Karnataka news paper

ಮಳೆ ಆರ್ಭಟಕ್ಕೆ ಮತ್ತೆ ತತ್ತರಿಸಿದ ಚೆನ್ನೈ: ಬೆಂಗಳೂರಲ್ಲಿಯೂ ಮೋಡ ಕವಿದ ವಾತಾವರಣ


ಹೈಲೈಟ್ಸ್‌:

  • ಮುಂದಿನ ಎರಡು ದಿನ ಧಾರಾಕಾರ ಮಳೆಯ ಸೂಚನೆ ನೀಡಿದ ಹವಾಮಾನ ಇಲಾಖೆ
  • ಚೆನ್ನೈ, ತಿರುವಳ್ಳೂರು, ಕಾಂಚಿಪುರಂ ಮತ್ತು ಚೆಂಗಲ್ಪೆಟ್ಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್
  • ಗುರುವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ನಗರದ ರಸ್ತೆಗಳು ಜಲಾವೃತ
  • ಚೆನ್ನೈನಲ್ಲಿ ವಿದ್ಯುತ್ ಪ್ರವಹಿಸಿ ಮೂವರು ಸಾವು, ಶಾಲೆ ಮತ್ತು ಕಾಲೇಜುಗಳಿಗೆ ರಜೆ

ಚೆನ್ನೈ: ನಿರಂತರ ಚಂಡಮಾರುಗಳ ಪರಿಣಾಮವಾಗಿ ಸತತವಾಗಿ ಮಳೆಯ ಹೊಡೆತದಿಂದ ತತ್ತರಿಸಿದ್ದ ತಮಿಳುನಾಡಿನಲ್ಲಿ ಈಗ ಮತ್ತೆ ಮಳೆ ಆರ್ಭಟ ತೀವ್ರಗೊಂಡಿದೆ. ಧಾರಾಕಾರ ಮಳೆ ಗಾಳಿ ಉಂಟುಮಾಡಿದ್ದ ಹಾನಿಯಿಂದ ಜನರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದರು. ಈಗ ಗುರುವಾರದಿಂದ ವಿಪರೀತ ಮಳೆಯಾಗುತ್ತಿದ್ದು, ಚೆನ್ನೈ ಹಾಗೂ ಸುತ್ತಮುತ್ತಲಿನ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಡ್ ಘೋಷಣೆ ಮಾಡಲಾಗಿದೆ. ಮಳೆ ಸಂಬಂಧಿಸಿದಂತ ಘಟನೆಗಳಲ್ಲಿ ಗುರುವಾರ ಮೂವರು ಮೃತಪಟ್ಟಿದ್ದಾರೆ. ಮಳೆ ಕಾರಣದಿಂದ ಅನೇಕ ಕಡೆ ಶಾಲೆ ಮತ್ತು ಕಾಲೇಜುಗಳಿಗೆ ಶುಕ್ರವಾರ ರಜೆ ನೀಡಲಾಗಿತ್ತು.

ಚೆನ್ನೈ, ಕಂಚೀಪುರಂ, ತಿರುವಳ್ಳೂರ್ ಮತ್ತು ಚೆಂಗಲ್ಪೆಟ್ಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ 20 ಸೆಂಮೀಗೂ ಅಧಿಕ ಮಳೆಯ ಎಚ್ಚರಿಕೆ ನೀಡಲಾಗಿದೆ. ಮುಂದಿನ ಎರಡು ದಿನ ತಮಿಳುನಾಡು, ಪುದುಚೆರಿ ಮತ್ತು ಕಾರೈಕಲ್‌ ಕರಾವಳಿಗಳಲ್ಲಿ ಭಾರಿ ವಿಪರೀತ ಮಳೆ ಸುರಿಯಲಿದೆ. ಬಳಿಕ ಮಳೆ ತೀವ್ರ ಕಡಿಮೆಯಾಗಲಿದೆ. ಪ್ರಬಲ ಈಶಾನ್ಯ ಮಾರುತಗಳು ತಮಿಳುನಾಡಿನ ಕರಾವಳಿ ಭಾಗದಲ್ಲಿ ದಟ್ಟಗೊಳ್ಳುತ್ತಿವೆ. ಬಂಗಾಳ ಕೊಲ್ಲಿಯ ಶ್ರೀಲಂಕಾ ಕರಾವಳಿಯ ನೈಋತ್ಯ ಭಾಗದಲ್ಲಿ ಚಂಡಮಾರುತದ ರಚನೆ ರೂಪುಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ಐದು ದಿನ ಮಳೆ ಸೂಚನೆ ನೀಡಿದ ಹವಾಮಾನ ಇಲಾಖೆ
ಚೆನ್ನೈ ಹಾಗೂ ಸುತ್ತಮುತ್ತಲೂ ದಟ್ಟನೆಯ ಮೋಡ ಹಾಗೂ ಮಳೆ ಸುರಿಯುತ್ತಿರುವ ಪರಿಣಾಮ ಬೆಂಗಳೂರಿನಲ್ಲಿಯೂ ಶುಕ್ರವಾರ ಮೋಡ ಕವಿದ ವಾತಾವರಣ ಉಂಟುಮಾಡಿದೆ. ಹೀಗಾಗಿ ಚಳಿ ಕೊಂಚ ತಗ್ಗಿದೆ. ಆದರೆ ಮಳೆ ಸೂಚನೆಯನ್ನು ಹವಾಮಾನ ಇಲಾಖೆ ನೀಡಿಲ್ಲ.

