Karnataka news paper

ಭ್ರಷ್ಟ ರಹಿತ ಆಡಳಿತಕ್ಕೆ ಕರ್ನಾಟಕಕ್ಕೆ ಮಹಿಳಾ ಸಿಎಂ ಅಗತ್ಯ: ಮಹಿಮಾ ಪಟೇಲ್ ಪ್ರತಿಪಾದನೆ


ಹೈಲೈಟ್ಸ್‌:

  • ಮಾಜಿ ಸಿಎಂ ಜೆ. ಎಚ್‌. ಪಟೇಲ್‌ ಸ್ಮರಣೋತ್ಸವ ಕಾರ್ಯಕ್ರಮ
  • ಸಮಾಜವಾದದ ನೆಲೆಯಲ್ಲಿ ಬಂದಿದ್ದ ಪಟೇಲರು ನೇರ ಮತ್ತು ನಿಷ್ಠುರವಾದಿ ವ್ಯಕ್ತಿತ್ವ ಹೊಂದಿದ್ದರು
  • ಅವರ ಸ್ಮರಣೋತ್ಸವ ಕಾರ್ಯಕ್ರಮವು ಸಾಕಷ್ಟು ಚರ್ಚೆಗಳು ಮತ್ತು ಚಿಂತನೆಗೆ ವೇದಿಕೆಯಾಗಲಿವೆ: ಮಹಿಮಾ ಪಟೇಲ್

ಚನ್ನಗಿರಿ (ದಾವಣಗೆರೆ): ರಾಜ್ಯ ಭ್ರಷ್ಟಾಚಾರ ರಹಿತವಾಗಿ ಅಭಿವೃದ್ಧಿ ಆಗಬೇಕಾದರೆ ಕರ್ನಾಟಕಕ್ಕೆ ಮಹಿಳಾ ಮುಖ್ಯಮಂತ್ರಿ ಅವಶ್ಯಕತೆಯಿದ್ದು, ನಾವುಗಳು ಹಿರಿಯರ ಜೊತೆ ಚರ್ಚಿಸುವ ಮೂಲಕ ಅದರ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್‌ ಹೇಳಿದರು.

ಚನ್ನಗಿರಿ ಪಟ್ಟಣದ ರಾಮ ಮನೋಹರ ಲೋಹಿಯಾ ಭವನದಲ್ಲಿ ಜೆ. ಎಚ್‌. ಪಟೇಲ್‌ ಪ್ರತಿಷ್ಠಾನ ಮತ್ತು ಅಭಿಮಾನಿ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿ. ಜೆ. ಎಚ್‌. ಪಟೇಲರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಆಳುತ್ತಿರುವ ಸರಕಾರಗಳು ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ರೈತ ಸಂಘಟನೆಗಳು ಸಂಘಟನಾತ್ಮಕವಾಗಿ ಬಲಾಢ್ಯವಾಗುವ ಮೂಲಕ ಇಂದಿನ ಸರಕಾರಗಳಿಗೆ ತಕ್ಕ ಪಾಠ ಕಲಿಸಬೇಕಿದೆ. ರೈತರು ಮನಸ್ಸು ಮಾಡಿದರೆ ಎಂತಹ ಸರಕಾರಗಳನ್ನು ಕೆಡವಬಹುದಾಗಿದೆ ಎಂದರು.

ನಿಷ್ಠುರವಾದಿ ವ್ಯಕ್ತಿತ್ವ: ಸಮಾಜವಾದದ ನೆಲೆಯಲ್ಲಿ ಬಂದಿದ್ದ ಪಟೇಲರು ನೇರ ಮತ್ತು ನಿಷ್ಠುರವಾದಿ ವ್ಯಕ್ತಿತ್ವ ಹೊಂದಿದ್ದರು. ಅವರ ಸ್ಮರಣೋತ್ಸವ ಕಾರ್ಯಕ್ರಮವು ಸಾಕಷ್ಟು ಚರ್ಚೆಗಳು ಮತ್ತು ಚಿಂತನೆಗೆ ವೇದಿಕೆಯಾಗಲಿವೆ. ಜೆ. ಎಚ್‌. ಪಟೇಲರು ಎಲ್ಲಾ ಜಾತಿ ವರ್ಗದವರನ್ನು ತಮ್ಮವರೆಂದು ಅಪ್ಪಿಕೊಂಡವರಾಗಿದ್ದರು. ತಾಲೂಕಿನ ಪಟೇಲರ ಅಭಿಮಾನಿಗಳು, ಮುಖಂಡರು ಅನ್ಯ ಪಕ್ಷಗಳಿಗೆ ಹೋಗಿದ್ದು, ಮತ್ತೆ ಪಟೇಲರ ಅಭಿಮಾನಿ ಬಳಗದ ಜೊತೆ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೀದಿ ಹೋರಾಟ ಶಾಸನ: ಕಾರ್ಯಕ್ರಮ ಉದ್ಘಾಟಿಸಿ ರಾಜ್ಯ ರೈತ ಸಂಘದ ಎಚ್‌. ಆರ್‌. ಬಸವರಾಜ್‌ ಮಾತನಾಡಿ, ಇಂದಿನ ದಿನಮಾನದಲ್ಲಿ ರಾಜಕಾರಣ ಎನ್ನುವುದು ಒಂದು ರೀತಿಯ ಸೇವೆಯಾಗಿದ್ದು, ರಾಜಕಾರಣಿಯನ್ನು ಹೋರಾಟಗಾರರ ನೆಲೆಯಲ್ಲಿ ನೋಡಬೇಕಿದೆ. ಬೀದಿ ಮೇಲಿನ ಹೋರಾಟಗಳು ಇಂದು ಶಾಸನವಾಗುತ್ತಿಲ್ಲ. ಸರ್ವಾಧಿಕಾರ ಆಡಳಿತದಿಂದ ಜನರು ನೊಂದು ಹೋಗುತ್ತಿದ್ದು, ಬದಲಾವಣೆ ಬಯಸುತ್ತಿದ್ದಾರೆ ಎಂದರು.

