಾಮ್‌ಸನ್, ಲೀಡ್ ಬ್ಯಾಂಕ್ ಮ್ಯಾನೇಜರ್ ಗೋಪಾಲ ರೆಡ್ಡಿ, ಕೆನರಾ ಬ್ಯಾಂಕ್ ರೀಜನಲ್ ಮ್ಯಾನೇಜರ್ ವೈ. ಸತೀಶ ಬಾಬು, ಎಸ್‌ಬಿಐ ಮ್ಯಾನೇಜರ್ ಜಿ. ನರಸಿಂಹಮೂರ್ತಿ ಹಾಗೂ ಅಧಿಕಾರಿಗಳು ಇದ್ದರು.