ತಮಿಳುನಾಡಿನಲ್ಲಿ ಮಳೆ ಆರ್ಭಟ ಇದೇ ರೀತಿ ಮುಂದುವರಿದರೆ ಶನಿವಾರ ಕೂಡ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಸಾಧ್ಯತೆ ಇದೆ. ಗುರುವಾರದಿಂದ ಸುರಿಯುತ್ತಿರುವ ಮಳೆಯಿಂದ ಚೆನ್ನೈ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಮುಖ ರಸ್ತೆಗಳು ನೀರಿನಿಂದ ತುಂಬಿಕೊಂಡಿವೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಬಹಳ ಪರದಾಡುವಂತಾಗಿದೆ. ಚೆನ್ನೈನಲ್ಲಿ ಮಳೆ ಕಾರಣ ವಿದ್ಯುದಾಘಾತದಿಂದ ಇಬ್ಬರು ಮಹಿಳೆಯರು ಮತ್ತು ಒಬ್ಬ ಬಾಲಕ ಮೃತಪಟ್ಟಿದ್ದಾರೆ.

ನೀರು ತುಂಬಿಕೊಂಡಿರುವುದರಿಂದ ಮೂರು ಸಬ್‌ವೇಗಳನ್ನು ಮುಚ್ಚಲಾಗಿದೆ. ನಗರದಲ್ಲಿ ವಾಹನ ಸಂಚಾರ ತೀರಾ ಮಂದಗತಿಯಲ್ಲಿದೆ. ಜಲಾವೃತ ಸ್ಥಳಗಳಿಂದ ನೀರು ಹೊರತೆಗೆಯಲು 145ಕ್ಕೂ ಅಧಿಕ ಬೃಹತ್ ಪಂಪ್‌ಗಳನ್ನು ಬಳಸಲಾಗುತ್ತಿದೆ ಎಂದು ಚೆನ್ನೈ ಮಹಾನಗರ ಪಾಲಿಕೆ ಆಯುಕ್ತ ಗಗನ್‌ದೀಪ್ ಸಿಂಗ್ ಬೇಡಿ ತಿಳಿಸಿದ್ದಾರೆ. ಬಸ್ ಹಾಗೂ ಖಾಸಗಿ ವಾಹನಗಳ ಸಂಚಾರಕ್ಕೆ ತೀವ್ರ ಅಡ್ಡಿಯಾಗಿರುವುದರಿಂದ ಪ್ರಯಾಣಿಕರ ಅನುಕೂಲತೆಗಾಗಿ ಮೆಟ್ರೋ ಸೇವೆಯನ್ನು ರಾತ್ರಿ 12 ಗಂಟೆಯವರೆಗೂ ವಿಸ್ತರಿಸಲಾಗಿದೆ.

ಕರ್ನಾಟಕದ ಕಾಶ್ಮೀರವಾದ ಕಾರವಾರ! ಉತ್ತರ ಕನ್ನಡದಲ್ಲಿ ವಾರದಿಂದ ಮೈಕೊರೆಯುವ ಚಳಿ

ಚೆನ್ನೈನ ಎಂಆರ್‌ಸಿ ನಗರದಲ್ಲಿ 17.65 ಸೆಂಮೀ ಮಳೆಯಾಗಿದೆ. ನಂಗಂಬಕ್ಕಂನಲ್ಲಿ 14.65 ಸೆಂಮೀ ಮತ್ತು ಮೀನಾಂಬಕ್ಕಂನಲ್ಲಿ 10 ಸೆಂಮೀ ಮಳೆ ಸುರಿದಿದೆ. ಮುಂದಿನ ಮೂರು ದಿನಗಳ ಕಾಲ ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಭಾಗದಲ್ಲಿ ಕೂಡ ಮಳೆಯಾಗಲಿದೆ ಎಂದು ಐಎಂಡಿ ಸೂಚನೆ ನೀಡಿದೆ.

ಚೆನ್ನೈನಲ್ಲಿ 2015ರಲ್ಲಿ ಒಟ್ಟು 210 ಸೆಂಮೀ ಮಳೆ ದಾಖಲಾಗಿತ್ತು. ಆದರೆ 2021ರಲ್ಲಿ 223 ಸೆಂಮೀ ಮಳೆ ಸುರಿದಿದೆ. ಗುರುವಾರದಿಂದ ಸತತ ಏಳು ಗಂಟೆ ಎಡೆಬಿಡದೆ ವರುಣ ಆರ್ಭಟಿಸಿದ್ದಾನೆ.



Read more