Karnataka news paper

ಲಂಕಾ ಕದನ ಗೆದ್ದು ಏಷ್ಯಾ ಕಪ್‌ ಮುಡಿಗೇರಿಸಿಕೊಂಡ ಯಂಗ್‌ ಇಂಡಿಯಾ!


ಹೈಲೈಟ್ಸ್‌:

  • ಯುಎಇ ಆತಿಥ್ಯದಲ್ಲಿ ನಡೆಯುತ್ತಿರುವ ಕಿರಿಯರ ಎಷ್ಯಾ ಕಪ್‌ ಟೂರ್ನಿ.
  • ಶ್ರೀಲಂಕಾ ವಿರುದ್ಧದ ಫೈನಲ್‌ ಗೆದ್ದು 8ನೇ ಟ್ರೋಫಿ ಎತ್ತು ಹಿಡಿದ ಯಂಗ್ ಇಂಡಿಯಾ.
  • ಅಂಗ್‌ಕ್ರಿಶ್‌ ಆಕರ್ಷಕ ಅರ್ಧಶತಕ, ಕೌಶಲ್‌ ತಾಂಬೆಗೆ ಮೂರು ವಿಕೆಟ್‌.

ದುಬೈ: ಏಷ್ಯನ್‌ ಕ್ರಿಕೆಟ್‌ನಲ್ಲಿ ಭಾರತದ ಪ್ರಾಬಲ್ಯ ಮುಂದುವರಿದಿದೆ. ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕಿರಿಯರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಯಂಗ್‌ ಇಂಡಿಯಾ ದಾಖಲೆಯ 8ನೇ ಟ್ರೋಫಿ ಎತ್ತಿ ಹಿಡಿದಿದೆ.

ಪಂದ್ಯಕ್ಕೆ ಮಳೆ ಕಾಟ ಎದುರಾದರೂ ಕೂಡ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿದ್ದ ಶ್ರೀಲಂಕಾ ತಂಡವನ್ನು 38 ಓವರ್‌ಗಳಲ್ಲಿ 9 ವಿಕೆಟ್‌ಗೆ 106 ರನ್‌ಗಳ ಅಲ್ಪ ಮೊತ್ತಕ್ಕೆ ನಿಯಂತ್ರಿಸಿತ್ತು. ಡಿಆರ್‌ಎಸ್‌ ಬಳಕೆ ಮಾಡಿ ಭಾರತ ತಂಡಕ್ಕೆ 32 ಓವರ್‌ಗಳಲ್ಲಿ 102 ರನ್‌ಗಳ ಸುಲಭದ ಗುರಿ ನೀಡಲಾಯಿತು.

ಭಾರತ ತಂಡದ ಬೌಲರ್‌ಗಳ ಮಾರಕ ದಾಳಿ ಎದುರು ಪೆವಿಲಿಯನ್‌ ಪರೇಡ್‌ ನಡೆಸಿದ್ದ ಶ್ರೀಲಂಕಾ ತಂಡ 33 ಓವರ್‌ಗಳಲ್ಲಿ 74 ರನ್‌ ಗಳಿಸುವ ಹೊತ್ತಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಬಳಿಕ ಮಳೆ ಕಾರಣ 2 ಗಂಟೆಗಳ ಕಾಲ ಆಟ ಸಾಧ್ಯವಾಗಲಿಲ್ಲ. ನಂತರ 38 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. 9 ವಿಕೆಟ್‌ ಕಳೆದುಕೊಂಡ ಲಂಕಾ 106 ರನ್‌ ಮಾತ್ರವೇ ಕಲೆಹಾಕಿತ್ತು.

‘ವಿಶ್ವದ ಎಲ್ಲಾ ಕಡೆ 20 ವಿಕೆಟ್‌ ಪಡೆಯುವ ತಾಕತ್ತು ಭಾರತ ತಂಡಕ್ಕಿದೆ’ : ಸಚಿನ್‌!

