ಶೀರ್ಷಿಕೆ ‘ಲವ್ ಯೂ ರಚ್ಚು’ ಎಂದಿದ್ದಾಗ, ಸಾಮಾನ್ಯವಾಗಿ ಇದು ಪಕ್ಕಾ ರೊಮ್ಯಾಂಟಿಕ್ ಪ್ರೇಮಕಥೆ ಇರಬೇಕು ಎಂದೇ ಎಲ್ಲರೂ ಅಂದಾಜಿಸುತ್ತಾರೆ. ಆದರೆ, ಇಲ್ಲಿ ನಡೆಯುವುದೇ ಬೇರೆ! ಈಗಾಗಲೇ ಟ್ರೈಲರ್‌ನಲ್ಲಿ ನೋಡಿರುವಂತೆಯೇ ಇದೊಂದು ರೊಮ್ಯಾಂಟಿಕ್ ಕ್ರೈಮ್ ಥ್ರಿಲ್ಲರ್ ಸಿನಿಮಾ. ಪತಿ ರಚನಾ (ರಚಿತಾ ರಾಮ್) ಮಾಡಿರುವ ಕೊಲೆಯೊಂದನ್ನು ಮುಚ್ಚಿಹಾಕುವುದಕ್ಕಾಗಿ ಪತಿ ಅಜಯ್ (ಅಜಯ್ ರಾವ್) ಕಟ್ಟುವ ರೋಚಕ ದೃಶ್ಯಗಳನ್ನು ಒಂದಕ್ಕೊಂದು ಪೋಣಿಸುತ್ತ ಸಾಗುವುದೇ ಈ ಸಿನಿಮಾದ ಕಥೆ. ಎರಡು ದಿನಗಳಲ್ಲಿ ನಡೆಯವ ಈ ಕಥೆಯಲ್ಲಿ ಹೀರೋ-ಹೀರೋಯಿನ್ ಸೇಫ್ ಆಗುತ್ತಾರಾ? ಕೊಲೆಯಾಗಿದ್ದು ಯಾರು ಮತ್ತು ಯಾಕೆ? ಈ ಪ್ರಶ್ನೆಗಳನ್ನು ಆಗಾಗ ಹುಟ್ಟಿಸುತ್ತ ಸಾಗುತ್ತದೆ ಚಿತ್ರದ ಕಥೆ!
ಸಿಕ್ಕಾಪಟ್ಟೆ ಟ್ವಿಸ್ಟ್‌ಗಳಿವೆ, ಆದರೆ…
ಈ ಸಿನಿಮಾದ ದೊಡ್ಡ ಬಲ ಎಂದರೆ, ಟ್ವಿಸ್ಟ್‌ಗಳು. ಕೊಲೆಯೊಂದನ್ನು ಮುಚ್ಚಿಹಾಕುವುದಕ್ಕೆ ಹೊರಡವ ದಂಪತಿಗೆ ಅಡಿಗಡಿಗೂ ಟ್ವಿಸ್ಟ್‌ಗಳು ಎದುರಾಗುತ್ತಲೇ ಇರುತ್ತವೆ. ಏನೋ ಮಾಡಲು ಹೋಗಿ, ಇನ್ನೇನೋ ಆಗುವಂತಹ ಸ್ಥಿತಿಗೆ ನಾಯಕ-ನಾಯಕಿ ಸಿಲುಕುತ್ತಾರೆ. ಆದರೆ, ವಿಪರ್ಯಾಸವೆಂದರೆ, ಆ ಟ್ವಿಸ್ಟ್‌ಗಳನ್ನು ಪ್ರೇಕ್ಷಕ ಬಹುಬೇಗನೇ ಊಹಿಸಬಹುದು! ಫ್ಯಾಮಿಲಿ ಸಿನಿಮಾಗಳಿಗೆ ಫೇಮಸ್ ಆಗಿರುವ ನಿರ್ದೇಶಕ ಶಶಾಂಕ್, ಲವ್ ಯೂ ರಚ್ಚುಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಕರ್ಮ ಯಾರನ್ನೂ ಬಿಡುವುದಿಲ್ಲ ಎಂಬ ಅಂಶದ ಮೇಲೆ ಇಡೀ ಸಿನಿಮಾ ನಿಂತಿದೆ. ಆದರೆ, ಬಿಗಿಯಾದ ನಿರೂಪಣೆ ಇಲ್ಲದೆ ಸೊರಗಿದೆ ‘ರಚ್ಚು’ ಕಥೆ. ಥ್ರಿಲ್ಲರ್ ಸಿನಿಮಾಗಳಿಗೆ ಬೇಕಾದ ಟ್ರೀಟ್‌ಮೆಂಟ್ ನೀಡುವಲ್ಲಿ ನಿರ್ದೇಶಕರು ಇನ್ನಷ್ಟು ಗಮನಹರಿಸಬಹುದಾಗಿತ್ತು. ಮೇಕಿಂಗ್ ಚೆನ್ನಾಗಿದೆ. ಮಣಿಕಾಂತ್ ಸಂಗೀತ ಸಂಯೋಜನೆಯಲ್ಲಿ ‘ಮುದ್ದು ನೀನು..’ ಹಾಡು ಮುದ್ದಾಗಿದೆ. ಹಿನ್ನೆಲೆ ಸಂಗೀತವು ಚೆನ್ನಾಗಿದೆ. ಶ್ರೀಕ್ರೇಜಿಮೈಂಡ್ಸ್ ಛಾಯಾಗ್ರಹಣ ಸೊಗಸಾಗಿದೆ. ಮಲೆನಾಡಿನ ಪರಿಸರವನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಅವರ ಸಂಕಲನಕ್ಕೂ ಈ ಮಾತು ಅನ್ವಯ.
