ಹೈಲೈಟ್ಸ್:
- ನ್ಯೂಜಿಲೆಂಡ್ ರಾಜಧಾನಿ ಆಕ್ಲೆಂಡ್‌ನಲ್ಲಿ ಪಟಾಕಿ ವೈಭವ
- ವರ್ಣರಂಜಿತವಾಗಿ ಹೊಸ ವರ್ಷಕ್ಕೆ ಸ್ವಾಗತ
- 2021ರಲ್ಲಿ ಸುಮಾರು 128 ದಿನಗಳ ಕಾಲ ಲಾಕ್‌ಡೌನ್‌ನಲ್ಲಿದ್ದ ಆಕ್ಲೆಂಡ್ ನಾಗರಿಕರು
ನ್ಯೂಜಿಲೆಂಡ್ ರಾಜಧಾನಿ ಆಕ್ಲೆಂಡ್‌ನಲ್ಲಿ ಮಧ್ಯರಾತ್ರಿ 12 ಗಂಟೆ ಆಗುತ್ತಿದ್ದಂತೆಯೇ ಪಟಾಕಿಗಳನ್ನು ಸಿಡಿಸಿ ವರ್ಣರಂಜಿತವಾಗಿ ಹೊಸ ವರ್ಷವನ್ನು ಸ್ವಾಗತಿಸಲಾಯ್ತು.
ಆಕ್ಲೆಂಡ್ ನಗರದ ಕೇಂದ್ರ ಭಾಗದಲ್ಲಿ ಶುಕ್ರವಾರ ಮಧ್ಯರಾತ್ರಿ ಹೊಸ ವರ್ಷವನ್ನು ಸ್ವಾಗತಿಸಲು ಭರ್ಜರಿ ದೀಪಾಲಂಕಾರ ಮಾಡಲಾಗಿತ್ತು. 2021ರಲ್ಲಿ ಸುಮಾರು 128 ದಿನಗಳ ಕಾಲ ಲಾಕ್‌ಡೌನ್‌ನಲ್ಲಿದ್ದ ಆಕ್ಲೆಂಡ್ ನಾಗರಿಕರು, 2022ರಲ್ಲಿ ಆ ಪರಿಸ್ಥಿತಿ ಬಾರದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
ಆಕ್ಲೆಂಡ್ ನಗರದ ಹಾರ್ಬರ್ ಬ್ರಿಡ್ಜ್, ಸ್ಕೈ ಟವರ್ ಹಾಗೂ ಆಕ್ಲೆಂಡ್ ಯುದ್ಧ ಸ್ಮಾರಕ ಮ್ಯೂಸಿಯಂನಲ್ಲಿ ದೀಪಾಲಂಕಾರ ಮಾಡಲಾಗಿತ್ತು.
ಆದ್ರೆ, ಪ್ರತಿ ವರ್ಷ ನಡೆಯುತ್ತಿದ್ದ ಸಾಂಪ್ರದಾಯಿಕ ದೀಪೋತ್ಸವ ಹಾಗೂ ಪಟಾಕಿ ಸಿಡಿತ ಕಾರ್ಯಕ್ರವನ್ನು ಈ ವರ್ಷ ರದ್ದು ಮಾಡಲಾಗಿತ್ತು. ಈ ಕಾರ್ಯಕ್ರಮದ ವೇಳೆ ಹೆಚ್ಚಿನ ಜನದಟ್ಟಣೆ ಸೇರುವ ಹಿನ್ನೆಲೆಯಲ್ಲಿ ಸರ್ಕಾರ ಮುನ್ನೆಚ್ಚರಿಕೆ ವಹಿಸಿತ್ತು. ಜನರು ತಮ್ಮ ಮನೆಗಳಿಂದಲೇ ದೀಪಾಲಂಕಾರದ ಸೊಬಗು ಕಣ್ತುಂಬಿ ಕೊಳ್ಳಲಿ ಎಂದು ನೇರಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.
ನ್ಯೂಜಿಲೆಂಡ್ ಬಳಿಕ ಜಪಾನ್, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಸಿಂಗಾಪುರ ಹಾಗೂ ಮಲೇಷ್ಯಾ ರಾಷ್ಟ್ರಗಳು ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಲಿವೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್‌ನಲ್ಲಿ ಕೋವಿಡ್ ನಿಯಮಾವಳಿಗಳನ್ನು ಕೊಂಚ ಸಡಿಲಿಸಲಾಗಿತ್ತು. ಓಮಿಕ್ರಾನ್ ಸೋಂಕಿನ ಭೀತಿಯ ನಡುವಲ್ಲೂ ನಿರ್ಬಂಧಗಳನ್ನು ಸಡಿಲಿಕೆ ಮಾಡಿ ಜನರು ಸಂಭ್ರಮಾಚರಣೆಯಲ್ಲಿ ತೊಡಗಲು ಅನುವು ಮಾಡಿಕೊಡಲಾಗಿತ್ತು.
ಈ ನಡುವೆ, ನ್ಯೂಜಿಲೆಂಡ್ ದೇಶದಲ್ಲಿ ಈವರೆಗೆ 49 ಕೊರೊನಾ ಪ್ರಕರಣಗಳಿದ್ದು, ಓಮಿಕ್ರಾನ್ ಪ್ರಕರಣ ಈವರೆಗೂ ನ್ಯೂಜಿಲೆಂಡ್ ದೇಶವನ್ನು ಬಾಧಿಸಿಲ್ಲ. ಆದ್ರೆ, ಹೊಸ ವರ್ಷಾಚರಣೆ ಮುನ್ನ 49 ಕೇಸ್‌ಗಳು ಪತ್ತೆಯಾಗಿರೋದು ಅಲ್ಲಿನ ಆಡಳಿತಕ್ಕೆ ಕೊಂಚ ಸವಾಲಾಗಿ ಪರಿಣಮಿಸಿದೆ.