ಭಾರತದ ಪರ ವಿಕಿ ಓಸ್ತ್ವಾಲ್‌ (11ಕ್ಕೆ 3) ಯಶಸ್ವಿ ಬೌಲರ್‌ ಎನಿಸಿದರೆ, ಕೌಶಲ್‌ ತಾಂಬೆ (23ಕ್ಕೆ 2) ಉತ್ತಮ ಸಾಥ್‌ ನೀಡಿದರು. ರಾಜವರ್ಧನ್‌, ರವಿ ಕುಮಾರ್‌ ಮತ್ತು ರಾಜ್‌ ಬಾವಾ ತಲಾ ಒಂದು ವಿಕೆಟ್‌ ಪಡೆದು ಎದುರಾಳಿಯನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಲು ನೆರವಾದರು.

ಸುಲಭದ ಗುರಿ ಬೆನ್ನತ್ತಿದ ಭಾರತ ತಂಡದ ಪರ ಓಪನರ್‌ ಅಂಗ್‌ಕ್ರಿಶ್‌ ರಘುವಂಶಿ 67 ಎಸೆತಗಳಲ್ಲಿ 56 ರನ್‌ಗಳ ಮನಮೋಹಕ ಇನಿಂಗ್ಸ್‌ ಆಡಿ ತಂಡಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು. ಅವರಿಗೆ ಶೇಕ್‌ ರಶೀದ್‌ (49 ಎಸೆತಗಳಲ್ಲಿ ಅಜೇಯ 31 ರನ್‌) ಉತ್ತಮ ಸಾಥ್‌ ಕೊಟ್ಟರು. 21.3 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ ಗುರಿ ಮುಟ್ಟಿದ ಭಾರತ ತಂಡ ಟ್ರೋಫಿ ತನ್ನದಾಗಿಸಿಕೊಂಡಿತು.

ಮುಂದಿನ 2 ಪಂದ್ಯಗಳಲ್ಲಿ ಈ ಇಬ್ಬರು ವೇಗಿಗಳ ಬೆದರಿಕೆ ನಮಗಿದೆ ಎಂದ ಎಲ್ಗರ್‌!

ಭಾರತ ತಂಡ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಲೀಗ್‌ ಅಂತದಲ್ಲಿ ಸೋತಿದ್ದನ್ನು ಬಿಟ್ಟರೆ ಉಳಿದೆಲ್ಲ ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನ ತಂಡ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಎದುರು ನಿರಾಶೆ ಅನುಭವಿಸಿತು. ಯಶ್‌ ಧುಲ್‌ ಸಾರಥ್ಯದ ಭಾರತ ಕಿರಿಯರ ತಂಡ ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಕಿರಿಯರ ವಿಶ್ವಕಪ್‌ ಟೂರ್ನಿಗೆ ಪ್ರಯಾಣ ಬೆಳೆಸಲಿದೆ. ಜ.14ರಂದು ಕಿರಿಯರ ವಿಶ್ವಕಪ್‌ ಶುರುವಾಗಲಿದೆ.

ಸಂಕ್ಷಿಪ್ತ ಸ್ಕೋರ್‌
ಶ್ರೀಲಂಕಾ: 38 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 106 ರನ್‌ (ಸದೀಶ ರಾಜಪಕ್ಷ 14, ರವೀನ್‌ ಡಿ’ಸಿಲ್ವಾ 15, ಯಾಸಿರೊ ರೊಡ್ರಿಗೊ 19*, ಮಹೀಶ ಪತಿರಣ 14; ವಿಕಿ ಓಸ್ತ್ವಾಲ್‌ 11ಕ್ಕೆ 3, ಕೌಶಲ್‌ ತಾಂಬೆ 23ಕ್ಕೆ 2).
ಭಾರತ: 21.3 ಓವರ್‌ಗಳಲ್ಲಿ 1 ವಿಕೆಟ್‌ಗೆ 104 ರನ್‌ (ಅಂಗ್‌ಕ್ರಿಶ್‌ ಅಜೇಯ 56, ಹನೂರ್‌ ಸಿಂಗ್‌ 5, ಶೇಕ್‌ ರಶೀದ್‌ ಅಜೇಯ 31; ಯಾಸಿರೊ ರೊಡ್ರಿಗೊ 12ಕ್ಕೆ 1).



Read more