ಕ್ರೈಂ-ಥ್ರಿಲ್ಲರ್ ಸುಳಿವು ನೀಡಿದ ‘ಲವ್ ಯೂ ರಚ್ಚು’ ಟ್ರೇಲರ್
ಕಲಾವಿದರು ಹೇಗೆ ನಟಿಸಿದ್ದಾರೆ?
‘ಲವ್ ಯೂ ರಚ್ಚು’ ಸಿನಿಮಾದಲ್ಲಿ ಜಾಸ್ತಿ ಪಾತ್ರಧಾರಿಗಳಿಲ್ಲ. ಅಜಯ್ ರಾವ್ ಮತ್ತು ರಚಿತಾ ರಾಮ್ ಸುತ್ತವೇ ಹೆಚ್ಚು ಸಾಗುತ್ತದೆ. ಪತ್ನಿಯನ್ನು ಅಪಾರವಾಗಿ ಪ್ರೀತಿಸುವ ಪತಿಯಾಗಿ ಅಜಯ್ ರಾವ್ ಇಷ್ಟವಾಗುತ್ತಾರೆ. ಆಕ್ಷನ್ ಸೀನ್‌ಗಳಲ್ಲಿಯೂ ಖಡಕ್ ಆಗಿ ನಟಿಸಿದ್ದಾರೆ. ರಚಿತಾಗೆ ಇದು ಹೊಸ ಮಾದರಿಯ ಕಥೆ ಎಂದೇ ಹೇಳಬಹದು. ಗೊಂದಲಕ್ಕೆ ಸಿಲುಕಿದ, ಆತಂಕಕ್ಕೆ ಒಳಗಾದ ಪತ್ನಿಯ ಪಾತ್ರದಲ್ಲಿ ಅವರು ಸಹಜಾಭಿನಯ ನೀಡಿದ್ದಾರೆ. ನಟ ಅರು ಗೌಡ ನಿರ್ವಹಿಸಿರುವ ಪಾತ್ರ ಅಚ್ಚರಿ ನೀಡುತ್ತದೆ. ಅಚ್ಯುತ್ ಕುಮಾರ್, ಬಿ. ಸುರೇಶ ಒಂದೆರಡು ದೃಶ್ಯಗಳಿಗಷ್ಟೇ ಸೀಮಿತ. ನಿರ್ದೇಶಕ ರಾಘು ಶಿವಮೊಗ್ಗ ಕಡಿಮೆ ಅವಧಿಯಲ್ಲಿ ಕಾಣಿಸಿಕೊಂಡರೂ, ಕಥೆಗೆ ಹೆಚ್ಚು ಟ್ವಿಸ್ಟ್ ನೀಡುತ್ತಾರೆ. ಅರವಿಂದ್ ರಾವ್ ಖಡಕ್ ಪಾತ್ರವೊಂದಕ್ಕೆ ಜೀವ ತುಂಬಿದ್ದರೆ, ನಟ ಮಹಾಂತೇಶ್ ನಗಿಸಲು ತುಂಬ ಕಷ್ಟಪಟ್ಟಿದ್ದಾರೆ.
ರೊಮ್ಯಾನ್ಸ್ ದೃಶ್ಯದಲ್ಲಿ ನಟಿಸ್ತೀನಿ ಎಂದರೆ ಅಲ್ಲಿ ಏನೋ ವಿಷಯ ಇರತ್ತೆ: ನಟಿ ರಚಿತಾ ರಾಮ್