Karnataka news paper

ಕರ್ನಾಟಕ ಲೋಕಾಯುಕ್ತ ನೂತನ ಜಾಲತಾಣಕ್ಕೆ ರಾಜ್ಯಪಾಲರಿಂದ ಚಾಲನೆ


Online Desk

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರಲು  ಮತ್ತು ಎಲ್ಲಾ ವಿಷಯಗಳಲ್ಲಿ ಸಂಬಂಧಪಟ್ಟ ದೂರುದಾರರಿಗೆ, ಪ್ರತಿವಾದಿಗಳಿಗೆ ಮತ್ತು ಸಾರ್ವಜನಿಕರಿಗೆ  ಸಕಾಲಿಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ  ನೂತನ ಕರ್ನಾಟಕ ಲೋಕಾಯುಕ್ತ ಜಾಲ ತಾಣಕ್ಕೆ ಚಾಲನೆ ನೀಡಲಾಗಿದ್ದು,  ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

 ಬೆಂಗಳೂರಿನ ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ಇಂದು ಕರ್ನಾಟಕ ಲೋಕಾಯುಕ್ತ ಜಾಲತಾಣ ಉದ್ಘಾಟಿಸಿ ಮಾತನಾಡಿದ ಅವರು, ವ್ಯವಸ್ಥೆಯಲ್ಲಿ ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡಿ, ತಂತ್ರಜ್ಞಾನದ ಬಳಕೆಗೆ ಆದ್ಯತೆ ನೀಡುವ ಪ್ರಧಾನ ಮಂತ್ರಿಯವರ ಚಿಂತನೆಯು ಪಾರದರ್ಶಕತೆ ಮತ್ತು  ಉತ್ತಮ ಆಡಳಿತಕ್ಕೆ ದಾರಿ ಮಾಡಿಕೊಟ್ಟಿದೆ ಎಂದರು.

ಇದೇ ಚಿಂತನೆಯೊಂದಿಗೆ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಮತ್ತು  ಸಾರ್ವಜನಿಕರಿಗೆ ಸಕಾಲಿಕ ಮಾಹಿತಿಯನ್ನು ಒದಗಿಸಲು ಲೋಕಾಯುಕ್ತ ಜಾಲತಾಣ ಉನ್ನತ್ತೀಕರಿಸಲಾಗಿದೆ. ಇದರೊಂದಿಗೆ ಅನೇಕ ಕಾರ್ಯಗಳನ್ನು ಸುಗಮಗೊಳಿಸಲಾಗುವುದು ಮತ್ತು ನಾಗರಿಕರಿಗೆ ತ್ವರಿತ, ಸುಲಭ ಮತ್ತು ಅಗ್ಗದ ನ್ಯಾಯವನ್ನು ಪಡೆಯಲು ಅನುಕೂಲವಾಗುವ ಖಾತ್ರಿಯಿದೆ ಎಂದು ಹೇಳಿದರು.
 
ದೂರು ಅಥವಾ ಸ್ವಯಂ ಪ್ರೇರಣೆಯ ಆಧಾರದ ಮೇಲೆ ತನಿಖೆಗಳ ಮೂಲಕ ಸಾರ್ವಜನಿಕ ಆಡಳಿತದಲ್ಲಿ ಶುಚಿತ್ವ ಅಭಿವೃದ್ಧಿಪಡಿಸಲು ಮತ್ತು ಶುದ್ಧ ಆಡಳಿತ , ನ್ಯಾಯ ಸಮ್ಮತತೆ ಮತ್ತು ಸೂಕ್ಷ್ಮತೆಯನ್ನು ತರಲು ನಿರಂತರ ಪ್ರಯತ್ನ ಮಾಡಲು ಲೋಕಾಯುಕ್ತರಿಂದ ನಿರೀಕ್ಷಿಸಲಾಗಿದೆ ಎಂದು ರಾಜ್ಯಪಾಲರು ಹೇಳಿದರು.



Read more