ಬೆಂಗಳೂರಿನಲ್ಲಿ ಹೇಗಿದೆ ನ್ಯೂ ಇಯರ್ ಸೆಲೆಬ್ರೆಷನ್? ಎಲ್ಲೆಲ್ಲೂ ಪೊಲೀಸ್ ಬಂದೋಬಸ್ತ್
ಪ್ರತಿ ವರ್ಷದಂತೆ ಈ ವರ್ಷವೂ ಹೊಸ ವರ್ಷದ ಸ್ವಾಗತಕ್ಕಾಗಿ ಸಂಭ್ರಮಿಸಲು ಮದ್ಯಪ್ರಿಯರು ಹಿಂದಿನ ವರ್ಷಗಳಿಗೆ ಹೋಲಿಸಿದರೆ ತುಸು ಹೆಚ್ಚೇ ಖರ್ಚು ಮಾಡಿದ್ದಾರೆ. ನೈಟ್ ಕರ್ಫ್ಯೂ ಹೊರತಾಗಿಯೂ ಪಾನಪ್ರಿಯರಲ್ಲಿ ಮದ್ಯ ಖರೀದಿ ಉತ್ಸಾಹ ಕುಗ್ಗದೆ ಸಾಲುಗಟ್ಟಿ ಮದ್ಯದ ಬಾಟಲ್‌ಗಳನ್ನು ಬ್ಯಾಗ್‌ಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಅದರ ಪರಿಣಾಮ, ರಾಜ್ಯದಲ್ಲಿ ಡಿ.24 ರಿಂದ 31 ರವರೆಗೆ ಒಂದೇ ವಾರದಲ್ಲಿ 974.58 ಕೋಟಿ ರೂ. ಮೊತ್ತದ ಮದ್ಯ ಬಿಕರಿಯಾಗಿದ್ದು, ಅಬಕಾರಿ ಇಲಾಖೆಗೆ ಒಟ್ಟು 573.75 ಕೋಟಿ ರೂ. ಆದಾಯ ಹರಿದು ಬಂದಿದೆ.
ಅಬಕಾರಿ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಈ ಒಂದು ವಾರದ ಅವಧಿಯಲ್ಲಿ 17.14 ಲಕ್ಷ ಬಾಕ್ಸ್ ಭಾರತೀಯ ಮದ್ಯ (ಐಎಂಎಲ್) ಮತ್ತು 10.09 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಐಎಂಎಲ್ ಮಾರಾಟ ಪ್ರಮಾಣ ಶೇ. 21.22ರಷ್ಟು ಮತ್ತು ಬಿಯರ್ ಮಾರಾಟ ಪ್ರಮಾಣ ಶೇ.12.11 ರಷ್ಟು ವೃದ್ಧಿಯಾಗಿದೆ.
ಬೆಂಗಳೂರಿನಲ್ಲಿ ನ್ಯೂ ಇಯರ್ ಸಂಭ್ರಮ! ಆಚರಣೆ ಮೇಲೆ ಪೊಲೀಸರ ಹದ್ದಿನ ಕಣ್ಣು!
2017ರ ನಂತರ ಪ್ರತಿ ವರ್ಷದಿಂದ ವರ್ಷಕ್ಕೆ ಡಿಸೆಂಬರ್ ಕೊನೆಯ ಒಂದು ವಾರದಲ್ಲಿ ಮದ್ಯ ಖರೀದಿ ಪ್ರಮಾಣ ಏರಿಕೆಯಾಗುತ್ತಲೇ ಇದೆ. 2017 ರಲ್ಲಿ 647 ಕೋಟಿ, 2018ರಲ್ಲಿ 861 ಕೋಟಿ, 2019 ರಲ್ಲಿ 878 ಕೋಟಿ ರೂ., 2020ರಲ್ಲಿ 844 ಕೋಟಿ ಹಾಗೂ 974 ಕೋಟಿ ರೂ. ಮೊತ್ತದ ಮದ್ಯ ಮಾರಾಟವಾಗಿದೆ. ಅಂತೆಯೇ, ಅಬಕಾರಿ ಇಲಾಖೆಗೆ ಬರುತ್ತಿದ್ದ ಆದಾಯವೂ ಪ್ರತಿ ವರ್ಷ ಕ್ರಮವಾಗಿ 306, 365, 500, 519 ಮತ್ತು 573 ಕೋಟಿ ರೂ. ಆದಾಯ ಹರಿದು ಬಂದಿದೆ. ಆ ಪೈಕಿ ಕ್ರಿಸ್ಮಸ್ ಮುನ್ನಾ ದಿನ ಡಿ.24 ರಂದು 173 ಕೋಟಿ ಹಾಗೂ ಡಿ.28ರಂದು 110 ಕೋಟಿ ರೂ. ಅತ್ಯಧಿಕ ಆದಾಯ ಹರಿದು ಬಂದಿದೆ.