ಮಾಜಿ ಸಿಎಂ ಜೆ.ಎಚ್. ಪಟೇಲ್ ಪತ್ನಿ ಸರ್ವಮಂಗಳಮ್ಮ ಪಟೇಲ್ ವಿಧಿವಶ
ಕರ್ನಾಟಕ ರಾಷ್ಟ್ರ ಸಮಿತಿಯ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಮಾತನಾಡಿ, ಇಂದಿನ ರಾಜಕೀಯ ವ್ಯವಸ್ಥೆ ತುಂಬಾ ಹದಗೆಟ್ಟಿದ್ದು, ಇದನ್ನು ರಾಜ್ಯದಿಂದ ತೊಲಗಿಸಿ ಬದಲಾವಣೆ ಮೂಡಿಸಬೇಕಿದೆ. ಹಣ ಹೆಂಡ ಇಲ್ಲದೇ ಮತದಾರರನ್ನು ಪ್ರಜ್ಞಾವಂತರನ್ನಾಗಿ ಮಾಡಿ ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಆರಿಸಿ ಬಂದ ಕೀರ್ತಿ ಮಹಿಮಾ ಪಟೇಲರಿಗೆ ಸಲ್ಲುತ್ತದೆ ಎಂದರು.

ಚನ್ನಗಿರಿ ಹಿರೇಮಠದ ಕೇದಾರಲಿಂಗ ಶ್ರೀ ಶಿವಶಾಂತ ವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ರೈತ ಸಂಘದ ಹಿರಿಯ ಮುಖಂಡ ಲಕ್ಷ್ಮಿ ನಾರಾಯಣ ಗೌಡ, ಲೋಕ ಜನತಂತ್ರ ಪಕ್ಷದ ರಾಜ್ಯಾಧ್ಯಕ್ಷ ಎಂ. ಪಿ. ನಾಡಗೌಡ, ಜಿಪಂ ಮಾಜಿ ಸದಸ್ಯ ಸಿ. ಕೆ. ಎಚ್‌. ಮಹೇಶ್ವರಪ್ಪ, ನಿವೃತ್ತ ಉಪನ್ಯಾಸಕ ಅಬ್ದುಲ್‌ ಸುಭಾನ್‌, ಜೆಡಿಯು ಶಿವಮೊಗ್ಗ ಘಟಕದ ಜಿಲ್ಲಾಧ್ಯಕ್ಷ ದೇವರಾಜ್‌ ಶಿಂಧೆ, ಶಕುಂತಲಾ ಶೆಟ್ಟಿ ಇತರರು ಇದ್ದರು.

ರಾಜಕಾರಣ ಈಗ ಅತಿ ದೊಡ್ಡ ಉದ್ಯಮವಾಗಿದೆ: ಮಹಿಮಾ ಪಟೇಲ್‌
‘ರೈತರು ಸಾಕಷ್ಟು ಕೃಷಿ ಪ್ರಯೋಗ ಮಾಡುತ್ತಿದ್ದು, ತಾವುಗಳು ಬೆಳೆಯುವಂತಹ ಬೆಳೆಗಳಿಗೆ ಹೆಚ್ಚು ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡದೆ ಸಾವಯವ ಗೊಬ್ಬರಗಳ ಬಳಕೆ ಮಾಡಬೇಕು. ಆಸ್ಪತ್ರೆಗಳ ಹಣ ತಗ್ಗಿಸಲು ಸಮಾಜಕ್ಕೆ ವಿಷಮುಕ್ತ ಆಹಾರ ನೀಡಬೇಕು’ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್‌ ಕರೆ ನೀಡಿದರು.

ಹೊಂದಾಣಿಕೆ ಬೆಳೆಸಿಕೊಳ್ಳಿ: ಸಾರ್ವಜನಿಕರ ಹಿತ ದೃಷ್ಟಿಯಿಂದ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಜನರು ಹೊಂದಾಣಿಕೆ ಮನೋಭಾವನೆ ಬೆಳೆಸಿಕೊಳ್ಳಬೇಕು. ಚುನಾವಣೆಯನ್ನು ತಮ್ಮ ಜೀವನದಲ್ಲಿ ಒಂದು ಭಾಗವಾಗಿ ನೋಡ ಬೇಕೇ ಹೊರತು, ಚುನಾವಣೆಯ ಹಿಂದೆ ಸದಾ ಬಿದ್ದಿರಬಾರದು. ರಾಜಕೀಯ ವ್ಯವಸ್ಥೆಯ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದು, ಈ ಬಗ್ಗೆ ಆತ್ಮ ವಿಮರ್ಶೆ ಅಗತ್ಯವಾಗಿದೆ ಎಂದು ಜಿ. ಪಂ. ಮಾಜಿ ಸದಸ್ಯ ತೇಜಸ್ವಿ ಪಟೇಲ್‌ ತಿಳಿಸಿದರು.

ರಾಜ್ಯದಲ್ಲಿ ಪರ್ಯಾಯ ರಾಜಕಾರಣ ಅಗತ್ಯವಿದೆ: ಮಹಿಮಾ ಪಟೇಲ್



Read more