ಖರೀದಿ ಕೇಂದ್ರಗಳಿಗೆ ಮಿತಿ ಹೇರಿರುವ ಸರಕಾರ, ಪ್ರತಿ ಎಕರೆಗೆ 25 ಕ್ವಿಂಟಾಲ್ ಭತ್ತ, ಪ್ರತಿ ರೈತನಿಂದ 40 ಕ್ವಿಂಟಾಲ್ ಗರಿಷ್ಠ ಭತ್ತ ಖರೀದಿ ಮಿತಿ ನಿಗದಿಗೊಳಿಸಲಾಗಿದೆ. ಅದರಂತೆ ರಾಗಿ ಮತ್ತು ಬಿಳಿಜೋಳಕ್ಕೂ ಮಿತಿ ನಿಗದಿಪಡಿಸಲಾಗಿದ್ದು, ಪ್ರತಿ ಎಕರೆಗೆ ಕ್ರಮವಾಗಿ 10 ಕ್ವಿಂಟಾಲ್, ಪ್ರತಿ ರೈತನಿಂದ ತಲಾ 20 ಕ್ವಿಂಟಾಲ್ ರಾಗಿ, ಬಿಳಿ ಜೋಳ ಖರೀದಿ ಮಿತಿಗೊಳಿಸಲಾಗಿದೆ. ಭತ್ತ, ರಾಗಿ, ಬಿಳಿ ಜೋಳ ಖರೀದಿಸಿ ಸರಕಾರದ ಪಡಿತರ ಹಂಚಿಕೆಗೆ ಬಳಸಲಾಗುವುದು. ಇದರಿಂದ ಸರಕಾರದ ಬೊಕ್ಕಸಕ್ಕೆ 1982 ಕೋಟಿ ರೂ. ಹೊರೆಬೀಳಲಿದೆ ಎಂದು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಅಧಿಕಾರಿಗಳೊಂದಿಗೆ ಸಭೆ
ಈ ನಡುವೆ, ರೈತರಿಗೆ ಬೆಂಬಲ ಬೆಲೆ ಯೋಜನೆಯ ಲಾಭ ಸಿಗುವಂತೆ ಅಧಿಕಾರಿಗಳು ಕಾರ್ಯೋನ್ಮುಖವಾಗುವಂತೆ ಸಚಿವ ಉಮೇಶ್ ಕತ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಹಿರಿಯ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಶುಕ್ರವಾರ ಸಭೆ ನಡೆಸಿದ ಅವರು, ಬೆಂಬಲ ಬೆಲೆ ಯೋಜನೆಯಡಿ ಜೋಳ, ರಾಗಿ ಹಾಗೂ ಭತ್ತ ಖರೀದಿ ಪ್ರಕ್ರಿಯೆ ರಾಜ್ಯಾದ್ಯಂತ ಆರಂಭಿಸಲಾಗಿದ್ದು, ಆಡಳಿತಾತ್ಮಕ ತೊಂದರೆ ಉದ್ಭವಿಸದಂತೆ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ. ವ್ಯಾಪಾರಸ್ಥರು ಹಾಗೂ ದಲ್ಲಾಳಿಗಳಿಂದ ಖರೀದಿ ಮಾಡುವಂತಿಲ್ಲ. ಇಂತಹ ಪ್ರಕರಣಗಳು ಕಂಡುಬಂದರೆ ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಅಕಾರಿಗಳಿಗೆ ಸಚಿವರು ಸೂಚಿಸಿದರು.